Advertisement

ರಜೆ ಬೇಕು ಅನ್ನಿಸಿದಾಗೆಲ್ಲ ಮೈಮೇಲೆ ದೇವರು ಬರ್ತಿತ್ತು!

06:00 AM Jun 12, 2018 | |

ಟಿವಿಯಲ್ಲಿ ಕ್ರಿಕೆಟ್‌ ಪಂದ್ಯ ಇರುತ್ತಿದ್ದ ದಿನಗಳಲ್ಲೆಲ್ಲ ನಾನು ಶಾಲೆಗೆ ಚಕ್ಕರ್‌ ಹಾಕುತ್ತಿದ್ದೆ. ಅದಕ್ಕೆ ಗೆಳೆಯರೂ ಸಾಥ್‌ ನೀಡುತ್ತಿದ್ದರು. ಆ ದಿನ ಶಾಲೆಗೆ ಹೋಗಿ ಹಾಜರಾತಿ ಹಾಕಿಸಿಕೊಂಡ ಬಳಿಕ ನಮ್ಮ ಅಸಲಿ ಆಟ ಶುರುವಾಗುತ್ತಿತ್ತು. ಆಶುಭಾಷಣ, ನಟನೆ, ಮಿಮಿಕ್ರಿಯಲ್ಲಿ ಪ್ರಚಂಡನೆನಿಸಿಕೊಂಡ ಗೆಳೆಯ, ತನ್ನ ಮೈ ಮೇಲೆ ದೇವರು ಬರುವಂತೆ ಅದ್ಭುತವಾಗಿ ನಟಿಸುತ್ತಿದ್ದ. ನಮ್ಮೂರಿನ ಸುತ್ತಮುತ್ತ ಇದ್ದ ಗಣಮಕ್ಕಳ ನಟನೆಯನ್ನು ಚಿಕ್ಕಂದಿನಿಂದ ನೋಡಿ ಅವರನ್ನು ಚೆನ್ನಾಗಿಯೇ ಅನುಕರಿಸಲು ಕಲಿತಿದ್ದ. ನಮಗೆ ರಜೆ ಬೇಕಾದ ದಿನ ಅವನ ಮೇಲೆ ದೇವರು ಬರುತ್ತಿತ್ತು! ಅವನಿಗೆ ದೇವರು ಬರುತ್ತಿದ್ದಂತೆ ನಾವು ಓಡಿ ಹೋಗಿ ಮುಖ್ಯ ಗುರುಗಳಿಗೆ ವಿಷಯ ತಿಳಿಸುತ್ತಿದ್ದೆವು. ಪರಮ ದೈವಭಕ್ತರಾದ ಗುರುಗಳು, ಅವನನ್ನು ಮನೆಗೆ ಬಿಟ್ಟು ಬರಲು ನನ್ನನ್ನು ಮತ್ತು ಇನ್ನೊಬ್ಬನನ್ನು ಕಳಿಸುತ್ತಿದ್ದರು.

Advertisement

   ಈ “ದೇವರು ಮೈ ಮೇಲೆ ಬರುವ ಗುಟ್ಟು’ ನಮ್ಮ ಬೆಂಚಿನ ಐವರಿಗೆ ಮಾತ್ರ ತಿಳಿದಿತ್ತು. ದೇವರು ಬರುವ ಗೆಳೆಯನೊಂದಿಗೆ ನಾನು ಪರ್ಮನೆಂಟಾಗಿ ಇರುತ್ತಿದ್ದೆ. ನಮ್ಮ ಜೊತೆಗೆ ಬರುವ ಇನ್ನೊಬ್ಬ ಯಾರು ಎಂಬುದನ್ನು ಮೊದಲೇ ನಿರ್ಧರಿಸುತ್ತಿದ್ದೆವು. ಕೆಲವೊಮ್ಮೆ, ಕ್ರಿಕೆಟ್‌ ಪಂದ್ಯದಲ್ಲಿ ಭಾರತದ ಎದುರಾಳಿ ತಂಡ ಯಾವುದು ಎನ್ನುವುದರ ಮೇಲೆ ಆ ಮತ್ತೂಬ್ಬ ಯಾರು ಎಂಬುದು ನಿರ್ಧರಿಸಲ್ಪಡುತ್ತಿತ್ತು. ಫೈನಲ್‌ ಪಂದ್ಯದ ದಿನ ನನ್ನ ಜೊತೆಗೆ ಯಾರು ಬರಬೇಕು ಎಂಬ ವಿಷಯಕ್ಕೆ ಗಲಾಟೆಯೂ ನಡೆಯುತ್ತಿತ್ತು. ಕೊನೆಗೆ ಆ ಗಲಾಟೆ, ನಾಣ್ಯ ಚಿಮ್ಮುವಿಕೆಯಿಂದ ಬಗೆಹರಿದಿದ್ದಿದೆ.

   ಹೀಗೆ ನಡೆಯುತ್ತಿದ್ದ ನಮ್ಮ ಚಕ್ಕರ್‌ ಕತೆ, ಎರಡು ವರ್ಷ ಸರಾಗವಾಗಿ ನಡೆದು ಕೊನೆಗೊಂದು ದಿನ ಅಂತ್ಯ ಕಂಡಿತು. ಅಂದು ಭಾರತ – ಪಾಕಿಸ್ತಾನ ಪಂದ್ಯ. ಯಾರು ಹೋಗಬೇಕು ಎನ್ನುವ ವಿಷಯ ಗಲಾಟೆಗೆ ಕಾರಣವಾಯಿತು. ಅದು ಮುಖ್ಯ ಗುರುಗಳಿಗೆ ತಿಳಿದು, ವಿಷಯ ಮನೆಯವರೆಗೂ ತಲುಪಿತು. ಮನೆಯಲ್ಲಿ ನೆಕ್ಕಿ(ಲಕ್ಕಿ) ಸೊಪ್ಪಿನ ಕೋಲಿನಿಂದ ಆರಾಧನೆ ನಡೆಸಿ, ಮೈಮೇಲೆ ಬರುವ ದೇವರನ್ನು ಬಿಡಿಸಿದರು! ಮೈ ಮೇಲೆ ಬಂದಿದ್ದ ಪ್ರತಿ ಬರೆಗಳು, ಚಕ್ಕರ್‌ ಹಾಕಿ ನೋಡಿದ್ದ ಪ್ರತಿ ಪಂದ್ಯಕ್ಕೂ ಸಿಕ್ಕ ಬಹುಮಾನದಂತಿದ್ದವು. ಅಲ್ಲಿಗೆ ನಮ್ಮ ಚಕ್ಕರ್‌ವ್ಯೂಹ ಅಂತ್ಯವಾಯಿತು.

ಪ್ರಶಾಂತ್‌ ಕೆ.ಸಿ. 

Advertisement

Udayavani is now on Telegram. Click here to join our channel and stay updated with the latest news.

Next