ಪಣಜಿ: ಗೋವಾ ಕನ್ನಡಿಗರ ಕನಸು ನನಸಾಗುವ ಕಾಲ ಹತ್ತಿರ ಬಂದಿದ್ದು, ಕನ್ನಡ ಭವನದ ಕನಸು ನನಸಾಗಲಿದೆ. ಕರ್ನಾಟಕ ಸರ್ಕಾರವು 10 ಕೋಟಿ ಹಣ ಮಂಜೂರು ಮಾಡುವ ಮೂಲಕ ಕನ್ನಡಿಗರಿಗೆ ಒಂದು ವೇದಿಕೆ ಕಲ್ಪಿಸಿಕೊಡುತ್ತಿದೆ, ಇದಕ್ಕಾಗಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರಿಗೆ ಗೋವಾ ರಾಜ್ಯದ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಅಖಿಲ ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ಧಣ್ಣ ಮೇಟಿ ನುಡಿದರು.
ಕರ್ನಾಟಕ ಸರ್ಕಾರವು ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಿಧಿ ಮಂಜೂರು ಮಾಡಿರುವುದಕ್ಕೆ ಧನ್ಯವಾದ ಸಲ್ಲಿಸಲು ಮತ್ತು ಕನ್ನಡ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಕಲಂಗುಟ್‍ನಲ್ಲಿ ಭಾನುವಾರ ವಿವಿಧ ಕನ್ನಡ ಸಂಘಗಳು ಸಭೆ ಸೇರಿ ಚರ್ಚೆ ನಡೆಸಿದರು.
ಗೋವಾದಲ್ಲಿ ಯಾವ ಸ್ಥಳದಲ್ಲಿ ಕನ್ನಡ ಭವನ ನಿರ್ಮಾಣವಾದರೆ ಸೂಕ್ತ ಎಂಬ ನಿಟ್ಟಿನಲ್ಲಿ ಭಾನುವಾರದ ಸಭೆಯಲ್ಲಿ ವಿವಿಧ ಕನ್ನಡ ಸಂಘದ ಪದಾಧಿಕಾರಿಗಳು ಚರ್ಚೆ ನಡೆಸಿದರು. ಗೋವಾದ ವಾಸ್ಕೊದಲ್ಲಿ ಕನ್ನಡ ಭವನ ನಿರ್ಮಾಣವಾದರೆ ಉತ್ತಮ ಎಂದು ಕನ್ನಡ ಸಂಘಟನೆಗಳು ಸಮ್ಮತಿ ಸೂಚಿಸಿದವು.
ಡಿಸೆಂಬರ್ ನಲ್ಲಿ ಧಾರವಾಡ ವಿದ್ಯಾವರ್ಧಕ ಸಂಘ ಮತ್ತು ಕಲಂಗುಟ್ ಕನ್ನಡ ಸಂಘ ಒಟ್ಟಾಗಿ ಗೋವಾದ ಕಲಂಗುಟ್‍ನಲ್ಲಿ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆಯೂ ಚರ್ಚೆ ನಡೆಸಲಾಯಿತು.
ಕಲಂಗುಟ್ ಕನ್ನಡಿಗರನ್ನು ಒಟ್ಟಾಗಿಸಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಕಲಂಗುಟ್ ಕನ್ನಡ ಸಂಘದ ಅಧ್ಯಕ್ಷ ಮುರಳಿ ಮೋಹನ್ ಶೆಟ್ಟಿ ಮತ್ತು ಉಪಾಧ್ಯಕ್ಷ ರಾಘವ ಶೆಟ್ಟಿ ರವರನ್ನು ಅಖಿಲ ಗೋವಾ ಕನ್ನಡ ಮಹಾಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್, ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಗೋವಾ ಕನ್ನಡ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಸೇರಿದಂತೆ ವಿವಿಧ ಕನ್ನಡ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.