ಪುಂಜಾಲಕಟ್ಟೆ: ನಾವು ಆರಾಧಿಸುವ ದೈವ-ದೇವರು, ತಂದೆ- ತಾಯಿ ಸೇವೆಯಿಂದ ವಿಶೇಷ ಪುಣ್ಯ ಪ್ರಾಪ್ತಿಯಾಗಲಿದ್ದು, ಅದೇ ನಮ್ಮನ್ನು ಜೀವನದಲ್ಲಿ ದೊಡ್ಡ ಸ್ಥಾನಕ್ಕೇರಿಸುತ್ತದೆ ಎಂದು ಮುಂಬಯಿನ ಭವಾನಿ ಫೌಂಡೇಶನ್ ಸಂಸ್ಥಾಪಕ ಕುಸುಮೋಧರ ಡಿ. ಶೆಟ್ಟಿ ಹೇಳಿದರು.
ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆಯ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿ ಯಾಗಿದ್ದ ಅವರು, ವಿವಿಧ ಸಂಘ- ಸಂಸ್ಥೆ ಗಳು ಕ್ಷೇತ್ರಕ್ಕೆ ನೀಡಿದ ದೇಣಿಗೆ ಚೆಕ್ಕನ್ನು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಿ ಮಾತನಾಡಿದರು.
ನಾವು ಮಾಡುವ ಕೆಲಸದಲ್ಲಿ ನಂಬಿಕೆ ಯಿಟ್ಟು ಮುಂದುವರಿದರೆ ಯಶಸ್ಸು ಸಾಧ್ಯವಾಗುತ್ತದೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ನಾವು ಯಾರಿಗೂ ಒತ್ತಡ ಹೇರಬೇಕಿಲ್ಲ. ದೇವರು ಎಲ್ಲರಿಗೂ ಮನಸ್ಸು ಕೊಟ್ಟು ಸಹಕಾರ ನೀಡುವಂತೆ ಪ್ರೇರೇಪಿಸುತ್ತಾನೆ. ಸರಪಾಡಿ ಎಂಬ ಊರಿನ ಮೇಲೆ ತನಗೆ ವಿಶೇಷ ಅಭಿಮಾನವಿದ್ದು, ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭ ಸರಪಾಡಿ ಯುವಕ ಮಂಡಲವು ನಗರ ಭಜನೆಯಲ್ಲಿ ಸಂಗ್ರಹಿ ಸಿದ ಸುಮಾರು 8 ಲಕ್ಷ ರೂ.ಗಳ ಚೆಕ್ ಹಾಗೂ ಬೀಯಪಾದೆ ಆಶೀರ್ವಾದ ಗೆಳೆಯರ ಬಳಗದ 35 ಸಾವಿರ ರೂ.ಗಳ ಚೆಕ್ಕನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಂ.ಎಸ್. ಶೆಟ್ಟಿ ಸರಪಾಡಿ ಅವರಿಗೆ ಹಸ್ತಾಂತರಿಸಲಾಯಿತು.
ವಾಸ್ತುಶಿಲ್ಪಿ ಮಹೇಶ್ ಭಟ್ ಮುನಿಯಂಗಳ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಮೊದಲಾದವರಿದ್ದರು.