Advertisement

ದೇವರು ಮತ್ತು ಸಿಸಿ ಕೆಮರಾ ! 

06:45 AM Sep 24, 2017 | Harsha Rao |

ಗುಂಡನ ಹೊಸ ಸಮಸ್ಯೆ ಇದು. ಅವನಿಗೆ ಹೊಸ ಸೃಜನಶೀಲ ಆಲೋಚನೆಗಳು ಬರಬೇಕಾದರೆ ಪೃಷ್ಠವನ್ನು ತುರಿಸಿಕೊಳ್ಳಬೇಕು. ಮನೆಯಲ್ಲಾದರೂ ಅಡ್ಡಿಯಿಲ್ಲ ; ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಮಾಡಿದರೆ ಒಂದು ಅಸಭ್ಯ ಎನಿಸುವುದು. ನೋಡುವವರಿಗೆ, “ಈತ ನಿಜವಾಗಿ ತುರಿಸುತ್ತಿಲ್ಲ ; ಕ್ರಿಯಾಶೀಲ ಯೋಚನೆಗಳಿಗಾಗಿ ತಡಕಾಡುತ್ತಿದ್ದಾನೆ’ ಎಂದು ಅನ್ನಿಸದೆ, “ಛಿ! ಎಂಥ ಇನ್‌ಡೀಸೆಂಟ್‌’ ಎಂದು ಉದ್ಗರಿಸುವಂತಾಗುತ್ತದೆ. ಆದರೆ, ಕಚೇರಿಯಲ್ಲಿ ಯಾರಿಗೂ ಕಾಣದಂತೆ ಅಥವಾ ಎಲ್ಲರೂ ಬೇರೆಡೆಗೆ ಗಮನ ಹರಿಸುವಾಗ ಮೆಲ್ಲನೆ ತುರಿಸಿಕೊಂಡು ಮನಸ್ಸನ್ನು ಹುರುಪುಗೊಳಿಸುವ ಕೌಶಲ ಅವನಲ್ಲಿದೆ. ಮನೆಯಲ್ಲಂತೂ ಹೀಗೆ ತುರಿಸಿಕೊಳ್ಳುವುದು ಒಂದು ಸಮಸ್ಯೆಯಲ್ಲ ; ಹೆಂಡತಿ, ಮಕ್ಕಳಿಗೆ ಇವನ ಹಣೆಬರಹ ಗೊತ್ತಿದ್ದದ್ದೆ!

Advertisement

ಅಂದ ಹಾಗೆ, ನಿಜವಾದ ಸಮಸ್ಯೆ ಏನೆಂದು ಹೇಳಲೇ ಇಲ್ಲ. ಈಗ ಕಚೇರಿಗೆ ಸಿಸಿ ಕೆಮರಾ ಬಂದಿದೆ. ಮೊದಲು ಅದು ಕಚೇರಿಯ ನಡುವಿನ ಹಾಲ್‌ನಲ್ಲಿ ಮಾತ್ರ ಇತ್ತು. ಎಲ್ಲರೂ ಅದನ್ನು ಒಕ್ಕಣ್ಣ ರಾಕ್ಷಸನ ಹಾಗೆ ನೋಡುತ್ತಿದ್ದರು. ತಮ್ಮ ಚಲನವಲನಗಳೆಲ್ಲ ಅದರಲ್ಲಿ ದಾಖಲಾಗುತ್ತದೆ ಎಂದು, ತಿಳಿದು ಒಳಗೊಳಗೆ ಹೆದರಿದ್ದರು. ಜೊತೆಗೆ ಉಗುರು ಕಚ್ಚುವುದು, ಮೂಗಿಗೆ ಬೆರಳು ತೂರಿಸುವುದು, ಕಿವಿಯೊಳಗೆ ಬೆರಳು ಹಾಕಿ ತಿರುಗಿಸಿ ಬ್ರಹ್ಮಾನಂದವನ್ನು ಅನುಭವಿಸುವುದು- ಇಂಥ ಮನುಷ್ಯ ಸಹಜ ಕ್ರಿಯೆಗಳೆಲ್ಲ ನಿಂತುಹೋಗಿ ಕಚೇರಿಯಲ್ಲಿ ಸಭ್ಯತೆ ನೆಲೆಸುವಂತಾಗಿತ‌ು¤. ತನ್ನ ತಲೆಗೆ ಮಂಕುತನ ಕವಿದಾಗಲೆಲ್ಲ ಗುಂಡ ಹೊರಗೆ ಹೋಗಿ ಹಿಂಭಾಗವನ್ನು ತುರಿಸಿ ಮರಳಿ ಬಂದು ಕಂಪ್ಯೂಟರ್‌ ಮುಂದೆ ಕೂತು ಉತ್ಸಾಹದಿಂದ ಕೆಲಸ ಮಾಡಲಾರಂಭಿಸುತ್ತಿದ್ದ.

ಆದರೆ ಯಾವಾಗ ಹಾಲ್‌ನ ಹೊರಗೆ, ಮೆಟ್ಟಿಲಲ್ಲಿ, ಎಂಟ್ರಾನ್ಸ್‌ ನಲ್ಲಿ, ಕಾರಿಡಾರ್‌ನಲ್ಲಿ ಎಲ್ಲೆಲ್ಲೂ ಸಿಸಿ ಕೆಮರಾಗಳನ್ನು ಅಳವಡಿಸಿದರೊ ಅಂದಿನಿಂದ ಗುಂಡ ಕಂಗಲಾಗಿಬಿಟ್ಟ. ಹೇಗೆ ತುರಿಸಿಕೊಳ್ಳುವುದು?

ನಿಜವಾಗಿ ಅವನ ಮೈಯಲ್ಲಿ ಸಹಜವಾದ ತುರಿಕೆಯ ಒತ್ತಡವೇನೂ ಇಲ್ಲ , ಚರ್ಮರೋಗದ ಸಮಸ್ಯೆಯೂ ಇಲ್ಲ ಎಂದು ಗೊತ್ತಿದ್ದವರಿಗೆ ಗೊತ್ತಿದೆ. ಆದರೆ, ಅದು ಮನಸಿಗೆ ಮತ್ತು ಬುದ್ಧಿಗೆ ಸಂಬಂಧಿಸಿದ ವಿಚಾರವೆಂದು ಅವನ ಬಾಸ್‌ಗೆ ಗೊತ್ತಾಗಬೇಕಲ್ಲ!  ಒಮ್ಮೆ ಏನಾದರಾಗಲಿ ಎಂದು ಕೆಮರಾದ ಮುಂದೆಯೇ ತುರಿಸಿಕೊಂಡಿದ್ದ. ತನ್ನ ಕ್ಯಾಬಿನ್‌ನಲ್ಲಿ ಕೂತು ಸ್ಕ್ರೀನ್‌ನಲ್ಲಿ ನೋಡಿದ ಬಾಸ್‌ ಗುಂಡನನ್ನು ಕರೆದು, “ಏನ್ರಿ, ಸ್ಕಿನ್‌ ಸ್ಪೆಷಲಿಸ್ಟ್‌ಗಳಿಗೆ ತೋರಿಸಬಾರದಾ? ಆಫೀಸ್‌ನಲ್ಲಿ ಇದು ಚೆನ್ನಾಗಿರೋಲ್ಲ’ ಎಂದು ಗದರಿಸಿದ್ದರು. ಗುಂಡ ವಿವರಿಸಲು ಹೋದರೆ ಅದನ್ನು ಬಾಸ್‌ ಕೇಳುವ ಸ್ಥಿತಿಯಲ್ಲಿರಲಿಲ್ಲ.

ಹಾಗೆ, ಈ ಒತ್ತಡದ ಸ್ಥಿತಿಯಿಂದಾಗಿ ಗುಂಡನ ಕಾರ್ಯಕ್ಷಮತೆ ಕುಂದುತ್ತ ಹೋಯಿತೆನ್ನಿ. ಕೆಲಸದ ಮಟ್ಟ ಕುಸಿದುದರಿಂದ ಸರಿಯಾದ ಕ್ರಮದಲ್ಲಿ ಇನ್‌ಕ್ರಿಮೆಂಟೂ ಆಗಲಿಲ್ಲ. ಸಿ.ಸಿ. ಕೆಮರಾದಿಂದ ಒಟ್ಟೂ ಬದುಕಿನ ಬುಡದಲ್ಲಿ ಸಣ್ಣಮಟ್ಟಿನ ತಲ್ಲಣ ಉಂಟಾದದ್ದು, ನಿಜವೇ. 
ಕ್ರಮೇಣ ತನ್ನ ಪ್ರಾರಬ್ಧಕರ್ಮ ಎಂಬಂತೆ ಸಿಸಿ ಕೆಮರಾದ ಸಂಸ್ಕೃತಿಗೆ ಒಗ್ಗಿಕೊಂಡನೆನ್ನಿ. ಅದೇ ಸಿಸಿ ಕೆಮರಾ ಅವನ ಖಾಸಗಿ ಬದುಕಿಗೂ ಪ್ರವೇಶಿಸಿದ ಕತೆ ದೊಡ್ಡದಿದೆ.

Advertisement

ಪ್ರತಿದಿನ ಸಿಸಿ ಕೆಮರಾವನ್ನೇ ನೋಡುತ್ತಿದ್ದ ಗುಂಡನಿಗೆ ಒಂದು ದುರಾಲೋಚನೆ ಹೊಳೆಯಿತು. ತಾನು ಕಚೇರಿಯಲ್ಲಿರುವಾಗ ಮನೆಯಲ್ಲಿನ ವ್ಯವಹಾರಗಳನ್ನು “ಲೈವ್‌’ ಆಗಿ ನೋಡಿದರೆ ಹೇಗೆ? ಅದೂ ಗುಟ್ಟಾಗಿ ! ತಾನು ಕೆಲಸಕ್ಕೆ ಬಂದರೆ ಮನೆಯಲ್ಲಿ ಹೆಂಡತಿಯೊಬ್ಬಳೇ. ಮಗ ಮತ್ತು ಮಗಳು ಶಾಲೆಗೆ ಹೋಗುತ್ತಾರೆ. ಯಾರೂ ಇಲ್ಲದಿರುವಾಗ ಹೆಂಡತಿ ಏನು ಮಾಡುತ್ತಿರಬಹುದು- ಸುಮ್ಮನೆ ತಿಳಿದುಕೊಳ್ಳುವ ಉತ್ಸಾಹ.

ಯಾರಿಗೂ ಗೊತ್ತಾಗದಂತೆ ಸಿಸಿ ಕೆಮರಾ ಕಂಪೆನಿಯ ಪ್ರತಿನಿಧಿಯನ್ನು ಸಂಪರ್ಕಿಸಿದ. ಒಂದು ಕೆಮರಾ ಪಡೆದು ಅದರ ಸಂಪರ್ಕವನ್ನು ತನ್ನ ಮೊಬೈಲ್‌ಗೆ ಸಂಪರ್ಕ ಸಾಧಿಸಿಕೊಂಡ. ಅದೊಂದು ರಾತ್ರಿಯ ಹೊತ್ತು ಹೆಂಡತಿ ಬಾತ್‌ರೂಮ್‌ನಲ್ಲಿದ್ದಳು. ಮಗ ಮೇಲ್ಮಹಡಿಯಲ್ಲಿ ವೀಡಿಯೋ ಗೇಮ್‌ ಆಡುತ್ತಿದ್ದನೆಂದರೆ, ಮಗಳು ರೂಮಿನೊಳಗೆ ಪೊಗೊ ಚಾನೆಲ್‌ ನೋಡುತಿದ್ದಾಳೆಂದರೆ- ಭೂಕಂಪ ಆದರೂ ಅವರು ಏಳುವುದಿಲ್ಲ. ಇದೇ ಸುಸಮಯ ಎಂದುಕೊಂಡು ಮನೆಯ ಪ್ರವೇಶ ದ್ವಾರದ ಮೇಲೆ ಮಂತ್ರದ  ತೆಂಗಿನಕಾಯಿ ತೂಗಿಸಿದ ಬಟ್ಟೆಯ ಚೀಲದ ಹಿಂದುಗಡೆ ಡೌಟ್‌ ಬಾರದಂತೆ ಕೆಮರಾವನ್ನು ಪ್ರತಿಷ್ಠಾಪಿಸಿದ. ಸ್ಪೀಕರ್‌, ಟಿವಿ, ಫೋನ್‌ ಇತ್ಯಾದಿಗಳ ವಯರುಗಳು ಅಡ್ಡ-ನೀಟ ಹರಡಿಕೊಂಡಿದ್ದರಿಂದ ಅವುಗಳ ಮಧ್ಯೆ ಪುಟ್ಟ ಕೆಮರಾ ಕಾಣುವಂತಿರಲಿಲ್ಲ. ಅದರ ಬಗ್ಗೆ ಯಾರಿಗೂ ಸಂಶಯ ಬರುವ ಹಾಗೂ ಇರಲಿಲ್ಲ. ಕೆಮರಾಕ್ಕೆ ಒಳಗಿನ ಹಾಲು, ಹೊರಗಿನ ಅಂಗಳದ ಬಹುಭಾಗ ಕಾಣಿಸುವಂತಿತ್ತು.

ಮರುದಿನ ಬೆಳಗ್ಗೆ ಕಚೇರಿಗೆ ಹೋದವನೇ ಕೆಮರಾದ ಸಂಪರ್ಕ ಸಾಧಿಸಿ ಮೊಬೈಲ್‌ನ ಸ್ಕ್ರೀನ್‌ನಲ್ಲಿ  ಮನೆಯ ಚಲನವಲನವನ್ನು ವೀಕ್ಷಿಸತೊಡಗಿದ. ಹೆಂಡತಿ ಟಿ.ವಿ. ನೋಡುತ್ತ ಏನನ್ನೋ ತಿನ್ನುತ್ತಿದ್ದಳು. ಮತ್ತೆ ಎದ್ದುಹೋಗಿ ಮೂಲೆಯಲ್ಲಿ ರಾಶಿ ಹಾಕಿದ್ದ ಬಟ್ಟೆಗಳನ್ನು ವಾಶಿಂಗ್‌ ಮೆಶೀನ್‌ನೊಳಗೆ ತುರುಕಿದಳು. ಒಳ ಬಂದವಳೇ ಫ್ರಿಡ್ಜ್ ನೊಳಗಿಟ್ಟ ಸ್ವೀಟ್‌ ಡಬ್ಬದಿಂದ ಏನನ್ನೋ ತೆಗೆದು ತಿಂದಳು. “ಎಲಾ! ನಿನ್ನೆ ರಾತ್ರಿ ನಾನು ಫ್ರಿಡ್ಜ್ ಇಡೀ ತಡಕಾಡಿದರೂ ಇದು ನನಗೇಕೆ ಸಿಗಲಿಲ್ಲ’ ಎಂದು ಗುಂಡ ತನ್ನೊಳಗೇ ಮಾತನಾಡಿಕೊಂಡ. ಅಷ್ಟರಲ್ಲಿ ಹೊರಗೆ ತರಕಾರಿ ಮಾರುವವನು ಬಂದಿರಬೇಕು. “ಏನಿದೆ ಇವತ್ತು?’ ಎಂದು ಕೇಳಿಕೊಂಡು ಹೊರಗೆ ಹೋದಳು…
ಅಷ್ಟರಲ್ಲಿ ಗುಂಡನ ಲ್ಯಾಂಡ್‌ಫೋನ್‌ ರಿಂಗಾಯಿತು. 

ಬಾಸ್‌ನ ಕರೆ. “”ಏನ್ರಿ! ಒಂದು ಗಂಟೆಯಿಂದ ಮೊಬೈಲ್‌ ನೋಡ್ತಾ ಕೂತಿದ್ದೀರಾ. ಬ್ಲೂಫಿಲ್ಮ್ ನೋಡ್ತಿದ್ದೀರಾ? ಇಲ್ಲಿ ಸಿಸಿ ಟಿವಿಯಲ್ಲಿ  ಎಲ್ಲಾ ಕಾಣಿಸ್ತಾ ಇದೆ” ಎಂದ. ಗುಂಡ ಬೆಚ್ಚಿಬಿದ್ದು “”ಅದು ಸರ್‌… ಒಂದು ಎಮರ್ಜೆನ್ಸಿ ಕೇಸ್‌ ಸ್ಟಡಿ ಮಾಡ್ತಿದ್ದೆ. ಕಂಪ್ಯೂಟರ್‌ಗೆ ಕನೆಕ್ಷನ್‌ ಸಿಗ್ತಿರಲಿಲ್ಲ. ಹಾಗೆ… ಮೊಬೈಲ್‌ನಲ್ಲಿ ನೋಡ್ತಿದ್ದೆ”.

“”ನನ್ನ ಕಂಪ್ಯೂಟರ್‌ಗೆ ಇಂಟರ್‌ನೆಟ್‌ ಕನೆಕ್ಷನ್‌ ಇದೆ. ನಿಮಗ್ಯಾಕೆ ಸಿಗೋಲ್ಲಾರಿ?” ಎಂದು ಬಾಸ್‌ ಮತ್ತೆ ಗದರಿ ಫೋನಿಟ್ಟ .
ಹೀಗೆ ಅನೇಕ ಬಾರಿ ಆಯಿತು. ಕೊನೆಗೆ ಬಾಸ್‌, “ಮೊಬೈಲ್‌ ನೋಡ್ತಾ ಕೂತರೆ ನಿಮ್ಮನ್ನೂ ಚಂಡೀಘಡಕ್ಕೆ ಟ್ರಾನ್ಸ್‌ ಫ‌ರ್‌ ಮಾಡ್ತೇನೆ’ ಎಂದು ವಾರ್ನಿಂಗ್‌ ಮಾಡಿದ ಮೇಲೆ ಗುಂಡ ತನ್ನ ಚಾಳಿಯನ್ನು ನಿಲ್ಲಿಸಿ ಮನೆಯ ಸಿಸಿ ಕೆಮರಾವನ್ನೇ ಮರೆಯತೊಡಗಿದ.
ಒಮ್ಮೆ ಗೆಳೆಯನಲ್ಲಿ ಈ ವಿಚಾರ ಪ್ರಸ್ತಾವಿಸಿದಾಗ, “ಪ್ರತಿದಿನ ಮನೆಯಲ್ಲಿ ನೋಡುವ ಮುಖವನ್ನೇ ಮತ್ತೆ ಸಿಸಿ ಕೆಮರಾದಲ್ಲಿಯೂ ನೋಡಿ ಯಾಕೆ ಬೋರ್‌ ಹೊಡೆಸಿಕೋತಿಯಾ?’ ಎನ್ನುತ್ತ ಆತ್ಮಜ್ಞಾನ ಮೂಡಿಸಿದ. ಗುಂಡನಿಗೂ ಹೌದೆನ್ನಿಸಿತು. ಮನೆಯ ಗೋಡೆಗೆ ನೆಟ್ಟಿದ್ದ ಸಿಸಿ ಕೆಮರಾವನ್ನು ಯಾರಿಗೂ ಕಾಣದೋಪಾದಿಯಲ್ಲಿ ಕಿತ್ತುಹಾಕಿ ಬೇಸಿನ್‌ನಲ್ಲಿ ಕೈ ತೊಳೆದುಕೊಂಡ.

ಆ ಗೆಳೆಯ ಇದಕ್ಕೆ ಸಂಬಂಧಿಸಿ ಮತ್ತೂಂದು ಅನುಭವವ‌ನ್ನು ಗುಂಡನಲ್ಲಿ ಹೇಳಿಕೊಂಡ. ಆತ ಶಾಲೆಯೊಂದರಲ್ಲಿ ಮೇಷ್ಟ್ರು. ಅದು “ಸೆಂಟ್ರಲ್‌ ಸ್ಕೂಲ್‌’ ಎಂದು ದೊಡ್ಡ ಬೋರ್ಡ್‌ ಹಾಕಿಕೊಂಡ ವಿದ್ಯಾಸಂಸ್ಥೆ. ಬಹಳ ಸ್ಟ್ರಿಕ್ಟ್ . ಮೇಷ್ಟ್ರಾಗಲಿ, ಮಕ್ಕಳಾಗಲಿ- ಬೆರಳು ಅಲ್ಲಾಡಿಸಿದರೂ ಕೆಮರಾದಲ್ಲಿ ದಾಖಲಾಗುತ್ತಿತ್ತು. “”ನಮ್ಮ ಶಾಲಾದಿನಗಳಲ್ಲಿ, ಹತ್ತಿರ ಕೂತವನ ಕಿವಿಗೆ ಬೆರಳಿನಿಂದ ಸಡ್ಡು ಹೊಡೆದು, ಏನೂ ಅರಿಯದಂತೆ ಮತ್ತೆಲ್ಲೋ ನೋಡುತ್ತಿದ್ದೆವು. ಆತ, ನೋವಿನ ಕಿವಿಯನ್ನು ಬೆರಳಲ್ಲಿ ಉಜ್ಜಿಕೊಳ್ಳುತ್ತ, ಹಾಗೆ ಮಾಡಿದವನು ಯಾರೆಂದು ಪ್ರತೀಕಾರ ತೀರಿಸಲು ಸುತ್ತಮುತ್ತ ಹುಡುಕಾಡುವುದನ್ನು ನೋಡಿ ನಾವು ಒಳಗೊಳಗೆ ನಗುತ್ತ ಆನಂದಿಸುತ್ತಿದ್ದೆವು. ಟೀಚರ್‌ ಕ್ಲಾಸಿನಲ್ಲಿ ಕದ್ದುಮುಚ್ಚಿ ಚಾಕ್ಲೇಟು ತಿನ್ನುತ್ತಿದ್ದೆವು, ಜೋಕ್‌ ಮಾಡುತ್ತಿದ್ದೆವು, ಬೇರೆಯವರ ಬುತ್ತಿಯಿಂದ ಕದ್ದು ತಿನ್ನುತ್ತಿದ್ದೆವು.

ಈಗ ಅದೆಲ್ಲ ಸಾಧ್ಯವಿಲ್ಲ. ಸಣ್ಣ ತುಂಟಾಟ ಮಾಡಿದರೂ ಪ್ರಿನ್ಸಿಪಾಲ್‌ರ ಕ್ಯಾಬಿನ್‌ನ ಸ್ಕ್ರೀನ್‌ನಲ್ಲಿ ಕಾಣಿಸುತ್ತದೆ. ಮೇಷ್ಟ್ರುಗಳಾದ ನಮಗೂ ಕಷ್ಟ ಮಾರಾಯ. ಎಲ್ಲಿ ತಪ್ಪುತ್ತೇವೋ ಎಂದು ಎಚ್ಚರದಿಂದ ಪಾಠ ಮಾಡಬೇಕು. ಎಲ್ಲ ಕ್ಷಣಗಳಲ್ಲೂ ಹೀಗೆ ಎಚ್ಚರದಿಂದ ವ್ಯವಹರಿಸುವುದು ತುಂಬಾ ಕೃತಕ ಅನ್ನಿಸುತ್ತದೆ. ಈ ಮಕ್ಕಳಂತೂ ಬ್ಯಾಟರಿ ಮುಗಿದ ಗೊಂಬೆಗಳ ಹಾಗೆ ಕೂತಿರುವುದನ್ನು ನೋಡಿ ತುಂಬಾ ಬೇಜಾರಾಗುತ್ತದೆ” ಎಂದು ಅವನು ಹೇಳಿಕೊಂಡಾಗ ಗುಂಡನಿಗೆ, ತಾನು ತನ್ನ ಹೆಂಡತಿಯನ್ನು ಸಿಸಿಕೆಮರಾದ ಮೂಲಕ ನೋಡಿದ್ದು ನೆನಪಾಗಿ, ನಮ್ಮ ನಡುವಿನ ಸಂಬಂಧವನ್ನು ಸಿಸಿಕೆಮರಾದ ಕೇಬಲ್‌ನಲ್ಲಿ ಊರ್ಜಿತವಾಗಿಟ್ಟುಕೊಳ್ಳಬೇಕೆ ಎಂದು ಅನ್ನಿಸಿ ಯಥಾರ್ಥಜ್ಞಾನ ಮೂಡಿತ್ತು.  

ಗುಂಡನ ಮತ್ತೂಬ್ಬ ಗೆಳೆಯನಿಗೆ ಸ್ಟೇಶನರಿ ಅಂಗಡಿ ಇತ್ತು. ಎದುರಿನಲ್ಲಿಯೇ ಒಂದು ಸಿ.ಸಿ. ಕೆಮರಾ ಇಟ್ಟಿದ್ದ. ಅವನ ಅಂಗಡಿಯಲ್ಲೂ ಮೂರ್‍ನಾಲ್ಕು ಮಂದಿ ಕೆಲಸಕ್ಕಿದ್ದರು. ಸಂಜೆ ಹೋದಾಗ ಅವನೊಬ್ಬನೇ ಹೋದ. “”ಈ ಕೆಮರಾ ಗಿಮರಾ ಎಲ್ಲ ಎಂತಕ್ಕೆ ಮಾರಾಯ. ನಿನಗೆ ಕೆಲಸದವರ ಮೇಲೆ ವಿಶ್ವಾಸವಿಲ್ಲವಾ?” ಎಂದ ಗುಂಡ. “”ಅದು ಡಿ.ಸಿ. ಆಫೀಸಿನ ಆರ್ಡರ್‌ ಮಾರಾಯ. ಸಿ.ಸಿ. ಕೆಮರಾ ಕಡ್ಡಾಯವಾಗಿ ಅಳವಡಿಸಬೇಕು. ಇದರ ನಿಜಕತೆ ಕೇಳುತ್ತೀಯಾ?” ಎಂದವನೇ ಸ್ಟೂಲು ಹತ್ತಿ ಕೆಮರಾವನ್ನು ತೆಗೆದ. ಒಂದು ಕೆಮರಾದಂಥ ವಸ್ತುವಾಗಿತ್ತೇ ಹೊರತು ಕೆಮರಾವಾಗಿರಲಿಲ್ಲ. “”ಇದು ಎಂತಕ್ಕೆ, ಪ್ರಯೋಜನವಿಲ್ಲದ್ದು?” ಎಂದು ಕೇಳಿದ ಗುಂಡ. “”ಸುಮ್ಮನೆ. ಇದು ಕೆಮರಾ ಅಲ್ಲ ಅಂತ ಸರಕಾರದವರಿಗೂ ಗೊತ್ತಿಲ್ಲ, ಕೆಲಸದವರಿಗೂ ಗೊತ್ತಿಲ್ಲ” ಎಂದು ಜೋರಾಗಿ ನಕ್ಕ. ಗುಂಡನೂ ನಗುತ್ತ, “”ಮೊದಲೇ ಗೊತ್ತಿದ್ದರೆ ನಾನು ಎರಡು ಪೆನ್ನು ಕದಿಯುತ್ತಿದ್ದೆ” ಎಂದ.

ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡದೆ ಅವಿಶ್ವಾಸ ತೋರಿದರೆ ಅದು ಕೆಲಸ ಕೊಟ್ಟವನಿಗೆ ಮಾಡುವ ದ್ರೋಹವಲ್ಲ , ದೇವರಿಗೇ ಎಸಗುವ ಅನ್ಯಾಯ ಎಂಬುದು ಅನಾದಿ ಕಾಲದಿಂದಲೂ ಇರುವ ನಂಬಿಕೆ. “ದೇವರಿಗೆ ಸರಿಯಾಗಿ ಕೆಲಸ ಮಾಡು’- ಇದು ಆಗಾಗ ಬಳಸುವ ಉಪದೇಶ ವಾಕ್ಯ. ಆದರೆ, ಈಗ ದೇವರ ಮೇಲೆ ನಂಬಿಕೆ ಕುಸಿದಿದೆ. ದೇವರ ಜಾಗಕ್ಕೆ  ಸಿ.ಸಿ. ಕೆಮರಾ ಬಂದಿದೆ !
ಮನುಷ್ಯ- ಮನುಷ್ಯನ ನಡುವಿನ, ಮನುಷ್ಯ-ದೇವರ ನಡುವಿನ ನಂಬಿಕೆ ದುರ್ಬಲವಾಗುತ್ತಿರುವುದಕ್ಕೆ ಸಾಕ್ಷಿಯಾಗಿ ಎಲ್ಲರ ತಲೆಯ ಮೇಲೆ ಸಿಸಿಕೆಮರಾ ತೂಗುತ್ತಿದೆ !

ಕೆಲವೆಡೆ ಫ‌ಲಕವನ್ನು ತೂಗಿಸಿರುತ್ತಾರೆ, “ಇಲ್ಲಿ ಸಿಸಿಕೆಮರಾದ ಕಣ್ಗಾವಲು ಇದೆ’. ಅಂದರೆ-ಕಳ್ಳತನ, ಅವ್ಯವಹಾರ ಏನಾದರೂ ಮಾಡುವುದಿದ್ದರೆ ಇಲ್ಲಿ ಮಾಡಬೇಡಿ. ಸ್ವಲ್ಪ ದೂರ ಹೋಗಿ ಕೆಮರಾ ಇಲ್ಲದಲ್ಲಿ ಮಾಡಿ- ಎಂದರ್ಥ.

– ಉಪಮನ್ಯು

Advertisement

Udayavani is now on Telegram. Click here to join our channel and stay updated with the latest news.

Next