Advertisement

ಗೋವಾದಲ್ಲಿ ಪರ್ರಿಕರ್‌ ರಕ್ಷಣಾತ್ಮಕ ಆಟ

03:45 AM Mar 13, 2017 | |

ಪಣಜಿ: ಒಂದೇ  ದಿನದಲ್ಲಿ ಗೋವಾದ ರಾಜಕೀಯ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. 40 ಸ್ಥಾನಗಳ ವಿಧಾನಸಭೆಯಲ್ಲಿ 17 ಸ್ಥಾನಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್‌ಗೆ ಬಿಜೆಪಿ ಶಾಕ್‌ ನೀಡಿದೆ. ಕಾಂಗ್ರೆಸ್‌ಗೆ ಅಧಿಕಾರಕ್ಕೆ ಬರಲು ಕೇವಲ 4 ಸ್ಥಾನಗಳು ಸಾಕು. ಆದರೆ 13 ಸೀಟು ಪಡೆದಿರುವ ಬಿಜೆಪಿ ಇನ್ನುಳಿದ 8 ಸ್ಥಾನಗಳೂ ತನ್ನ ಬತ್ತಳಿಕೆಗೆ ಸೇರಲಿವೆ ಎಂದು ಹೇಳಿ ಸರ್ಕಾರ ರಚಿಸಲು ಸಿದ್ಧತೆ ನಡೆಸಿದೆ! 

Advertisement

ರಾಜಕೀಯದಲ್ಲಿ ಯಾವಾಗ ಯಾರು ಬೇಕಾದರೂ ಉಲ್ಟಾ ಹೊಡೆಯಬಹುದು ಎನ್ನುವುದಕ್ಕೆ ಈ ವಿದ್ಯಮಾನ ಸಾಕ್ಷಿ. ಗೋವಾ ಫಾರ್ವರ್ಡ್‌ ಪಾರ್ಟಿ(ಜಿಎಫ್ಪಿ) ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದೆ. ವಿಶೇಷವೆಂದರೆ ಇದೇ ಪಕ್ಷ ಜನವರಿ ತಿಂಗಳಲ್ಲಿ ಕಾಂಗ್ರೆಸ್‌ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಇರಾದೆ ವ್ಯಕ್ತಪಡಿಸಿತ್ತು. ಆದರೆ ಆಗ ಅದರ ಇಚ್ಛೆಯನ್ನು ಕಾಂಗ್ರೆಸ್‌ ನಿರಾಕರಿಸಿತ್ತು. ಶನಿವಾರ ಫ‌ಲಿತಾಂಶ ಹೊರಬಿದ್ದ ಮೇಲೆ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌,  ಜಿಎಫ್ಪಿಯ ಬೆಂಬಲ ಪಡೆಯುವ ಮಾತನಾಡಿದ್ದರು. ಈ ಚುನಾವಣೆಯಲ್ಲಿ ಜಿಎಫ್ಪಿ 3 ಸ್ಥಾನಗಳನ್ನು ಪಡೆದಿರುವುದರಿಂದ, ಅದರ ಜೊತೆಗೆ 1 ಸ್ಥಾನ ಪಡೆದಿರುವ ಎನ್‌ಸಿಪಿಯ ಬೆಂಬಲ ಸಿಕ್ಕರೆ ಕಾಂಗ್ರೆಸ್‌ಗೆ ಕುರ್ಚಿ ಎಂದೇ ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸಿದ್ದರು. ಆದರೀಗ ಗೋವಾ ಫಾರ್ವರ್ಡ್‌ ಪಾರ್ಟಿ, ಕಮಲ ದಳವನ್ನು ಕೈಗೆತ್ತಿಕೊಂಡಿದೆ! 
 
ಇನ್ನು ಬಿಜೆಪಿಯ ಬಹುಕಾಲದ ಮಿತ್ರಪಕ್ಷವಾಗಿದ್ದು, ಈ ಚುನಾವಣೆಯಲ್ಲಿ ಬೇರೆಯಾಗಿದ್ದ ಮಹಾರಾಷ್ಟ್ರ ಗೋಮಂತಕ್‌ ಪಾರ್ಟಿಯಂತೂ ಹಳೆಯ ಸ್ನೇಹಿತನೊಟ್ಟಿಗೆ ಹೊಸ ದೋಸ್ತಿ ಮಾಡಿದೆ. 

ಗೋವಾದಲ್ಲಿ 3 ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅದರಲ್ಲಿ ಒಬ್ಬರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಸರಕಾರ ರಚಿಸಲು ಅಗತ್ಯವಿರುವ ಮತ್ತೂಂದು ಸ್ಥಾನವೂ ತನ್ನ ಬಳಿ ಇದೆ ಎನ್ನುತ್ತಿದೆ ಬಿಜೆಪಿ. ಮನೋಹರ್‌ ಪರಿಕ್ಕರ್‌ ಗೋವಾ ಮುಖ್ಯಮಂತ್ರಿಯಾಗುತ್ತಾರೆಂದರೆ ತಾನು ಬಿಜೆಪಿಗೆ ಬೆಂಬಲ ಕೊಡುವುದಾಗಿ ಜಿಎಫ್ಪಿ ಹೇಳಿತ್ತಾದರೂ, ಈ ಒಪ್ಪಂದ ಕುದುರಿಸುವುದಕ್ಕೆ ಭರ್ಜರಿಯಾಗಿಯೇ ಕುದುರೆ ವ್ಯಾಪಾರ ನಡೆದಿದೆ ಎಂದು ಆರೋಪಿಸುತ್ತಿದೆ ಕಾಂಗ್ರೆಸ್‌. 

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಮತಗಳಿಕೆ ಪ್ರಮಾಣದಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿದೆ ಎನ್ನುವುದು ವಿಶೇಷ. ಇಲ್ಲಿ ಬಿಜೆಪಿ ಶೇ.32.5ರಷ್ಟು ಮತಗಳನ್ನು ಗಳಿಸಿದೆ. ಅಂದರೆ, ಕಾಂಗ್ರೆಸ್‌ಗಿಂತ ಶೇ.4.1 ಕಡಿಮೆ. 40 ಸದಸ್ಯಬಲದ ವಿಧಾನಸಭೆಯಲ್ಲಿ 17 ಸೀಟುಗಳನ್ನು ಗೆದ್ದ ಕಾಂಗ್ರೆಸ್‌ನ ಮತ ಹಂಚಿಕೆ ಶೇ. 28.4 ಎಂದು ಭಾನುವಾರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಗೋವಾ ಹಾಗೂ ಮಣಿಪುರದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್‌ಗೆ ಸರ್ಕಾರ ರಚಿಸಲು ಆ ರಾಜ್ಯಗಳ ರಾಜ್ಯಪಾಲರು ಆಹ್ವಾನ ನೀಡಬೇಕು. ಅಮಿತ್‌ ಶಾ ಗೋವಾ ಹಾಗೂ ಮಣಿಪುರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಎಂದು ಹೇಳಿರುವುದು ಆಕ್ಷೇಪಾರ್ಹ. ಅತಿ ಹೆಚ್ಚು ಸ್ಥಾನ ಪಡೆದ ಕಾಂಗ್ರೆಸ್‌ಗೆ ಸರ್ಕಾರ ನಡೆಸುವ ಅಧಿಕಾರವಿದೆ ಎಂಬುದನ್ನು ಅವರು ಮರೆಯಬಾರದು.
– ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಸಂಸದೀಯ ನಾಯಕ

Advertisement
Advertisement

Udayavani is now on Telegram. Click here to join our channel and stay updated with the latest news.

Next