ಪಣಜಿ: ಗೋವಾದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದು ಚಲನಚಿತ್ರ ಚಿತ್ರೀಕರಣಕ್ಕೆ ನಿರ್ಬಂಧ ಹೇರಲಾಗಿದೆ. ರಾಜ್ಯದಲ್ಲಿ ಅಕ್ರಮವಾಗಿ ಯಾವುದೇ ಚಲನಚಿತ್ರದ ಚಿತ್ರೀಕರಣ ನಡೆದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೋವಾ ಮನೋರಂಜನಾ ಸೊಸೈಟಿ ಎಚ್ಚರಿಕೆ ನೀಡಿದೆ. ಇದರಿಂದಾಗಿ ಗೋವಾದಲ್ಲಿ ಖಾಸಗಿ ಸ್ಥಳಗಳಲ್ಲಿ ಚಲನಚಿತ್ರ ಚಿತ್ರೀಕರಣ ನಡೆಸುವುದು ಕೂಡ ಸಧ್ಯಕ್ಕೆ ಸಂಪೂರ್ಣ ಬಂದ್ ಆದಂತಾಗಿದೆ.
ಗೋವಾ ರಾಜ್ಯವು ಅತ್ಯಾಕರ್ಷಣೀಯ ಪ್ರವಾಸಿ ತಾಣಗಳಿಂದಾಗಿ ವಿವಿಧ ಭಾಷೆಯ ಚಲನಚಿತ್ರಗಳು ಹೆಚ್ಚಾಗಿ ಚಿತ್ರೀಕರಣಗೊಳ್ಳುವ ಪ್ರಮುಖ ಸ್ಥಳವಾಗಿದೆ. ಇದರಿಂದಾಗಿ ಗೋವಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಲನಚಿತ್ರ ಚಿತ್ರೀಕರಣ ನಡೆಸಲಾಗುತ್ತದೆ. ಗೋವಾ ಎಂಟರ್‍ಟೈನ್‍ಮೆಂಟ್ ಸೊಸೈಟಿ(ಇಎಸ್‍ಜಿ) ಇದು ತನ್ನ ನೋಂದಾಯಿತ ಚಲನಚಿತ್ರ ನಿರ್ಮಾಪಕರ ಮೂಲಕ ರಾಜ್ಯದಲ್ಲಿ ಚಲನಚಿತ್ರ ಚಿತ್ರೀಕರಣಕ್ಕೆ ಅನುಮತಿ ನೀಡುವ ಸಂಸ್ಥೆಯಾಗಿದೆ. ಇದರಿಂದಾಗಿ ಗೋವಾ ರಾಜ್ಯದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಚಲನಚಿತ್ರ ಚಿತ್ರೀಕರಣಕ್ಕೆ ಇಎಸ್‍ಜಿಯಿಂದ ಅನುಮತಿ ಅಗತ್ಯವಾಗಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ ಮೇ 6 ರಿಂದ ರಾಜ್ಯದಲ್ಲಿ ಚಲನಚಿತ್ರ ಚಿತ್ರೀಕರಣಕ್ಕೆ ನೀಡಲಾಗಿದ್ದ ಎಲ್ಲ ಅನುಮತಿಗಳನ್ನು ರದ್ಧುಗೊಳಿಸಲಾಗಿದೆ.
ಆದರೂ ಕೂಡ ರಾಜ್ಯದಲ್ಲಿ ಇಂತಹ ಸಂದರ್ಭದಲ್ಲಿ ವಿವಿಧ ಖಾಸಗಿ ಸ್ಥಳಗಳಲ್ಲಿ ಚಲನಚಿತ್ರ ಚಿತ್ರೀಕರಣ ನಡೆಸಲಾಗುತ್ತಿರುವುದು ಇಎಸ್‍ಜಿ ಗಮನಕ್ಕೆ ಬಂದಿದ್ದು, ಇದನ್ನು ಕಾನೂನು ಬಾಹೀರ ಎಂದು ಇಎಸ್‍ಜಿ ಹೇಳಿದೆ.
ರಾಜ್ಯದಲ್ಲಿ ಸದ್ಯ ಚಲನಚಿತ್ರ ಚಿತ್ರೀಕರಣ ಕೈಗೊಳ್ಳುವುದು ಕಾನೂನಿಗೆ ವಿರುದ್ಧವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಎಲ್ಲಿಯಾದರೂ ಚಲನಚಿತ್ರ ಚಿತ್ರೀಕರಣ ನಡೆಯುತ್ತಿರುವುದು ಗಮನಕ್ಕೆ ಬಂದಲ್ಲಿ ಸ್ಥಳೀಯ ಪೋಲಿಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಇಎಸ್‍ಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.