ಕಾಪು: ಭಗವಂತನ ಅನುಗ್ರಹವಿದ್ದರೆ ಮನುಷ್ಯನ ಬದುಕಿನಲ್ಲಿ ಸಕಲ ಅಭೀಷ್ಠಗಳೂ ಈಡೇರುತ್ತವೆ. ದೇವರ ಇಚ್ಛೆ ಮತ್ತು ಮನುಷ್ಯರ ಪ್ರಾಮಾಣಿಕ ಪ್ರಯತ್ನಗಳು ಒಗ್ಗೂಡಿ ದಾಗ ಸರ್ವತ್ರ ಏಳಿಗೆ ಉಂಟಾಗುತ್ತದೆ ಎಂದು ಶ್ರೀ ಕಾಶೀ ಮಠಾಧೀಶರಾದ ಶ್ರೀ ಸಂಯಮೀಂದ್ರತೀರ್ಥ ಶ್ರೀಪಾದರು ಹೇಳಿದರು.
ಅವರು ಮಂಗಳವಾರ ಕಾಪು ಕೊಂಕಣಿಮಠ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಥಮ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಸಹಸ್ರ ಕುಂಭಾಭಿಷೇಕ ನೆರವೇರಿಸಿ ಆಶೀರ್ವಚನ ನೀಡಿದರು.
ಭಗವಂತ ಎಲ್ಲರಿಗೂ ಅವಕಾಶಗಳನ್ನು ಒದಗಿಸುತ್ತಾನೆ. ಅದನ್ನು ನಾವು ಧನಾತ್ಮಕವಾಗಿ ಬಳಸಿ ಕೊಳ್ಳಬೇಕು ಎಂದರು.
ಕಾಪು ವೆಂಕಟರಮಣ ದೇವ ಸ್ಥಾನದ ಜೀರ್ಣೋದ್ಧಾರ ಸಮಿತಿ ಮತ್ತು ಆಡಳಿತ ಮಂಡಳಿ ವತಿಯಿಂದ ಕಾಶೀ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು. ಪ್ರಧಾನ ಅರ್ಚಕ ವೇ| ಮೂ| ಕಮಲಾಕ್ಷ ರಮಾನಾಥ ಭಟ್ ಮತ್ತು ಮಂಗಳೂರಿನ ವೇ| ಮೂ| ಯೋಗೀಶ್ ಪ್ರಭಾಕರ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ- ವಿಧಾನಗಳು ಜರಗಿದವು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗೋಕುಲ್‌ದಾಸ್ ಆನಂದ್ರಾಯ ಶೆಣೈ, ಪ್ರಧಾನ ಕಾರ್ಯದರ್ಶಿ ಸದಾಶಿವ ರಾಧಾಕೃಷ್ಣ ಕಾಮತ್, ಕೋಶಾಧಿಕಾರಿ ಲಕ್ಷ್ಮೀನಾರಾಯಣ ಪುರುಷೋತ್ತಮ ನಾಯಕ್, ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಗೋಕುಲ್‌ದಾಸ್ ಶೆಣೈ, ಹಿರಿಯರಾದ ಸದಾನಂದ ಮುಕುಂದ ನಾಯಕ್ ಮಂಗಳೂರು, ಹರಿ ಭಟ್ ಕಾಪು ಮೊದಲಾದವರು ಉಪಸ್ಥಿತರಿದ್ದರು.
ದೇಗುಲದ ಮಾಜಿ ಆಡಳಿತ ಮೊಕ್ತೇಸರ ಕೆ. ಶ್ರೀಧರ ಆನಂದ್ರಾಯ ಶೆಣೈ ಪ್ರಸ್ತಾವನೆಗೈದರು.