ಪಣಜಿ: ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ವಿಶ್ವದಾದ್ಯಂತ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ. ಗೋವಾದ ಹಲವು ಜನ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಸಿಲುಕಿದ್ದಾರೆ. ಗೋವಾದ ಬಾಣಾವಲಿಯ ರೆರೇರಾ ಕುಟುಂಬದ 19 ವರ್ಷದ ವಿದ್ಯಾರ್ಥಿ ಜೇಡನ್ ತನ್ನ ಜೀವ ಉಳಿಸಿಕೊಳ್ಳಲು ಸ್ನೇಹಿತನ ಸಹಾಯದಿಂದ ಉಕ್ರೇನ್‍ನಲ್ಲಿ ಬಂಕರ್ ನಲ್ಲಿ ಆಶ್ರಯ ಪಡೆದಿದ್ದಾನೆ. ಆತನು ಸುರಕ್ಷಿತವಾಗಿ ಭಾರತಕ್ಕೆ ಮರಳಲೆಂದು ಪ್ರಾರ್ಥನೆಗಳು ನಡೆಯುತ್ತಿದೆ.
ಗೋವಾದ ಮಡಗಾಂವನಿಂದ ಎಂಟು ಕಿ.ಮಿ ದೂರದಲ್ಲಿರುವ ಬಾಣಾವಲಿಯ ಪೆರೇರಾ ಕುಟುಂಬದ ಜೇಡನ್‍ನನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆಯುತ್ತಿದೆ. ವಿದ್ಯಾಭ್ಯಾಸಕ್ಕಾಗಿ ಈತ ಉಕ್ರೇನ್‍ಗೆ ಹೋಗಿದ್ದ. ಕಳೆದ ಕೆಲ ದಿನಗಳಿಂದ ಅಲ್ಲಿ ಸಂಕಷ್ಟ ಪರಿಸ್ಥಿತಿ ಎದುರಾಗಿದ್ದು ಈತ ಆಹಾರದ ಕೊರತೆಯನ್ನೂ ಅನುಭವಿಸುತ್ತಿದ್ದಾನೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಸದ್ಯ ಈತನು ತನ್ನ ಸ್ನೇಹಿತನೊಂದಿಗೆ ಬಂಕರ್ ನಲ್ಲಿ ಆಶ್ರಯ ಪಡೆದಿದ್ದಾನೆ ಎನ್ನಲಾಗಿದೆ.
ಉಕ್ರೇನ್‍ನ ಪಶ್ಚಿಮ ಗಡಿಗೆ ಬರುವಂತೆ ಭಾರತೀಯ ರಾಯಭಾರಿ ಕಛೇರಿ ವಿದ್ಯಾರ್ಥಿಗಳಿಗೆ ಮನವಿ ಮಾಡಿದೆ. ಆದರೆ ಸದ್ಯದ ಯುದ್ಧ ಪರಿಸ್ಥಿತಿಯಲ್ಲಿ ರಸ್ತೆಗಳಲ್ಲಿ ನಡೆದಾಡುವುದೇ ದುಸ್ತರವಾಗಿದ್ದು ಗಡಿ ತಲುಪುವುದು ಹೇಗೆ ಎಂಬ ಸಮಸ್ಯೆ ಎದುರಾಗಿದೆ. ಕೆಲವೆಡೆ ರಷ್ಯಾ ದಾಳಿಯಿಂದಾಗಿ ರಸ್ತೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ಗೋವಾದ ವಿದ್ಯಾರ್ಥಿ ಜೇಡನ್ ಪ್ರಸ್ತುತ ಕೇರಳ ಮತ್ತು ತಮಿಳುನಾಡಿನ ತನ್ನ ಸಹವರ್ತಿ ವಿದ್ಯಾರ್ಥಿಗಳೊಂದಿಗೆ ಹಾಸ್ಟೆಲ್‍ನ ಕೆಳಗೆ ಬಂಕರ್ ನಲ್ಲಿ ಅಡಗಿಕೊಂಡಿದ್ದಾನೆ. ಈತನು ಸುರಕ್ಷಿತವಾಗಿ ಮರಳಲೆಂದು ದೇವರಲ್ಲಿ ಪ್ರಾರ್ಥಿಸಲಾಗುತ್ತಿದೆ ಎಂದು ಪೆರೇರಾ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ರಷ್ಯಾ, ಉಕ್ರೇನ್ ಯುದ್ಧ: ಕೂಡಲೇ ಕೀವ್ ಬಿಟ್ಟು ಹೊರಡಿ: ಭಾರತೀಯರಿಗೆ ರಾಯಭಾರಿ ಕಚೇರಿ ಮನವಿ
ಗೋವಾದ ವಿದ್ಯಾರ್ಥಿ ಜೇಡನ್ ರಷ್ಯಾ ಗಡಿಯಿಂದ 60 ಕಿ.ಮಿ ದೂರದಲ್ಲಿರುವ ಸಾಮಿಯಲ್ಲಿ ವಾಸಿಸುತ್ತಾನೆ. ಉಕ್ರೇನ್‍ನಿಂದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಉಕ್ರೇನ್‍ನಲ್ಲಿ ಸಿಲುಕಿಕೊಂಡಿರುವ ಭಾರತೀಯರು ಉಕ್ರೇನ್-ರೊಮೇನಿಯಾ ಗಡಿಗೆ ಆಗಮಿಸಬೇಕಿದೆ. ಅಲ್ಲಿ ಬಂದು ತಲುಪಿದರೆ ಮಾತ್ರ ಭಾರತೀಯರನ್ನು ಕರೆತರಲು ಸಾಧ್ಯ.
ವಿದ್ಯಾರ್ಥಿ ಜೇಡನ್ ವಾಸಿಸುವ ನಗರದಿಂದ ಗಡಿಯನ್ನು ತಲುಪಲು 16 ಗಂಟೆಗಳು ತೆಗೆದುಕೊಳ್ಳುತ್ತದೆ. ಈ ಮಾರ್ಗವು ಉಕ್ರೇನ್ ರಾಜಧಾನಿ ಕೀವ್ ಮೂಲಕ ಹಾದುಹೋಗುತ್ತದೆ. ಹಾಗಾಗಿ ಪೆರೇರಾ ಕುಟುಂಬಸ್ಥರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.