ಲಿಂಗಸುಗೂರು: ಅಲ್ಲಲ್ಲಿ ಕಿತ್ತು ಹೋದ ಲೈನಿಂಗ್, ಸರ್ವೀಸ್ ರಸ್ತೆ ಕಾಣದಂತ ಸ್ಥಿತಿಯಲ್ಲಿ ಬೆಳೆದ ಮುಳ್ಳಿನ ಗಿಡಗಳು ಇದು ನಾರಾಯಣಪುರ ಬಲದಂಡೆ ಮತ್ತು ರಾಂಪುರ ಏತ ನೀರಾವರಿ ಯೋಜನೆಗಳ ಕಾಲುವೆಗಳ ದುಸ್ಥಿತಿ.
ಕೃಷ್ಣ ಮೇಲ್ದಂಡೆ ಯೋಜನೆಯ ಸ್ಕೀಂ ಎ ಅಡಿಯಲ್ಲಿ ಯೋಜನೆಯಡಿಯಲ್ಲಿ ನಾರಾಯಣಪುರ ಬಲದಂಡೆ ನಾಲೆ 0.00 ಕಿಮೀ ದಿಂದ 95 ಕಿಮೀ ಕಾಮಗಾರಿ ಪೂರ್ಣಗೊಳಿಸಲಾಯಿತು. ರಾಯಚೂರು, ಲಿಂಗಸುಗೂರು ಹಾಗೂ ದೇವದುರ್ಗ ತಾಲೂಕುಗಳ 84 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತದೆ. ಜಡಿ ಶಂಕರಲಿಂಗ ಏತ ನೀರಾವರಿ (ರಾಂಪುರ) ಯೋಜನೆ ಆರಂಭಿಸಿ ತಾಲೂಕಿನ ಸುಮಾರು 20.235 ಹೆಕ್ಟೇರ್ ಭೂ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ.
ನಾರಾಯಣಪುರ ಬಲದಂಡೆ ಹಾಗೂ ರಾಂಪುರ ಯೋಜನೆಯ ಮುಖ್ಯ ಹಾಗೂ ವಿತರಣಾ ನಾಲೆಗಳ ಎರಡು ಬದಿಯ ಲೈನಿಂಗ್ ಹಾಳಾಗಿದೆ. ಸರ್ವೀಸ್ ರಸ್ತೆಗಳಲ್ಲಿ ಬೋಂಗಾ, ಮುಳ್ಳಿನ ಕಂಟಿಗಳು ಬೆಳೆದು ನಾಲೆಗಳೇ ಕಾಣದಂತಾಗಿದೆ. ಇದರಿಂದ ನಾಲೆಗಳು ಒಡೆದು ಹೋಗುವುದಕ್ಕೆ ಕಾರಣವಾಗಿದೆ. ಕೆಲವೊಂದು ನಾಲೆಗಳಲ್ಲಿ ಹೂಳು ತುಂಬಿ ನಾಲೆ ಯಾವುದೋ ರಸ್ತೆ ಯಾವುದೋ ಎಂದು ವ್ಯತ್ಯಾಸ ತಿಳಿಯದಾಗಿದೆ.
ಹೊಲಗಾಲುವೆ ಸಂಪೂರ್ಣ ಕಾಣದಂತೆ ಮಣ್ಣನಿಂದ ಮುಚ್ಚಿಹೋಗಿದ್ದು, ಇದರಿಂದ ಕೊನೆ ಭಾಗದ ರೈತರ ಜಮೀನಿಗೆ ನೀರು ಹರಿಯುವುದು ದೂರದ ಮಾತಾಗಿದೆ. ರೈತರಲ್ಲಿ ಆಂತಕ ಮನೆ ಮಾಡಿದೆ. ಪ್ರತಿ ವರ್ಷ ನಾಲೆಗಳ ನಿರ್ವಹಣೆಯಂತೆ ದುರಸ್ತಿಗಾಗಿ ಸಾಕಷ್ಟು ಹಣ ಖರ್ಚು ಮಾಡುವ ಬದಲು ಸರಕಾರ ಇದಕ್ಕಾಗಿ ಆಧುನೀಕರಣ ಮಾಡುವುದು ಅಗತ್ಯವಾಗಿದೆ.
ಇಚ್ಛಾಶಕ್ತಿ ಕೊರತೆ: ಕಳೆದ ವರ್ಷ ಸಾವಿರಾರು ಕೋಟಿ ಖರ್ಚು ಮಾಡಿ ಎಡದಂಡೆ ಮುಖ್ಯ ನಾಲೆಗಳ ಆಧುನೀಕರಣ ಮಾಡಲಾಗಿದೆ. ಅಲ್ಲಿನ ರಾಜಕಾರಣಿಗಳ ಪ್ರಭಾವವೇ ಇದಕ್ಕೆ ಕಾರಣವಾಗಿದೆ. ಬಲದಂಡೆ ನಾಲೆಗಳು ಸಂಪೂರ್ಣ ಅಧೋಗತಿಯಲ್ಲಿದ್ದು. ಇದಕ್ಕಾಗಿ ಕಳೆದ ಸಾಲಿನ ಬಜೆಟ್‌ನಲ್ಲಿ 700 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ಇನ್ನೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಕಾರ್ಯರೂಪಕ್ಕೆ ತರುವಲ್ಲಿ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಿತಾಸಕ್ತಿ ಕೊರತೆ ಎದ್ದು ಕಾಣುತ್ತಿದೆ.
ಕೊನೆ ಭಾಗಕ್ಕೆ ನೀರಿಲ್ಲ: ನಾಲೆಗಳಲ್ಲಿ ಅಭದ್ರ ಸ್ಥಿತಿಯಲ್ಲಿರುವುದರಿಂದ ಕೊನೆಯ ಭಾಗದವರಿಗೆ ನೀರು ಹರಿಯುತ್ತಿಲ್ಲ. ಇದರಿಂದ ಕೊನೆ ಭಾಗದ ರೈತರು ನೀರಿಗಾಗಿ ಎದುರು ನೋಡುವಂತಾಗಿದೆ. ಇದು ಇಂದು ನಿನ್ನೆಯದಲ್ಲ ಯೋಜನೆ ಪ್ರಾರಂಭವಾದಾಗಿನಿಂದ ಈವರೆಗೂ ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ಪ್ರತಿ ವರ್ಷ ನಿರ್ವಹಣೆಗೆ ಅಲ್ಪ-ಸ್ವಲ್ಪ ಹಣ ಬಿಡುಗಡೆ ಮಾಡುತ್ತಿದ್ದರಿಂದ ಪರಿಪೂರ್ಣವಾದ ಕೆಲಸವಾಗುತ್ತಿಲ್ಲ. ಇದರಿಂದ ಆಧುನೀಕರಣಕ್ಕೆ ಸರ್ಕಾರ ಮುಂದಾಗಬೇಕಿದೆ.
ನಾಲೆಗಳ ನಿರ್ವಹಣೆ ಹಾಗೂ ನೀರಾವರಿ ಪ್ರದೇಶದ ವ್ಯಾಪ್ತಿಗಳ ಗ್ರಾಮಗಳಲ್ಲಿ ಸಿಸಿ ರಸ್ತೆಗಾಗಿ 5 ಕೋಟಿ ರೂ. ಬಿಡುಗಡೆಯಾಗಿದೆ. ಅದು ಈಗಾಗಲೇ ಟೆಂಡರ್ ಕರೆಯಲಾಗಿದೆ. ಕಾಮಗಾರಿಗೆ ಆದೇಶ ನೀಡಲಾಗಿದೆ.
ಎಂ.ಎಸ್.ಭಜಂತ್ರಿ, ಎಇಇ ಕೆಬಿಜೆಎನ್‌ಎಲ್ ರೋಡಲಬಂಡಾ(ಯುಕೆಪಿ)
ಶಿವರಾಜ್ ಕೆಂಭಾವಿ