Advertisement
ಸಪ್ತ ನದಿಗಳ ನಾಡು ಗೋಕಾಕ್ ಎಂದಾಕ್ಷಣ ಎಲ್ಲರ ಕಣ್ಮುಂದೆ ಬರುವುದು ಅಲ್ಲಿರುವ ಜಲಪಾತ. ಪ್ರವಾಸಿಗರ ನೆಚ್ಚಿನ ತಾಣ ಗೋಕಾಕ್ ಜಲಪಾತದ ಜೊತೆಗೆ ಇನ್ನೂ ಸಾಕಷ್ಟು ಜಲಧಾರೆಗಳು ಇಲ್ಲಿವೆ. ಅವುಗಳಲ್ಲಿ ಗೊಡಚಿನ ಮಲ್ಕಿ ಜಲಪಾತ ಕೂಡ ಒಂದು.
Related Articles
Advertisement
ಇಲ್ಲಿನ ಬಂಡೆಗಲ್ಲುಗಳ ಮೇಲೆ ಎಚ್ಚರದಿಂದ ಹೆಜ್ಜೆ ಇಡಬೇಕು. ಆಯ ತಪ್ಪಿದರೆ ಅಪಾಯ. ಮಕ್ಕಳು ಜತೆಗಿದ್ದರೆ ಹೆಚ್ಚು ಕಾಳಜಿ ಇರಲಿ. ನದಿಯಲ್ಲೇ ಒಂದೂವರೆ ಕಿ. ಮೀ. ದೂರದ ವರೆಗೆ ನಡೆದು ಹೋಗಬಹುದು. ಅಲ್ಲಿನ ಸೌಂದರ್ಯ ನಿಮ್ಮ ನಡಿಗೆಯ ಆಯಾಸವನ್ನೆಲ್ಲ ಮರೆಸಿಬಿಡುತ್ತದೆ. ನೀರು ಧುಮುಕುವ ದೃಶ್ಯ ರೋಮಾಂಚನಕಾರಿ. ಮಳೆಗಾಲದಲ್ಲಿ ಇಂಥ ಜಲಪಾತಗಳನ್ನು ಕಷ್ಟಪಟ್ಟಾದರೂ ನೋಡಬೇಕು.
ದೊಡ್ಡ ತೆರೆದ ಕಣಿವೆಯ ನಡುವೆ ಭೋರ್ಗರಿಸುವ ಜಲಪಾತದ ದೃಶ್ಯ ವೈಭವ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ರಸ್ತೆಯ ಮೂಲಕ ಪ್ರವೇಶಿಸಬಹುದಾದರೂ, ಗೊಡಚಿನಮಲ್ಕಿ ಹಳ್ಳಿಯಿಂದ ಜಲಪಾತದವರೆಗೆ ಕೆಲವು ಕಿಲೋಮೀಟರ್ ಚಾರಣ ಕೈಗೊಳ್ಳುವುದು ಜನಪ್ರಿಯ ಚಟುವಟಿಕೆಯಾಗಿದೆ.
ಜುಲೈ ನಿಂದ ಅಕ್ಟೋಬರ್ ಗೊಡಚಿನಮಲ್ಕಿ ಜಲಪಾತವನ್ನು ಭೇಟಿ ಮಾಡಲು ಉತ್ತಮ ಸಮಯವಾಗಿದೆ. ಏಕೆಂದರೆ ಈ ಅವಧಿಯಲ್ಲಿ ನೀರಿನ ಮಟ್ಟ ಹೆಚ್ಚಿರುತ್ತದೆ ಮತ್ತು ದೃಶ್ಯ ವೈಭವ ಗರಿಷ್ಟ ಮಟ್ಟದಲ್ಲಿರುತ್ತದೆ.
ಇನ್ನು ಈ ಜಲಪಾತದ ಹತ್ತಿರ ಗೋಕಾಕ ಜಲಪಾತ (14 ಕಿ.ಮೀ) ಮತ್ತು ಹಿಡ್ಕಲ್ ಜಲಾಶಯ (22 ಕಿ.ಮೀ) ಭೇಟಿಕೊಡಬಹುದಾದ ಹತ್ತಿರದ ಪ್ರವಾಸಿ ಸ್ಥಳಗಳಾಗಿವೆ.
ತಲುಪುವುದು ಹೇಗೆ:
ಗೊಡಚಿನಮಲ್ಕಿ ಜಲಪಾತ ಬೆಂಗಳೂರಿನಿಂದ 538 ಕಿ.ಮೀ ಮತ್ತು ಜಿಲ್ಲಾ ಕೇಂದ್ರ ಬೆಳಗಾವಿಯಿಂದ 51 ಕಿ.ಮೀ. ದೂರದಲ್ಲಿದೆ. ಬೆಳಗಾವಿ ಹತ್ತಿರದ ವಿಮಾನ ನಿಲ್ದಾಣ ಮತ್ತು ಪಚಾಪುರ (9 ಕಿ.ಮೀ ದೂರದಲ್ಲಿ) ಹತ್ತಿರದ ರೈಲು ನಿಲ್ದಾಣವಾಗಿದೆ. ಗೊಡಚಿನಮಲ್ಕಿ ಜಲಪಾತವನ್ನು ತಲುಪಲು ಬೆಳಗಾವಿ ಅಥವಾ ಪಚಾಪುರದಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದಾಗಿದೆ.
ವಸತಿ: ಗೋಕಾಕ್ (18 ಕಿ.ಮೀ) ನಲ್ಲಿ ಹೋಟೆಲ್‌ಗಳು ಮತ್ತು ಹೋಂ-ಸ್ಟೇಗಳು ಲಭ್ಯವಿದೆ. ಬೆಳಗಾವಿ ನಗರ (51 ಕಿ.ಮೀ) ಹೆಚ್ಚಿನ ಆಯ್ಕೆಗಳನ್ನು ಹೊಂದಿದೆ.