Advertisement

ಮೇಕೆ ಇನ್‌ ಇಂಡಿಯಾ!ದೇಸೀ ತಳಿಯ ಮೇಕೆ ಸಾಕಣೆಯಿಂದ ಲಾಭ

10:03 AM Feb 18, 2020 | Sriram |

ಜಮನಾಪುರಿ ಮೇಕೆಗಳನ್ನು ಹಾಲು ಮತ್ತು ಮಾಂಸಕ್ಕಾಗಿ ಸಾಕುತ್ತಾರೆ. ಇವುಗಳ ಮಾಂಸದಲ್ಲಿ ಕೊಬ್ಬಿನಂಶ ಕಡಿಮೆ. ಮೂರು ವರ್ಷಗಳಲ್ಲಿ 120 ಕೆ.ಜಿ.ವರೆಗೂ ಬೆಳೆಯುವ ಇವುಗಳು, ಎಲ್ಲಾ ರೀತಿಯಿಂದಲೂ ಕೃಷಿಕರಿಗೆ ಲಾಭ ತಂದುಕೊಡುತ್ತದೆ.ಮೇಕೆ,

Advertisement

ತುಮಕೂರಿನ ಮೆಳೇಹಳ್ಳಿಯ ಪ್ರಗತಿಪರ ರೈತ, ರಂಗಕರ್ಮಿ ಉಮೇಶ್‌ರವರು ತೆಂಗು, ಅಡಕೆ ಜೊತೆಯಲ್ಲಿ ಮೇಕೆ ಸಾಕಣಿಕೆಯನ್ನು ಪ್ರವೃತಿಯಾಗಿ ಸ್ವೀಕರಿಸಿ ಯಶಸ್ಸು ಕಂಡಿದ್ದಾರೆ. ಇವರು ದೇಶಿ ತಳಿಯ ಜಮನಾಪುರಿ ಮೇಕೆಗಳನ್ನು ಸಾಕುತ್ತಿದ್ದಾರೆ. ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದಲ್ಲಿ ಹರಿಯುವ ಜಮುನಾ ನದಿ ದಂಡೆಯಲ್ಲಿ ಬೆಳೆಯುವ ಮೇಕೆಗಳಿಗೆ “ಜಮನಾಪುರಿ’ ತಳಿ ಎಂದೇ ಕರೆಯುತ್ತಾರೆ. ಸಾಮಾನ್ಯವಾಗಿ ಹಾಲು ಮತ್ತು ಮಾಂಸಕ್ಕಾಗಿಯೇ ಇವುಗಳನ್ನು ಸಾಕುತ್ತಾರೆ. ಬೇರೆಲ್ಲಾಮೇಕೆಗಳಿಗೆ ಹೋಲಿಸಿದರೆ, ಜಮನಾಪುರಿ ಮೇಕೆಯ ಮಾಂಸದಲ್ಲಿ ಕೊಬ್ಬಿನಂಶ ಕಡಿಮೆ. ಇವುಗಳ ದೇಹವು ಬಿಳಿ, ಕಪ್ಪು, ಕಂದು ಮತ್ತು ಹಳದಿ ಬಣ್ಣಗಳಿಂದ ಕೂಡಿರುತ್ತದೆ. ಉದ್ದವಾದ ಜೋಲು ಕಿವಿಗಳು (ಸುಮಾರು 25 ಸೆಂ.ಮೀ.) ಮತ್ತು ಕೊಂಬುಗಳು ಜಮನಾಪುರಿ ಮೇಕೆಗಳ ವಿಶೇಷತೆ.

ವ್ಯವಸ್ಥಿತ ಮೇಕೆ ಶೆಡ್‌
ತಮ್ಮ ಜಮೀನಿನ ಒಂದು ಭಾಗದ (30×25) ಜಾಗದಲ್ಲಿ ಸುಮಾರು 4 ಲಕ್ಷ ವೆಚ್ಚದಲ್ಲಿ ಆಧುನಿಕ ಮೇಕೆ ಶೆಡ್‌ ನಿರ್ಮಿಸಿದ್ದಾರೆ. ಇದು ನೆಲಮಟ್ಟದಿಂದ 4.5 ಅಡಿ ಎತ್ತರವಿದೆ. ಶೆಡ್ಡಿನ ಕೆಳಭಾಗದಲ್ಲಿ ಮೇಕೆ ಗೊಬ್ಬರದ ಶೇಖರಣೆಗೆ ಸೂಕ್ತವಾದ ಸ್ಥಳವಿದೆ. ಶೆಡ್ಡಿನಲ್ಲಿ (10×10)ನ ಹಾಗೆ 6 ಭಾಗಗಳನ್ನಾಗಿ ವಿಂಗಡಿಸಿ ಐದು ಅಡಿ ಮಧ್ಯ ಪ್ಯಾಸೇಜ್‌ ಬಿಟ್ಟು ಕೊಂಡಿದ್ದಾರೆ. ಶೆಡ್ಡಿನಲ್ಲಿ ಸೂಕ್ತವಾದ ಗಾಳಿ, ಬೆಳಕು, ನೀರಿನ ವ್ಯವಸ್ಥೆ ಚೆನ್ನಾಗಿದೆ.

ಆಹಾರ ಪದ್ಧತಿ
ಈ ಮೇಕೆಗಳು ಎಲ್ಲಾ ಹವಾಮಾನ ಪರಿಸ್ಥಿತಿಗಳಿಗೂ ಬೇಗ ಹೊಂದಿಕೊಳ್ಳುತ್ತವೆ ಎನ್ನುತ್ತಾರೆ ಉಮೇಶ್‌. ಪ್ರತಿ ಮೇಕೆಗೂ 250 ಗ್ರಾಂ ಮುಸುಕಿನ ಜೋಳ, 11 ಗಂಟೆ ಸುಮಾರಿಗೆ ಒಣ ಮೇವು (ಒಣ ಹುಲ್ಲು, ಕಡಲೆಬಳ್ಳಿ) ಮತ್ತೆ 4 ಗಂಟೆಗೆ ಒಣಮೇವು, ಸಂಜೆ ದ್ವಿದಳ ಧಾನ್ಯಗಳಾದ (ಹುರುಳಿ ಕಾಳು, ಅವರೆ ಕಾಳು, ಅಲಸಂದೆ ಕಾಳು, ಬಟಾಣಿ ಕಾಳು) ಮಿಲ್‌ ಮಾಡಿಸಿರುವ ಪೌಡರನ್ನು ಪ್ರತಿ ಮೇಕೆಗೂ 250 ಗ್ರಾಂ ನೀರಿನಲ್ಲಿ ಕಲಸಿ ತಿನ್ನಿಸುತ್ತಾರೆ. ಮತ್ತೆ ರಾತ್ರಿ 9 ಗಂಟೆಗೆ ಹಸಿಮೇವನ್ನು ಕಟ್ಟುತ್ತಾರೆ, ಕಾಲಕಾಲಕ್ಕೆ ನೀರು ಕುಡಿಸುತ್ತಾರೆ.

ಒಂದು ಮರಿ ಹುಟ್ಟಿದರೂ ಲಾಭ
ಜಮನಾಪುರಿ ಮೇಕೆಯು ಎರಡು ವರ್ಷಕ್ಕೆ ಮೂರು ಬಾರಿ ಮರಿ ಹಾಕುತ್ತವೆ. 90%ರಷ್ಟು ಬಾರಿ ಮೂರು ಮರಿಗಳನ್ನು ಹಾಕುವ ಸಾಧ್ಯತೆ ಇರುತ್ತದೆ. 60%ರಷ್ಟು ಬಾರಿ ಎರಡು ಮರಿಗಳನ್ನು ಹಾಕುವ ಸಾಧ್ಯತೆ ಇರುತ್ತದೆ. ಒಂದು ಮರಿ ಹಾಕುವ ಸಾಧ್ಯತೆ ತುಂಬಾ ವಿರಳ. ಒಂದು ವೇಳೆ ಹಾಕಿದಲ್ಲಿ, ಆ ಮರಿ ದಷ್ಟಪುಷ್ಟವಾಗಿರುತ್ತದೆ. ಹುಟ್ಟಿದ ಮರಿ 5- 6 ಕೆ.ಜಿ ತೂಗುತ್ತದೆ. ಹಾಗಾಗಿ ಒಂದು ಮರಿ ಹುಟ್ಟಿದರೂ ಲಾಭ ಹೆಚ್ಚಿರುತ್ತದೆ. ಜಮನಾಪುರಿ ಮೇಕೆಯು ಹುಟ್ಟಿದ 8ರಿಂದ 12 ತಿಂಗಳಲ್ಲಿ ಸಂತಾನೋತ್ಪತಿಗೆ ಸಿದ್ಧಗೊಳ್ಳುತ್ತದೆ. ಜಮನಾಪುರಿ ಮೇಕೆಯ ಜೀವಿತಾವಧಿ 18 ವರ್ಷಗಳು. ಉಮೇಶ್‌ರವರು ತಮ್ಮಲ್ಲಿರುವ ನಾಟಿ ಮೇಕೆಗಳಿಗೆ ಜಮನಾಪುರಿ ಮೇಕೆಗಳನ್ನು ಕ್ರಾಸ್‌ ಮಾಡಿಸಿ ಉತ್ತಮ ಗುಣಮಟ್ಟದ ಜಮನಾಪುರಿ ಮೇಕೆಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡುತ್ತಾರೆ.

Advertisement

ತೂಕದ ವಿಷಯ
ಜಮನಾಪುರಿ ಮೇಕೆ ಮರಿಗಳು ಸುಮಾರು 5 ರಿಂದ 6 ಕೆ.ಜಿ ತೂಕವಿರುತ್ತವೆ. ಒಂದು ವರ್ಷದಲ್ಲೇ 26 ಕೆ.ಜಿ ತೂಗುವಷ್ಟು ಬೆಳೆಯುತ್ತವೆ. ಮೂರು ವರ್ಷಗಳಲ್ಲಿ ಗಂಡು ಮೇಕೆ ಏನಿಲ್ಲವೆಂದರೂ 120 ಕೆ.ಜಿ. ತೂಕ ಹೊಂದಿರುತ್ತವೆ. ಹೆಣ್ಣು ಮೇಕೆಯು 90 ಕೆ.ಜಿ ತೂಗುತ್ತದೆ. ಒಂದು ವರ್ಷ ವಯಸ್ಸಿನ ಜಮನಾಪುರಿ ಮೇಕೆಗೆ ಕನಿಷ್ಠ 20- 25 ಸಾವಿರ ರೂಪಾಯಿ ಬೆಲೆ ಇದೆ. ಒಂದು ಮೇಕೆ ಸರಾಸರಿ 2.5 ಲೀ- 3 ಲೀ. ಹಾಲನ್ನು ಕೊಡುತ್ತದೆ. ಜಮನಾಪುರಿ ಮೇಕೆ ಹಾಲು ತುಂಬಾ ಆರೋಗ್ಯಕರವಾಗಿದ್ದು 5%ನಷ್ಟು ಕೊಬ್ಬಿನಂಶವನ್ನು ಹೊಂದಿರುತ್ತದೆ.

ಔಷಧೋಪಚಾರ
ಮೇಕೆಗಳಿಗೆ ರೋಗಗಳು ಬರುವುದು ತುಂಬಾ ವಿರಳ ಆದರೂ ಉಮೇಶ್‌ರವರು ತಿಂಗಳಿಗೊಮ್ಮೆ ಮೇಕೆಗಳನ್ನು ಪಶುವೈದ್ಯರ ಬಳಿ ತಪಾಸಣೆ ಮಾಡಿಸುತ್ತಾರೆ. ಮೇಕೆಗಳಿಗೆ ಗಾಯವಾದರೆ ಟಾಪಿಕ್ಯೂರ್‌ ಸ್ಪ್ರೆà ಬಳಸುತ್ತಾರೆ.

– ಫೈರ್ಮಾನ್‌ ಕೆ.,ಪಟ್ಟನಾಯಕನಹಳ್ಳಿ
ಮಾಹಿತಿ: 9740773802

Advertisement

Udayavani is now on Telegram. Click here to join our channel and stay updated with the latest news.

Next