ಪಣಜಿ: ಗೋವಾ ರಾಜ್ಯ ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಗೋವಾಕ್ಕೆ ಆಗಮಿಸುವ ದೇಶ ವಿದೇಶಿಯ ಪ್ರವಾಸಿಗರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿದೆ. ಇದಕ್ಕೆ ಅನುಗುಣವಾಗಿ ಸೌಲಭ್ಯಗಳು ಕೂಡ ಹೆಚ್ಚಾಗಬೇಕು. ಗೋವಾದಲ್ಲಿ ಮೋಪಾ ಮತ್ತು ದಾಬೋಲಿಂ ಈ ಎರಡೂ ವಿಮಾನ ನಿಲ್ದಾಣಗಳು ಗೋವಾಕ್ಕೆ ಅಗತ್ಯವಿದೆ. ಗೋವಾ ದಾಬೋಲಿಂ ವಿಮಾನ ನಿಲ್ದಾಣವೂ ಮುಂದುವರೆಯಬೇಕು, ಇದಕ್ಕಾಗಿ ದಾಬೋಲಿಂ ವಿಮಾನ ನಿಲ್ದಾಣದಲ್ಲಿ ಮೂಲ ಸೌಕರ್ಯ ಹೆಚ್ಚಿಸಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ಕೇಂದ್ರ ಸಚಿವ ಕೆ.ರಾಮಮನೋಹರ್ ನಾಯ್ಡು ರವರಲ್ಲಿ ಮನವಿ ಮಾಡಿದರು.
ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ರವರನ್ನು ದೆಹಲಿಯಲ್ಲಿ ಭೇಟಿಯಾದರು. ಗೋವಾ ದಾಬೋಲಿಂ ವಿಮಾನ ನಿಲ್ದಾಣವನ್ನು ಚಾಲನೆಯಲ್ಲಿಡುವ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗೋವಾ ರಾಜ್ಯ ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ, ಸಚಿವ ಮಾವಿನ್ ಗುದಿನ್ಹೊ, ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿಗಳು ಸಾರಿಗೆ ರಾಜ್ಯ ಸಚಿವ ಮುರಳೀಧರ್ ಮೋಹೋಲ್, ನಾಗರೀಕ ವಿಮಾನಯಾನ ಕೇಂದ್ರ ಕಾರ್ಯದರ್ಶಿ ಖುಮ್ಲುನ್ಮಾಂಗ್ ಮೌಲನ್, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ಎಂ.ಸುರೇಶ್ ರವರೊಂದಿಗೆ ಚರ್ಚಿಸಿದರು.
ಕಳೆದ ಕೆಲ ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಯಾನ ಸಂಸ್ಥೆಗಳು ದಾಬೋಲಿಂ ವಿಮಾನ ನಿಲ್ದಾಣದಿಂದ ಮೋಪಾದಲ್ಲಿರುವ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಗೊಳ್ಳಲು ಪ್ರಾರಂಭಿಸಿವೆ. ಹಾಗಾದರೆ ದಾಬೋಲಿಂ ವಿಮಾನ ನಿಲ್ದಾಣ ಬಂದ್ ಆಗಲಿದೆಯೇ…? ಎಂಬ ಭಯ ದಕ್ಷಿಣ ಗೋವಾದ ಜನರಲ್ಲಿ ಮೂಡಿದೆ. ಇತ್ತೀಚೆಗೆ ನಡೆದ ಗೋವಾ ವಿಧಾನಸಭೆ ಅಧಿವೇಶನದಲ್ಲಿ ನಡೆದ ಚರ್ಚೆ ಕೂಡ ಈ ವಿಚಾರದ ಮೇಲೆ ಪ್ರಭಾವ ಬೀರಿದೆ.
ಈ ಕುರಿತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸುದ್ದಿಗಾರರೊಂದಿಗೆ ಮಾತನಾಡಿ ದಾಬೋಲಿಂ ವಿಮಾನ ನಿಲ್ದಾಣದಿಂದ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನಯಾನ ಸಂಸ್ಥೆಗಳು ಸ್ಥಳಾಂತಗೊಳ್ಳುತ್ತಿರುವ ಬಗ್ಗೆ ಕೇಂದ್ರ ಸಚಿವರಿಗೆ ಮಾಹಿತಿ ನೀಡಿದ್ದೇವೆ. ದಾಬೋಲಿಂ ವಿಮಾನ ನಿಲ್ದಾಣದಲ್ಲಿ ಮೂಲ ಸೌಕರ್ಯ ಹೆಚ್ಚಿಸುವುದರ ಜೊತೆಗೆ ದೇಶ ಮತ್ತು ವಿದೇಶಗಳ ವಿವಿಧ ಸ್ಥಳಗಳಿಂದ ಸಂಪರ್ಕವನ್ನು ಹೆಚ್ಚಿಸಲು ನಾವು ಬೇಡಿಕೆ ಸಲ್ಲಿಸಿದ್ದೇವೆ. ವಿಮಾನ ಸಂಸ್ಥೆಗಳು ವಲಸೆ ಹೋಗದಂತೆ ದಾಬೋಲಿಂನಲ್ಲಿ ವಿಮಾನ ಸಂಸ್ಥೆಗಳಿಗೆ ಹೆಚ್ಚಿನ ರಿಯಾಯತಿಗಳನ್ನು ನೀಡುವ ಕುರಿತಂತೆಯೂ ಸಹಾನುಭೂತಿಯಿಂದ ಪರಿಶೀಲಿಸಲಾಗುವುದು ಎಂಬ ಭರವಸೆಯನ್ನೂ ನೀಡಿರುವುದಾಗಿ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ನಾಗರೀಕ ವಿಮಾನಯಾನ ಸಂಸ್ಥೆಯ ಸಮಾವೇಶ ಮುಂದಿನ ತಿಂಗಳು ಗೋವಾದಲ್ಲಿ ನಡೆಯಲಿದ್ದು, ಈ ಕುರಿತಂತೆಯೂ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಯಿತು ಎಂದು ಮುಖ್ಯಮಂತ್ರಿಗಳು ಸುದ್ಧಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: Mangaluru: ಐವನ್ ಡಿಸೋಜ ಮನೆ ಮೇಲೆ ಕಲ್ಲು ತೂರಾಟ… ಘಟನೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ