ಮಡಿಕೇರಿ: ಗೋವಾದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಆರೋಪಿ ಸೇರಿದಂತೆ ಮೂವರನ್ನು ಗೋವಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದಾಪುರ ಹೈಸ್ಕೂಲ್ ಪೈಸಾರಿ ನಿವಾಸಿ ಶಾಜಿ ಸೇರಿದಂತೆ ಕೇರಳ ರಾಜ್ಯದ ಶರೀಫ್ ಹಾಗೂ ಶ್ರೀತು ಬಂಧಿತರು.
ಪಣಜಿಯ ಪೆರನಮ್ ಸೇರಿದಂತೆ ಸುತ್ತಲಿನ ಪ್ರವಾಸಿ ತಾಣಗಳಲ್ಲಿ, ಜನನಿಬಿಡ ಪ್ರದೇಶದಲ್ಲಿ ಭಾರತೀಯರು ಹಾಗೂ ವಿದೇಶಿಯರು ತಂಗುತ್ತಿದ್ದ ಮನೆ, ರೆಸಾರ್ಟ್ ಮತ್ತಿತರೆಡೆ ಬೀಗ ಮುರಿದು ಮತ್ತು ಕಿಟಕಿ ಒಡೆದು ಬೆಲೆಬಾಳುವ ವಸ್ತುಗಳು, ಹಣವನ್ನು ಮೂವರು ದೋಚುತ್ತಿದ್ದರು ಎಂಬ ಆರೋಪದಡಿ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದರು. ಈಗ ಮೂವರನ್ನು ಗೋವಾ ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ. ಆರೋಪಿಗಳಿಂದ ಅಪಾರ ಪ್ರಮಾಣದ ನಗದು, ಬೆಲೆ ಬಾಳುವ ಕೆಮರಾ, ಲೆನ್ಸ್, ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್, ಲ್ಯಾಪ್ಟಾಪ್, ಆಭರಣ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.