ಪಣಜಿ: ಗೋವಾ ರಾಜ್ಯಕ್ಕೆ ಕೂಲಿ ಕಾರ್ಮಿಕ ಕೆಲಸಕ್ಕಾಗಿ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಗಳು ಗೋವಾಕ್ಕೆ ವಲಸೆ ಬರುತ್ತಾರೆ. ಆದರೆ ಇಂತಹ ಸಂದರ್ಭದಲ್ಲಿ ಅವರ ಮಕ್ಕಳು ಇಲ್ಲಿ ಶಿಕ್ಷಣದಿಂದ ವಂಚಿತರಾಗುತ್ತಾರೆ. ಇದರಿಂದಾಗಿ ಪ್ರಮುಖವಾಗಿ ಇಂತರ ಕನ್ನಡಿಗರ ಮಕ್ಕಳಿಗೆ ಹಾಗೂ ಗೋವಾದಲ್ಲಿ ಈಗಾಗಲೇ ನೆಲೆಸಿರುವ ಕನ್ನಡಿಗರ ಮಕ್ಕಳು ತಮ್ಮ ಮಾತೃ ಭಾಷೆ ಕನ್ನಡವನ್ನು ಕಲಿಸಬೇಕು ಎಂಬ ಉದ್ದೇಶದಿಂದ ನಾವು ಕರ್ಮಭೂಮಿ ಕನ್ನಡ ಸಂಘದ ವತಿಯಿಂದ ಕನ್ನಡ ಕಲಿಕಾ ಕಾರ್ಯಕ್ರಮ ಆರಂಭಿಸಲಾಗಿದೆ.
ಸದ್ಯ ಇಲ್ಲಿ ಮಕ್ಕಳಿಗೆ ಕನ್ನಡ ಭಾಷೆಯ ಉಚಿತ ಟ್ಯೂಶನ್ ನೀಡಲಾಗುತ್ತಿದ್ದು, ಮುಂದೆ ಇಲ್ಲಿ ಶಾಲಾ ತರಗತಿಯನ್ನು ಆರಂಭಿಸಲಾಗುವುದು ಎಂದು ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹಾಗೂ ಕರ್ಮಭೂಮಿ ಕನ್ನಡ ಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ ಹೇಳಿದರು.
ಗೋವಾದ ಬಿಚೋಲಿಯಲ್ಲಿ ಕರ್ಮಭೂಮಿ ಕನ್ನಡ ಸಂಘದ ವತಿಯಿಂದ ಕನ್ನಡ ಕಲಿಕಾ ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಇಂದು ಇಲ್ಲಿ ನನ್ನ ಸ್ವಂತ ಜಾಗದಲ್ಲಿ ಪುಟ್ಟ ಶಾಲಾ ಕೊಠಡಿಯನ್ನು ನಿರ್ಮಾಣ ಮಾಡಿದ್ದೇನೆ. ಗೋವಾದಲ್ಲಿರುವ ಕನ್ನಡಿಗರ ಮಕ್ಕಳಿಗೆ ಉಚಿತವಾಗಿ ಕನ್ನಡದಲ್ಲಿ ಶಿಕ್ಷಣ ಲಭಿಸಭೇಕು ಎಂಬುಬೇ ನನ್ನ ಮುಖ್ಯ ಉದ್ದೇಶವಾಗಿದೆ. ಕರ್ನಾಟಕ ಮತ್ತು ಗೋವಾ ಸರ್ಕಾರದಿಂದ ಸಹಾಯ ಸಹಕಾರ ಲಭಿಸಿದರೆ ಇಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯವರೆಗೂ ತರಗತಿಯನ್ನು ಆರಂಭಿಸುವ ಕನಸು ನನ್ನದಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಕನ್ನಡ ಶಿಕ್ಷಣ ಮಾತ್ರವಲ್ಲದೆಯೇ ಪಠ್ಯಪುಸ್ತಕವನ್ನೂ ಉಚಿತವಾಗಿ ನೀಡಲಾಗುವುದು. ಗೋವಾದಲ್ಲಿ ಎಲ್ಲಿಯೇ ನೆಲೆಸಿದ್ದರೂ ಆ ಕನ್ನಡಿಗ ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಲು ಸಹಾಯ ಮಾಡುತ್ತೇವೆ. ಗೋವಾದಲ್ಲಿರುವ ಇಂದಿನ ಮಕ್ಕಳು ಮಾತೃಭಾಷೆ ಕನ್ನಡವನ್ನು ಮರೆಯಬಾರದು. ಕನ್ನಡ ಶಾಲೆ ಆರಂಭಿಸುವ ಬಹು ವರ್ಷಗಳ ನಮ್ಮ ಕನಸು ಇಂದು ನೆರವೇರಿದಂತಾಗಿದೆ ಎಂದು ಹನುಮಂತಪ್ಪ ಶಿರೂರ್ ರೆಡ್ಡಿ ನುಡಿದರು.
ಗೋವಾದಲ್ಲಿರುವ ಎಲ್ಲ ಕನ್ನಡ ಸಂಘಟನೆಗಳೂ ತಮ್ಮ ತಮ್ಮ ಭಾಗದಲ್ಲಿರುವ ಕನ್ನಡಿಗ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಶಿಕ್ಷಣದ ಅಗತ್ಯವಿದ್ದರೆ ಅದಕ್ಕೆ ಸಹಾಯ ಸಹಕಾರ ಕಲ್ಪಿಸಲು ನಾವು ಸಿದ್ಧರಿದ್ದೇವೆ ಎಂದು ಹನುಮಂತಪ್ಪ ಶಿರೂರ್ ರೆಡ್ಡಿ ನುಡಿದರು.
ಈ ಸಂದರ್ಭದಲ್ಲಿ ಕರ್ಮಭೂಮಿ ಕನ್ನಡ ಸಂಘದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹೊಸ್ಮನಿ, ಖಜಾಂಚಿ ಸುರೇಶ್ ರಕ್ಸಕಿ, ಕರ್ಮಭೂಮಿ ಕನ್ನಡ ಸಂಘದ ಬಸವರಾಜ ಅಬ್ಬಿಗೇರಿ, ಉಪಖಜಾಂಚಿ ಸಂಗಪ್ಪ ಕುರಿ, ಸಂಘದ ಸದಸ್ಯರಾದ ಬಸವರಾಜ ಹಿಪ್ಪರಗಿ, ಬಸವರಾಜ್ ಗುಡಿಗೇರಿ, ಮೆಹಬೂಬ್ ಸಯ್ಯದ್ ಉಪಸ್ಥಿತರಿದ್ದರು.