ಪಣಜಿ: ಮಹತ್ವಾಕಾಂಕ್ಷೆಯ ಕಳಸಾ-ಬಂಡೂರಿ ಅಣೆಕಟ್ಟು ಯೋಜನೆ ಪೂರ್ಣಗೊಳಿಸುವ ಮೂಲಕ ಗೋವಾದ ಮಹಾದಾಯಿ ನೀರನ್ನು ತಿರುಗಿಸಲು ಕರ್ನಾಟಕ ಮುಂದಾಗಿದೆ. ಈ ಅಣೆಕಟ್ಟು ನಿರ್ಮಿಸಲು ಹಳತಾರ ಮತ್ತು ಕಳಸಾ ಪ್ರದೇಶಗಳಲ್ಲಿ ಮಣ್ಣು ಪರೀಕ್ಷೆ ಜತೆಗೆ ಉದ್ದೇಶಿತ ಕಾಲುವೆ ಅಗೆಯಲು ಗುರುತು ಹಾಕುವುದು ಬಹುತೇಕ ಪೂರ್ಣಗೊಂಡಿದೆ ಎಂದು ಗೋವಾ ಫಾರ್ವರ್ಡ್ ಶಾಸಕ ವಿಜಯ್ ಸರ್ದೇಸಾಯಿ ಹಾಗೂ ಪರಿಸರ ಹೋರಾಟಗಾರ ರಾಜೇಂದ್ರ ಕೇರ್ಕರ್ ಹೇಳಿದ್ದಾರೆ.
ಅವರು ಶುಕ್ರವಾರ ಕಳಸಾ-ಬಂಡೂರಿ ನಾಲಾ ವ್ಯಾಪ್ತಿಯ ಚೋರ್ಲಾ ಮಹಾದಾಯಿ ಜಲಾನಯನ ಪ್ರದೇಶದ ಉದ್ದೇಶಿತ ಹಲ್ತಾರಾ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕರ್ನಾಟಕವು ಮಹದಾಯಿ ಕಣಿವೆಯಲ್ಲಿ ಕೈಗೊಂಡಿರುವ ಹೊಸ ಯೋಜನೆಗಳು ಹಾಗೂ ಅದರಿಂದ ಗೋವಾದ ಮೇಲಾಗುವ ಪರಿಣಾಮ ಬಗ್ಗೆ ಚರ್ಚಿಸಿದರು.
ಗೋವಾ ಫಾರ್ವರ್ಡ್ ಉಪಾಧ್ಯಕ್ಷ ದಿಲೀಪ್ ಪ್ರಭುದೇಸಾಯಿ ಉಪಸ್ಥಿತರಿದ್ದರು. ಈ ವೇಳೆ ಸರ್ದೇಸಾಯಿ ಮಾತನಾಡಿ, ಕರ್ನಾಟಕವು ಮಹದಾಯಿ ನೀರನ್ನು ತಿರುಗಿಸಿದರೆ, ಗೋವಾದ ಬರ್ದೇಶ್ ತಾಲೂಕಿಗೆ ಭವಿಷ್ಯದಲ್ಲಿ ನೀರಿನ ಕೊರತೆ ಎದುರಾಗಲಿದೆ.
ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರು ಮಹದಾಯಿ ತನ್ನ ತಾಯಿ ಎಂದು ಹೇಳುತ್ತಾರೆ. ಆದರೆ ಅವರು ಅದರ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕರ್ನಾಟಕವು ಕಳಸಾ ಬಂಡೂರಿ ನಾಲಾ ಪ್ರದೇಶದಲ್ಲಿ ಏನು ಮಾಡುತ್ತಿದೆ ಎಂಬುದನ್ನು ಸಾಕ್ಷಿ ಸಮೇತ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ.
ಅವರು ಕರ್ನಾಟಕದ ಈ ಷಡ್ಯಂತ್ರಗಳನ್ನು ನ್ಯಾಯಾಧೀಕರಣದ ಮುಂದೆ ಮಂಡಿಸಬೇಕು ಎಂದರು. ಕೇರ್ಕರ್ ಮಾತನಾಡಿ, ಕರ್ನಾಟಕ ಸರ್ಕಾರವು ನ್ಯಾಯಾ ಧೀಕರಣದ ಮುಂದೆ ಹಲತರ ಮತ್ತು ಕಳಸಾ ಅಣೆಕಟ್ಟು ನಿರ್ಮಾಣಕ್ಕೆ ಸೂಕ್ತವಾಗಿದೆ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದೆ. ಅವರು ಕಾಲುವೆಗೆ ಮಾರ್ಕಿಂಗ್ ಸಹ ಪೂರ್ಣಗೊಳಿಸಿದ್ದಾರೆ. ಗೋವಾ ಈಗ ಕ್ರಮಕೈಗೊಳ್ಳದಿದ್ದರೆ, ನಂತರ ಪರಿಸ್ಥಿತಿ ಕೈ ಮೀರುತ್ತದೆ ಎಂದು ಹೇಳಿದರು.