Advertisement

ಗೋವಾದಲ್ಲಿ  ಈಗ ಶುರು ಆಟ

03:45 AM Mar 12, 2017 | Team Udayavani |

ಪಣಜಿ: ಚಿಕ್ಕ ರಾಜ್ಯವಾದ ಗೋವಾದ ರಾಜಕಾರಣ ಚೊಕ್ಕವಾಗಿಲ್ಲ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನ ಬಹುಕಾಲದ ಎದುರಾಳಿ ಬಿಜೆಪಿಯನ್ನು ಹಿಂದಿಕ್ಕಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆಯಾದರೂ, ಸ್ಪಷ್ಟ ಬಹುಮತ ಪಡೆಯಲು ಅದಕ್ಕೆ ಸಾಧ್ಯವಾಗಿಲ್ಲ. ಗೋವಾದಲ್ಲಿ ಈ ಬಾರಿಯೂ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದ ಪರಿಕ್ಕರ್‌ ನೇತೃತ್ವದ ಬಿಜೆಪಿಯದ್ದೀಗ ಪೆಚ್ಚು ಮೋರೆ.

Advertisement

40 ಸ್ಥಾನಗಳಿರುವ ಗೋವಾ ವಿಧಾನಸಭೆಯಲ್ಲಿ ಸರಕಾರ ರಚಿಸಲು 21 ಸ್ಥಾನ ಪಡೆಯಬೇಕು. ಈ ಅಂಕಿಗೆ ಕಾಂಗ್ರೆಸ್‌ ಸಮೀಪದಲ್ಲಿದೆಯಾದರೂ, ಬಿಜೆಪಿ ಸುಮ್ಮನಂತೂ ಕೂಡುವುದಿಲ್ಲ. ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳಿಂದ “ಖರೀದಿ ಪ್ರಕ್ರಿಯೆ’ ಯಂತೂ ಜೋರಾಗಲಿದೆ. ಅಂದರೆ ಯಾರು ಅಧಿಕಾರಕ್ಕೇರುತ್ತಾರೆ ಎನ್ನುವುದನ್ನು ನಿರ್ಧರಿಸುವ ಶಕ್ತಿ ಈಗ ಸ್ಥಳೀಯ ಪಕ್ಷಗಳ ಪಾಲಾಗಿದೆ.

ಕಳೆದ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದ ಕೇಂದ್ರ ರಕ್ಷಣಾ ಸಚಿವ ಮನೋಹರ ಪರ್ರಿಕರ್‌ ಜಾದೂ ಈ ಬಾರಿಯೂ ನಡೆಯಲಿದೆ ಎಂದು ಭಾವಿಸಲಾಗಿತ್ತು. “ಮನೋಹರ್‌ ಅವರು ದೆಹಲಿಯಲ್ಲಿ ಕುಳಿತಿರಲಿ,
ಪಣಜಿಯಲ್ಲಿರಲಿ ರಾಜ್ಯ ಘಟಕದ ನಿಯಂತ್ರಣ ಅವರ ಕೈಯಲ್ಲೇ ಇರಲಿದೆ’ ಎಂದು ಜನವರಿ ತಿಂಗಳಲ್ಲಿ ಅಮಿತ್‌ ಶಾ ಘೋಷಿಸಿದ್ದೂ ಇದೇ ಕಾರಣಕ್ಕಾಗಿಯೇ. ಆದರೆ ಪರ್ರಿಕರ್‌ಗೆ ಅವರಿಗೆ ಸಿಎಂ ಕುರ್ಚಿಯಿಂದೆದ್ದು ಹೊರಟಾಗ ಇದ್ದ ವರ್ಚಸ್ಸು ಈಗಿಲ್ಲ ಎನ್ನುವುದು ದಿಟ. ಇದಕ್ಕೆ ಅನೇಕ ಕಾರಣಗಳಿವೆ. ತಮ್ಮ ಪಕ್ಷದಲ್ಲಿದ್ದ ಆರ್‌ಎಸ್‌ಎಸ್‌ನ ಬಲಿಷ್ಠ ನಾಯಕ ಸುಭಾಷ್‌ ವೆಲಿಂಗ್‌ಕಾರ್‌ ಅವರನ್ನು ಎದುರು ಹಾಕಿಕೊಂಡದ್ದು. ಇನ್ನು ಗೋವಾದಲ್ಲಿನ ಕ್ಯಾಸಿನೋಗಳನ್ನು ಮುಚ್ಚಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಆ ಕೆಲಸ ಮಾಡಲೇ ಇಲ್ಲ. ಬದಲಾಗಿ ಕ್ಯಾಸಿನೋಗಳ ಸಂಖ್ಯೆ
ಹೆಚ್ಚುತ್ತಲೇ ಹೋಯಿತು. ಈ ಸಂಗತಿಗಳೆಲ್ಲ ಮತದಾರರಲ್ಲಿ ಭ್ರಮನಿರಸನ ಹುಟ್ಟುಹಾಕಿದ್ದು ಸುಳ್ಳಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ ಗೋವನ್‌ ಬಿಜೆಪಿ ತನ್ನ ಬಹುಕಾಲದ ಮಿತ್ರ ಎಂಜಿಪಿ ಪಕ್ಷವನ್ನು ಮೂಲೆಗುಂಪಾಗಿಸಿದ್ದರಿಂದ ಸಾಂಪ್ರದಾಯಿಕ ಮತಗಳು ಚದುರಿಹೋಗಿರುವ ಸಾಧ್ಯತೆಯಿದೆ.

ಈಗ 3 ಸ್ಥಾನಗಳನ್ನು ಪಡೆದಿರುವ ಎಂಜಿಪಿಯೊಂದಿಗೆ ಮತ್ತೆ ಬಿಜೆಪಿ ಹತ್ತಿರವಾಗಬಹುದಾದರೂ ಅಧಿಕಾರಕ್ಕೆ ಬರಲು ಈ ಸಂಖ್ಯೆ ಸಾಕಾಗುವುದಿಲ್ಲ. ಸ್ವತಂತ್ರ ಅಭ್ಯರ್ಥಿಗಳ ಮೊರೆ ಹೋದರೂ 21 ಸ್ಥಾನಗಳು ಸಿಗುವುದು ದುಸ್ತರವೇ.
ಇತ್ತ ಬಿಜೆಪಿಯ ಸುತ್ತ ಸುತ್ತಿಕೊಂಡಿದ್ದ ಅಧಿಕಾರ ವಿರೋಧಿ ಅಲೆಯ ಮೇಲೆ ಕಾಂಗ್ರೆಸ್‌ ಈ ಬಾರಿ ಮುಂಚೂಣಿ ಸಾಧಿಸಲು ಯಶಸ್ವಿಯಾಗಿದೆ. 17 ಸ್ಥಾನ ಪಡೆದಿರುವ ಕಾಂಗ್ರೆಸ್‌ಗೆ ಇನ್ನೂ 4 ಸ್ಥಾನ ಸಿಕ್ಕರೂ ಕುರ್ಚಿ ದಕ್ಕುತ್ತದೆ. 3 ಸ್ಥಾನಗಳನ್ನು ಗೆದ್ದಿರುವ ಗೋವಾ ಫಾರ್ವರ್ಡ್‌ ಪಾರ್ಟಿ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಕೆಲ ದಿನಗಳ ಹಿಂದೆ ಹೇಳಿತ್ತು. ಆ ಪಕ್ಷದ ಜೊತೆ ಕೈ ಜೋಡಿಸುತ್ತೇವೆ ಎಂದು ಕಾಂಗ್ರೆಸ್‌ ಹೇಳಿದೆ. ಇದರ ಜೊತೆಗೆ 1 ಸ್ಥಾನ ಪಡೆದಿರುವ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ ಜೊತೆಯಾದರೆ ಕೈಗೆ ಕುರ್ಚಿ ಸುಲಭವಾಗಿ ದಕ್ಕಲಿದೆ. ಹಾಗೆಂದು ಕಾಂಗ್ರೆಸ್‌ಗೆà ಅಧಿಕಾರ ಎಂದೂ ಹೇಳಲಾಗದು. ಗದ್ದುಗೆಗೇರಲು ಬಿಜೆಪಿ ಏನಕೇನ ಪ್ರಯತ್ನಿಸಲಿದೆ. ಸ್ಥಳೀಯ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳು ಸಾಲಲಿಲ್ಲವೆಂದರೆ ಅದು ಆಪರೇಷನ್‌ ಕಮಲ ನಡೆಸಿದರೂ ಆಶ್ಚರ್ಯವಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next