ಪಣಜಿ: ಗೋವಾ ವಿಧಾನಸಭಾ ಚುನಾವಣೆಗೆ ಒಂದು ತಿಂಗಳು ಬಾಕಿ ಇರುವಾಗಲೇ ಭಾರತೀಯ ಜನತಾ ಪಕ್ಷದ ಸಚಿವ ಮೈಕೇಲ್ ಲೋಬೋ ಸೋಮವಾರ(ಜನವರಿ 10) ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಲೋಬೋ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪಾದಯಾತ್ರೆಯಿಂದ ಜನಕ್ಕೆ ನೀರು ಸಿಗಲ್ಲ, ಕೋವಿಡ್ ಸಿಗುತ್ತದೆ: ಸಚಿವ ಈಶ್ವರಪ್ಪ
“ನಾನು ನನ್ನ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತೇನೆ. ಅಲ್ಲದೇ ಭಾರತೀಯ ಜನಾತ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿರುವುದಾಗಿ” ಮೈಕೇಲ್ ಲೋಬೋ ತಿಳಿಸಿದ್ದಾರೆ.
ಲೋಬೋ ಅವರು ಗೋವಾ ರಾಜ್ಯದ ತ್ಯಾಜ್ಯ ನಿರ್ವಹಣಾ ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಸಾಮಾನ್ಯ ಜನರ ಪಕ್ಷವಾಗಿ ಉಳಿದಿಲ್ಲ ಎಂದು ಮತದಾರರು ಆರೋಪಿಸಿರುವುದಾಗಿ ಲೋಬೋ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಇವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆಯೋ ಅಥವಾ ಬೇರೆ ಪಕ್ಷದ ಜತೆ ಕೈಜೋಡಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದ್ದು, ನಾನು ಯಾವುದೇ ಪಕ್ಷಕ್ಕೆ ಸೇರ್ಪಡೆಗೊಂಡರೂ ಅತೀ ಹೆಚ್ಚಿನ ಸ್ಥಾನವನ್ನು ಗೆಲ್ಲಿಸುವುದಾಗಿ ಲೋಬೋ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ಮೈಕೇಲ್ ಲೋಬೋ ಅವರು ಭಾರತೀಯ ಜನತಾ ಪಕ್ಷವನ್ನು ಬಹಿರಂಗವಾಗಿ ಟೀಕಿಸುತ್ತಿದ್ದರು. ಅಲ್ಲದೇ ಮಾಜಿ ಮುಖ್ಯಮಂತ್ರಿ ಮನೋಹರ್ ಪರ್ರಕರ್ ಅವರಿದ್ದ ಸಂದರ್ಭದಲ್ಲಿನ ಬಿಜೆಪಿ ಪಕ್ಷವಾಗಿ ಉಳಿದಿಲ್ಲ ಎಂದು ಲೋಬೋ ದೂರಿರುವುದಾಗಿ ವರದಿ ತಿಳಿಸಿದೆ.