Advertisement

ಗೋವಾ ಸಿಎಂಗೆ ಇಂದು ಅಗ್ನಿ ಪರೀಕ್ಷೆ

12:30 AM Mar 20, 2019 | Team Udayavani |

ಪಣಜಿ: ಗೋವಾದ ನೂತನ ಮುಖ್ಯಮಂತ್ರಿಯಾಗಿ ಸೋಮವಾರ ಮಧ್ಯರಾತ್ರಿ ಅಧಿಕಾರ ಸ್ವೀಕರಿಸಿದ ಬಿಜೆಪಿ ನಾಯಕ ಪ್ರಮೋದ್‌ ಸಾವಂತ್‌ ನೇತೃತ್ವದ ಸರಕಾರ ಬುಧವಾರ ವಿಶ್ವಾಸಮತ ಕೋರಲಿದೆ. ಅದಕ್ಕಾಗಿ ಬುಧವಾರ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯ ಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಬುಧವಾರವೇ ವಿಶ್ವಾಸ ಮತ ಎದುರಿಸುತ್ತೇನೆ. ಈ ಅಗ್ನಿ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ. 

Advertisement

ಬಲಾಬಲ ಹೇಗೆ?: 40 ಸ್ಥಾನಗಳಿರುವ ಗೋವಾ ವಿಧಾಸಭೆಯಲ್ಲಿ ಸರಕಾರ ರಚಿಸಲು ಯಾವುದೇ ಪಕ್ಷ ಅಥವಾ ಮೈತ್ರಿಕೂಟಕ್ಕೆ 21 ಶಾಸಕರ ಅಗತ್ಯತೆ ಇದೆ. ಸದ್ಯಕ್ಕೆ ಬಿಜೆಪಿ 12 ಸ್ಥಾನಗಳನ್ನು ಹೊಂದಿದ್ದು, ಮಹಾ ರಾಷ್ಟ್ರವಾದಿ ಗೋಮಂತಕ್‌ ಪಾರ್ಟಿ (ಎಂಜಿಪಿ), ಗೋವಾ ಫಾರ್ವಾರ್ಡ್‌ ಪಾರ್ಟಿ (ಜಿಎಫ್ಪಿ) ಪಕ್ಷಗಳ ತಲಾ ಮೂವರು ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಜತೆಗೆ, ಮೂವರು ಪಕ್ಷೇತರ ಶಾಸಕರ ಬೆಂಬಲವೂ ಇದೆ. ಮೇಲ್ನೋಟಕ್ಕೆ ಬಿಜೆಪಿಗೆ ಬಹುಮತ ಬರುವುದು ನಿರಾತಂಕ.  ಸದ್ಯದ ಪರಿಸ್ಥಿತಿಯಲ್ಲಿ, ಗೋವಾದ ಸದನದ ಒಟ್ಟು ಸದಸ್ಯರ ಸಂಖ್ಯೆ 40ರಿಂದ 36ಕ್ಕೆ ಕುಸಿದಿದೆ. ಪರ್ರಿಕರ್‌ ಹಾಗೂ ಬಿಜೆಪಿ ಶಾಸಕ ಫ್ರಾನ್ಸಿಸ್‌ ಡಿಸೋಜಾ ನಿಧನರಾ ಗಿದ್ದು, ಇಬ್ಬರು ಕಾಂಗ್ರೆಸ್‌ ಶಾಸಕರಾದ ಸುಭಾಷ್‌ ಶಿರೋಡ್ಕರ್‌ ಹಾಗೂ ದಯಾನಂದ್‌ ಸೋಪ್ಟೆ ಅವರು ತಮ್ಮ ಶಾಸಕತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.

ಅಸಮಾಧಾನ: ಪರ್ರಿಕರ್‌ ನಿಧನದ ಬೆನ್ನಲ್ಲೇ ಭುಗಿಲೆದ್ದ ಮಿತ್ರಪಕ್ಷಗಳ ಭಿನ್ನಾಭಿಪ್ರಾಯಗಳು, ಸೋಮವಾರ ಮಧ್ಯರಾತ್ರಿಯವರೆಗೂ ನಡೆದ ಹೈಡ್ರಾಮಾ ಬುಧವಾರದ ಬೆಳವಣಿಗೆಯ ಬಗ್ಗೆ ಕಾಯುವಂತೆ ಮಾಡಿದೆ.  ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದ ಎಂಜಿಪಿ, ಜಿಎಫ್ಸಿ ಪಕ್ಷಗಳನ್ನು ಸಮಾಧಾನಪಡಿಸಲು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹರಸಾಹಸ ಮಾಡಿ ಹಲವಾರು ಸುತ್ತಿನ ಮಾತುಕತೆ ನಡೆಸಿ ಮನವೊಲಿಸುವಲ್ಲಿ ಸೋಮವಾರ ಯಶಸ್ವಿಯಾಗಿದ್ದರು. ಎಲ್ಲವೂ ಸುಖಾಂತ್ಯ ಎನ್ನುವಷ್ಟರಲ್ಲಿ ವಿಜಯ್‌ ಸರ್ದೇಸಾಯ್‌ ಬಿಜೆಪಿಗೆ ಬೆಂಬಲ ಪತ್ರ ನೀಡಿರಲಿಲ್ಲ ಎಂಬ ವದಂತಿ ಹರಡಿತ್ತು.  ಆದರೆ, ರಾತ್ರಿ 12: 15ರ ಸುಮಾರಿಗೆ ರಾಜ್ಯಪಾಲರ ನಿವಾಸದ ಕದ ತಟ್ಟಿದ ಬಿಜೆಪಿ, ಎಂಜಿಪಿ ಹಾಗೂ ಜಿಎಫ್ಪಿ ನಾಯಕರು ಸರಕಾರ ರಚನೆಗೆ ಹಕ್ಕು ಮಂಡಿಸಿದರು. ಸ್ವಲ್ಪ ಹೊತ್ತಿನಲ್ಲೇ ಪ್ರಮಾಣ ವಚನ ಸ್ವೀಕಾರವೂ ನಡೆಯುವಲ್ಲಿಗೆ ಗೋವಾ ರಾಜಕೀಯ ಆಂತರಿಕ ಅಸ್ಥಿರತೆಗೆ ಒಂದು ತಾರ್ಕಿಕ ತೆರೆಬಿತ್ತು. 

ಆಪದ್ಭಾಧವರಾದ ಗಡ್ಕರಿ 
ಗೋವಾ ಮಿತ್ರ ಪಕ್ಷಗಳಲ್ಲಿ ಭುಗಿಲೆದ್ದಿದ್ದ ಅಸಮಾಧಾನವನ್ನು ಶಮನಗೊಳಿಸುವಲ್ಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಜಾಣತನ ಮೆರೆದಿದ್ದಾರೆ. ಜತೆಗೆ, ಪಕ್ಷಕ್ಕೆ ತಾವು ಆಪದ್ಭಾಧವ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. 2017ರಲ್ಲಿ ಸರಕಾರ ರಚನೆ ವೇಳೆ ಕೂಡ ಅವರು ಪ್ರಧಾನ ಪಾತ್ರವಹಿಸಿದ್ದರು. 

ಬಲಾಬಲ ಹೇಗೆ?
40 ಒಟ್ಟು ಸ್ಥಾನಗಳು
21 ಸರಕಾರ ರಚನೆಗೆ ಬೇಕಿರುವ ಸ್ಥಾನ ಬಿಜೆಪಿ ಮತ್ತು ಮಿತ್ರಪಕ್ಷಗಳು
12 ಬಿಜೆಪಿ
03 ಎಂಜಿಪಿ
03 ಜಿಎಫ್ಪಿ
03 ಪಕ್ಷೇತರರು

Advertisement

ಪ್ರತಿ ಪಕ್ಷಗಳು
14 ಕಾಂಗ್ರೆಸ್‌
01 ಎನ್‌ಸಿಪಿ

Advertisement

Udayavani is now on Telegram. Click here to join our channel and stay updated with the latest news.

Next