Advertisement
ಅಯ್ಯಪ್ಪನಜೆಡ್ಡು ಪ್ರದೇಶದ 10 ಮನೆಗಳ ಜನರ ಪರಿಸ್ಥಿತಿ ಶೋಚನಿಯವಾಗಿದೆ. ಆದರೆ, ಹೊಸಂಗಡಿ ಮತ್ತು ಸಿದ್ದಾಪುರ ಸ್ಥಳೀಯಾಡಳಿತಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಮಾತ್ರ ಇದು ಅರ್ಥವಾಗುತ್ತಿಲ್ಲ. ಎಷ್ಟು ಅರ್ಜಿ, ಮನವಿ ಸಲ್ಲಿಸಿದರೂ ಅಷ್ಟೇ ಎಂಬಂತಾಗಿದೆ. ಚುನಾವಣೆ ಬಂದಾಗ ಮಾತ್ರ ತಾ ಮುಂದು ತಾ ಮುಂದು ಎಂದು ಮುಂದೆ ಬರುತ್ತಾರೆ. ತಮ್ಮ ಸರಕಾರ ಬಂದ ತಕ್ಷಣ ಈ ಪ್ರದೇಶಕ್ಕೆ ಸೇತುವೆ ಫಿಕ್ಸ್ ಎಂದು ಹೇಳಿ ಹೋಗುತ್ತಾರೆ. ಆದರೆ, ಎಷ್ಟು ಸರಕಾರ ಬಂದರೂ, ಸರಕಾರಗಳೇ ಉರುಳಿದರೂ ಕಾಲು ಸಂಕವಾಗಲೀ, ಸೇತುವೆಯಾಗಲೀ ಆಗಲೇ ಇಲ್ಲ.
Related Articles
Advertisement
ಇಲ್ಲಿನ ನಿವಾಸಿಗಳಿಗೆ ಕಾಲು ಸಂಕ ಎಷ್ಟು ಅವಶ್ಯಕ ಎಂದರೆ, ಒಂದು ವೇಳೆ ಕಾಲು ಸಂಕ ಇಲ್ಲದೆ ಇದ್ದರೆ ಪಕ್ಕದ ತೋಟಕ್ಕೆ ಹೋಗಲೂ ಅವರು ಆರು ಕಿ.ಮೀ. ಸುತ್ತಿ ಬಳಸಬೇಕು. 6 ಕಿ.ಮೀ ಸುತ್ತುವರಿದು ತಮ್ಮ ತೋಟಗಳಿಗೆ, ಭತ್ತದ ಗದ್ದೆಗೆ ಕೃಷಿ ಉಪಕರಣಗಳನ್ನು ಒಯ್ಯಬೇಕು.
ಸ್ವಲ್ಪವೇ ದೂರದಲ್ಲಿರುವ ಪೇಟೆಯನ್ನು ತಲುಪಲು ಅವರು ಆರು ಕಿ.ಮೀ. ದಾರಿಯನ್ನು ಸವೆಸಬೇಕು.
ಸುತ್ತುಬಳಸಿ ಬರುವ ಮಾರ್ಗವು, ಕಾಡು ಪ್ರದೇಶದ ಮಾರ್ಗವಾಗಿದೆ. ಈ ಮಾರ್ಗದಲ್ಲಿ ಚಿರತೆ, ಕಾಡುಕೋಣಗಳು ಮತ್ತು ಕಾಡು ಹಂದಿಗಳು ಅಧಿಕವಾಗಿದ್ದು, ಆಗಾಗ ಜನರ ಮೇಲೆ ದಾಳಿ ಕೂಡ ಮಾಡುತ್ತಿವೆ.
ಸಣ್ಣಹೊಳೆಗೆ ಕಿರು ಸೇತುವೆ ನಿರ್ಮಿಸಿದರೆ, ದಾರಿ ಹತ್ತಿರವಾಗುತ್ತದೆ. ಕಾಡುಪ್ರಾಣಿಗಳ ಭಯವು ತಪ್ಪುತ್ತದೆ.
ಇಲ್ಲೂ ಇದೆ ಕಾಲು ಎಳೆವ ರಾಜಕೀಯ!
ಮಾಜಿ ಶಾಸಕ ಸುಕುಮಾರ ಶೆಟ್ಟಿ ಅವರು ಸಣ್ಣ ಸೇತುವೆ ಮಂಜೂರು ಮಾಡಿದ್ದರೂ ಸ್ಥಳೀಯಾಡಳಿತ ರಾಜಕೀಯದಿಂದ ನಿರ್ಮಿಸಬೇಕಾಗಿದ್ದ ಸ್ಥಳದಲ್ಲಿ ಸೇತುವೆ ಮಾಡದೇ, ಅನತಿ ದೂರದಲ್ಲಿ ನಿರ್ಮಿಸಿದರು ಎಂಬ ಆರೋಪವಿದೆ. ಪಿಲ್ಲರ್‌ಗಳಿಗೆ ಸ್ಲಾಬ್ ಮಾತ್ರ ಹಾಕಿ ಹಾಗೇ ಬಿಟ್ಟ ಪರಿಣಾಮ ಸೇತುವೆ ಅಪೂರ್ಣಗೊಂಡಿದೆ. ಪಿಲ್ಲರ್ ಅಕ್ಕ ಪಕ್ಕ ಮಣ್ಣು ತುಂಬಿಸಿ, ಸೇತುವೆಗೆ ಸಂಪರ್ಕ ಕಲ್ಪಿಸಿಲ್ಲ. ಈ ಸೇತುವೆ ನಿರ್ಮಿಸಿದರೂ, ಅಯ್ಯಪ್ಪನಜೆಡ್ಡು ಜನತೆಗೆ ಪ್ರಯೋಜನವಾಗದಂತಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಒಂದು ಕಿರುಸೇತುವೆ ಮಾಡಿದರೆ…
ಒಂದೂವರೆ ಕಿ.ಮೀ ದೂರದ ಹೆನ್ನಾಬೈಲಿನ ಬಳಿ ರಾಜ್ಯ ಹೆದ್ದಾರಿಗೆ ಬಂದು ಇತರ ಪ್ರದೇಶಕ್ಕೆ ಹೋಗಲು ಅನುಕೂಲವಾಗುತ್ತದೆ.
ಅಯ್ಯಪ್ಪನಜೆಡ್ಡು, ಬೆಚ್ಚಳ್ಳಿ ಪ್ರದೇಶದ ಜನರಿಗೆ ಹೊಸಂಗಡಿ ಪೇಟೆ ಹತ್ತಿರವಾಗಲಿದೆ.
ಈಗ ಅಯ್ಯಪ್ಪನಜೆಡ್ಡು ಪ್ರದೇಶದ ಜನರು ತಮ್ಮ ವಾಹನವನ್ನು ಸಣ್ಣಹೊಳೆಯ ಮತ್ತೂಂದು ಬದಿಯಲ್ಲಿಟ್ಟು, ಕಾಲು ಸಂಕ ದಾಟಿಕೊಂಡು ತಮ್ಮ ಮನೆಗೆ ಹೋಗುತ್ತಾರೆ. ಅಂಥವರಿಗೆ ಕಾಲು ಸಂಕವೇ ಆಸರೆ
ಸಣ್ಣಹೊಳೆಗೆ ಕಿರು ಸೇತುವೆ ನಿರ್ಮಾಣದಿಂದ ಇಲ್ಲಿಯ ಜನರ, ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ ನಿತ್ಯದ ಬವಣೆ ತಪ್ಪುತ್ತದೆ.
“ರೋಗಿಗಳನ್ನು ಹೊತ್ತುಕೊಂಡು ಹೋಗುವ ಸ್ಥಿತಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಸೇತುವೆ ನಿರ್ಮಿಸಿಕೊಡಿ. ಅನಾರೋಗ್ಯ ಪೀಡಿತರನ್ನು ಜೋಲಿಯಲ್ಲಿ ಹೊತ್ತುಕೊಂಡು ಹೋಗುವ ಸ್ಥಿತಿ ಇದೆ.“
– ದಿವಾಕರ ನಾಯಕ್, ಅಯ್ಯಪ್ಪನಜೆಡ್ಡು ನಿವಾಸಿ
– ಸತೀಶ ಆಚಾರ್ ಉಳ್ಳೂರು