Advertisement

ಎಲ್ಲರಿಗೂ ಒಳಿತಾಗಲಿ ಎಂದರೆ ದೇವರಿಗೆ ಮೆಚ್ಚು

08:56 PM Nov 09, 2019 | Lakshmi GovindaRaju |

ಹುಣಸೂರು: ಮೊದಲೆಲ್ಲ ಧರ್ಮ ಕಾರ್ಯಗಳಿಗೆ ಪ್ರಸಿದ್ಧಿಯಿತ್ತು. ಈಗ ದಾನ-ಧರ್ಮ ಮಾಡುವವರೇ ಕಡಿಮೆಯಾಗಿದ್ದಾರೆ. ನನಗೆ-ನಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡು ಎನ್ನುವ ಬದಲು ಎಲ್ಲರಿಗೂ, ಊರಿಗೆ ಒಳಿತಾಗಲಿ ಎಂದರೆ ಮಾತ್ರ ದೇವರು ಮೆಚ್ಚುತ್ತಾನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ತಾಲೂಕಿನ ಧರ್ಮಾಪುರದಲ್ಲಿ 1,115 ವರ್ಷಗಳ ಇತಿಹಾಸವಿರುವ ಹೊಯ್ಸಳರ ಕಾಲದ ಚನ್ನಕೇಶವಸ್ವಾಮಿ ದೇವಾಲಯದ ಪುನರ್‌ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಮಾತನಾಡಿದರು.

Advertisement

ದೇಶದಲ್ಲಿ ಭವ್ಯ ಪರಂಪರೆಯಿದ್ದು, ಸಾವಿರಾರು ದೇವಾಲಯಗಳಿವೆ, ದೇವನೊಬ್ಬ ನಾಮ ಹಲವು ಎನ್ನುವಂತೆ ನಂಬಿಕೆಗನುಗುಣವಾಗಿ ಪೂಜೆ ನಡೆಯುತ್ತವೆ. ನಮ್ಮ ನಂಬಿಕೆ ಬದಲಾಗಬಾರದು. ಅಪನಂಬಿಕೆ ಇರಬಾರದು. ದೇವಸ್ಥಾನ ಕಟ್ಟಿ ಅನಾಚಾರ ಮಾಡಿದರೆ ಒಳ್ಳೆಯದಾಗಲ್ಲ. ಜನ ಸೇವೆ, ಬೇರೆಯವರಿಗೆ ಕೇಡು ಬಯಸದೇ ಇರುವುದು, ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವುದೇ ನಿಜದ ದೇವರು ಎಂದು ಹೇಳಿದರು.

ಮಂಜುನಾಥ್‌ಗೆ ಆಶೀರ್ವದಿಸಿ: ಈ ಕ್ಷೇತ್ರ ಪ್ರತಿನಿಧಿಸಿದ್ದ ಮಂಜುನಾಥ್‌ ಒಬ್ಬ ಜನಪರ-ಬದ್ಧತೆಯುಳ್ಳ ವ್ಯಕ್ತಿ. ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈತನನ್ನು ಆಶೀರ್ವದಿಸಿ, ಬುರುಡೆ ಬಿಡುವವರನ್ನು ಸೋಲಿಸಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌ ಮಾತನಾಡಿ, ತಮ್ಮ ಅವಧಿಯಲ್ಲಿ ಸಿದ್ದರಾಮಯ್ಯ ಕರುಣಿಸಿದ ಸಂಸದೀಯ ಕಾರ್ಯದರ್ಶಿಯಾಗಿದ್ದ ವೇಳೆ ಪ್ರವಾಸೋದ್ಯಮ ಇಲಾಖೆಯಿಂದ ಧರ್ಮಾಪುರ ಚನ್ನಕೇಶವ ದೇವಾಲಯಕ್ಕೆ ಒಂದು ಕೋಟಿ, ತರಿಕಲ್‌ ಸಾವಿರ ಕಂಬದ ಬಸದಿ ಅಭಿವೃದ್ಧಿಗೆ 2.5 ಕೋಟಿ ರೂ, ಇನ್ನುಳಿದಂತೆ ಗೋಮಟಗಿರಿ ಕ್ಷೇತ್ರ ಅಭಿವೃದ್ಧಿ, ನಗರಕ್ಕೆ ಸಮೀಪದ ಚಿಕ್ಕಹುಣಸೂರು ಕೆರೆ ಅಭಿವೃದ್ಧಿ ಸೇರಿದಂತೆ 9 ಕೋಟಿ ರೂ. ತಾಲೂಕಿಗೆ ಅನುದಾನ ಬಿಡುಗಡೆಯಾಗಿತ್ತು ಎಂದು ಹೇಳಿದರು.

ಗಾವಡಗೆರೆಮಠದ ನಟರಾಜ ಸ್ವಾಮೀಜಿ, ವಿಶ್ವಕರ್ಮ ಸಮಾಜದ ನೀಲಕಂಠಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಪುನರ್‌ ಪ್ರತಿಷ್ಠಾಪನೆ ಸಮಿತಿ ಅಧ್ಯಕ್ಷ ಧರ್ಮಾಪುರ ನಾರಾಯಣ್‌ ಜೀರ್ಣೋದ್ಧಾರಕ್ಕೆ ನೆರವಾದ ಸಿದ್ದರಾಮಯ್ಯ ಹಾಗೂ ಮಂಜುನಾಥರನ್ನು ಅಭಿನಂದಿಸಿದರು. ಉಪನ್ಯಾಸಕ ಲಕ್ಷ್ಮಿಕಾಂತ್‌ ಧರ್ಮಾಪುರದ ಇತಿಹಾಸ ತಿಳಿಸಿದರು.

Advertisement

ಜಿಪಂ ಸದಸ್ಯ ಡಾ. ಪುಷ್ಪಾ ಅಮರ್‌ನಾಥ್‌, ಕಟ್ಟನಾಯಕ, ಸುರೇಂದ್ರ, ಡಿ.ರವಿಶಂಕರ್‌, ಮಾಜಿ ಅಧ್ಯಕ್ಷ ಮರೀಗೌಡ, ಮಾಜಿ ಸದಸ್ಯ ಕುನ್ನೇಗೌಡ, ತಾಪಂ ಉಪಾಧ್ಯಕ್ಷ ಪ್ರೇಮೇಗೌಡ, ಸದಸ್ಯ ಪ್ರಭಾಕರ್‌, ಗ್ರಾಪಂ ಅಧ್ಯಕ್ಷ ರಾಜು, ಐಶ್ವರ್ಯಾ ಮಹದೇವ್‌, ತಹಶೀಲ್ದಾರ್‌ ಬಸವರಾಜ್‌, ಇಒ ಗಿರೀಶ್‌, ನಾಡಯಜಮಾನ ಚಂದ್ರನಾಯಕ, ಮುಖಂಡ ಮಂಜುಳಾ ಮಾನಸ, ಶಿವರಾಂ, ಆನಂದ್‌, ವೆಂಕಟೇಶ್‌ ರಮೇಶ್‌, ಗೋವಿಂದೇಗೌಡ, ನಿಂಗರಾಜು ವಸಂತಕುಮಾರ್‌, ಕೃಷ್ಣ, ಚೆಲುವಯ್ಯ, ಪುಟ್ಟಮಾದಯ್ಯ, ಸೇರಿದಂತೆ ಸಮಿತಿ ಪದಾಧಿಕಾರಿಗಳು ಹಾಜರಿದ್ದರು. ಎರಡು ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಭಾಗವಹಿಸಿದ್ದರು.

ಭವ್ಯ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಆದಿಶಕ್ತಿ ಮಹಾಕಾಳಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಮಂಗಳವಾದ್ಯ, ಗುಡ್ಡರ ಕುಣಿತದೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಬಳಿಕ ಕನಕಭವನಕ್ಕೆ ಭೇಟಿ ನೀಡಿದಾಗ ಯುವಪಡೆ ಸೇಬಿನ ಹಾರ ಹಾಕಿ ಅಭಿನಂದಿಸಿತು.

ಆಣೆ ಪ್ರಮಾಣ ದೇವರು ಕೇಳಿದ್ರಾ…: ಕೆಲವರು ಒಳಗೊಳಗೆ ಏನೇನೋ ಮಾಡಿಕೊಂಡು, ಸತ್ಯ ಪ್ರಮಾಣಕ್ಕೆ ದೇವಾಲಯಕ್ಕೆ ಹೋಗುತ್ತಾರೆ. ಆಣೆ ಪ್ರಮಾಣ ಎನ್ನೋದು ಪಾಪದ ಕೆಲಸ. ಇಂಥವ್ರನ್ನ ಆ ದೇವರೂ ಒಪ್ಕೋಳ್ಳಲ್ಲ. ಮನುಷ್ಯನಲ್ಲಿ ಉಪಕಾರ ಸ್ಮರಣೆಯಿರಬೇಕು. ಅದನ್ನ ರಾಜಕಾರಣದಲ್ಲೂ ಪಾಲಿಸಬೇಕು. ಆದರೆ ತಾವು ಐದು ವರ್ಷ ಅಧಿಕಾರದಲ್ಲಿದ್ದಾಗ ಬಡವರಿಗಾಗಿ ಹಲವಾರು ಭಾಗ್ಯಗಳನ್ನು ಕಲ್ಪಿಸಿದೆ. ವಿದ್ಯಾರ್ಥಿಗಳಿಗೆ ನೆರವಾದೆ.

ಸಣ್ಣಪುಟ್ಟ ಸಮಾಜಗಳ ಅಭಿವೃದ್ಧಿಗೆ ನಿಗಮ ಮಾಡಿದೆ. ಆದರೆ ನನ್ನನ್ನೇ ಸೋಲಿಸಿಬಿಟ್ರಾ ಎಂದು ಸಿದ್ದರಾಮಯ್ಯ ಬೇಸರಿಸಿದರು. ನಾನು ಸಿಎಂ ಆಗಿದ್ದಾಗ ಪರಿವಾರ-ತಳವಾರ ಜನಾಂಗವನ್ನು ಎಸ್‌ಟಿಗೆ ಸೇರಿಸಲು ಎರಡು ಬಾರಿ ಶಿಪಾರಸು ಮಾಡಿದೆ. ಇದನ್ನ ಕೇಂದ್ರ ಸರ್ಕಾರ ಆದೇಶಿಸಬೇಕು. ಅದಾಗಲಿಲ್ಲ. ಆದರೆ ಈಗ ಬಂದವರು ನಾನು ಹೇಳಿದೆ ಅಂತ ಹೇಳಿಕೊಳ್ಳುತ್ತಿದ್ದಾರೆ ಎಂದು ಛೇಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next