Advertisement

ಗೋವಾ: ಸಿಎಂ ಆಗಿ ಪಾರೀಕರ್‌ ಪ್ರಮಾಣ

06:20 AM Mar 15, 2017 | |

ಪಣಜಿ/ಹೊಸದಿಲ್ಲಿ: ಜನರ ತೀರ್ಪು ನಮ್ಮ ಕಡೆ ಇದೆ ಎಂಬ ಆರೋಪ, ಬಹುಮತ ನಮಗಿದೆ ಎಂಬ ವಿಶ್ವಾಸ, ನ್ಯಾಯಾಲಯದ ಆದೇಶ ಮತ್ತಿತರ ಗೊಂದಲಗಳ ನಡುವೆಯೇ ಗೋವಾದ ನೂತನ ಸಿಎಂ ಆಗಿ ಮನೋಹರ್‌ ಪಾರೀಕರ್‌ ಅವರು ಮಂಗಳವಾರ ಸಂಜೆ ಪ್ರಮಾಣ ಸ್ವೀಕಾರ ಮಾಡಿದ್ದಾರೆ.

Advertisement

ಪಾರೀಕರ್‌  ಜತೆಗೆ ಇತರ 9 ಮಂದಿ ಸಚಿವರಿಗೂ ರಾಜ್ಯಪಾಲ ರಾದ ಮೃದುಲಾ ಸಿನ್ಹಾ ಪ್ರಮಾಣ ವಚನ ಬೋಧಿಸಿದ್ದಾರೆ. ಇದಕ್ಕೂ ಮೊದಲು, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ರಾಜ್ಯಪಾಲರು ಸರಕಾರ ರಚನೆಗೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದ ಕಾಂಗ್ರೆಸ್‌ಗೆ ಅಲ್ಲೂ ಹಿನ್ನಡೆಯಾಗಿತ್ತು.

ಪಾರೀಕರ್‌  ಪ್ರಮಾಣ ಸ್ವೀಕಾರಕ್ಕೆ ತಡೆಯಾಜ್ಞೆ ತರಲು ನಿರಾಕರಿಸಿದ್ದ ನ್ಯಾಯಾಲಯ, ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಬಿಜೆಪಿಗೆ ಸೂಚಿಸಿತು. ಜತೆಗೆ, ರಾಜ್ಯಪಾಲರಿಗೆ ಸರಕಾರ ರಚನೆಗೆ ಹಕ್ಕು ಮಂಡಿಸದ ಹಾಗೂ ಬೆಂಬಲಿತ ಶಾಸಕರ ಅಫಿದವಿತ್‌ ಇಲ್ಲದೇ ನ್ಯಾಯಾಲಯದ ಮೆಟ್ಟಿಲೇರಿದ ಕಾಂಗ್ರೆಸ್‌ ಅನ್ನು ತರಾಟೆಗೆ ತೆಗೆದುಕೊಂಡಿತು. ಇದರಿಂದಾಗಿ ಬಿಜೆಪಿ ನಿಟ್ಟುಸಿರು ಬಿಟ್ಟಿತಲ್ಲದೆ, 4ನೇ ಬಾರಿಗೆ ಸಿಎಂ ಆಗಿ ಪ್ರಮಾಣ ಸ್ವೀಕರಿಸುವ ಪಾರೀಕರ್‌  ಹಾದಿ ಸುಗಮವಾಯಿತು.

ಸಂಜೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗೋವಾದ ಮಾಜಿ ಸಿಎಂ ಲಕ್ಷ್ಮೀಕಾಂತ್‌ ಪರ್ಶೇಕರ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮತ್ತಿತರ ಗಣ್ಯರು ಭಾಗವಹಿಸಿದ್ದರು. ಇದಕ್ಕೂ ಮೊದಲು, ಗೋವಾ ರಾಜಭವನದ ಮುಂದೆ ಕೆಲವು ನಾಗರಿಕರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. 

ಇನ್ನೊಂದೆಡೆ, ಸುಪ್ರೀಂ ಆದೇಶವನ್ನು ಸ್ವಾಗತಿಸಿದ ಬಿಜೆಪಿ, ಸರಕಾರ ರಚಿಸಲು ಬೇಕಾದಷ್ಟು ಸಂಖ್ಯಾಬಲ ನಮ್ಮಲ್ಲಿದೆ. ಹಾಗಾಗಿ, ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗುತ್ತೇವೆಂಬ ನಂಬಿಕೆಯಿದೆ ಎಂದಿದೆ. ಆದರೆ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಮಾತನಾಡಿ, “ರಜೆಯ ನಡುವೆಯೂ ನಮ್ಮ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿದೆ. ನ್ಯಾಯಾಲಯದ ಆದೇಶವು ನಮಗೆ ಸಿಕ್ಕ ಅತಿದೊಡ್ಡ ಜಯ. 2 ದಿನಗಳ ಸಿಎಂ ಆಗಲು ಹೊರಟಿರುವ ಮನೋಹರ್‌ ಪಾರೀಕರ್‌ಗೆ ಸ್ವಾಗತ,’ ಎನ್ನುವ ಮೂಲಕ ವಿಶ್ವಾಸಮತದ ವೇಳೆ ಕಾಂಗ್ರೆಸ್‌ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Advertisement

ಮಣಿಪುರದಲ್ಲೂ  ಬಿಜೆಪಿ ಸರಕಾರ?
ಗೋವಾದಲ್ಲಿ ಸರಕಾರ ರಚಿಸಲು ಬಿಜೆಪಿ ಯಶಸ್ವಿಯಾಗುತ್ತಿದ್ದಂತೆಯೇ ಅತ್ತ ಮಣಿಪುರದಲ್ಲೂ ಕಾಂಗ್ರೆಸ್‌ಗೆ ಸೋಲಾಗಿದೆ. ಬಿಜೆಪಿಯು ತನಗೆ ಸಾಕಷ್ಟು ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡ ಹಿನ್ನೆಲೆಯಲ್ಲಿ ಮಣಿಪುರ ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ಅವರು ಸರಕಾರ ರಚನೆಗೆ ಆಹ್ವಾನಿಸಿದ್ದಾರೆ. ಅದರಂತೆ, ಬಿಜೆಪಿ ನಾಯಕ ಎನ್‌. ಬಿರೇನ್‌ ಸಿಂಗ್‌ ಅವರು ಬುಧವಾರ ಅಪರಾಹ್ನ 1 ಗಂಟೆಗೆ ಮಣಿಪುರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಜಭವನದ ಪ್ರಕಟನೆ ತಿಳಿಸಿದೆ. ಈ ಬೆಳವಣಿಗೆಯಿಂದ ಆಕ್ರೋಶಗೊಂಡಿರುವ ಕಾಂಗ್ರೆಸ್‌, “ರಾಜ್ಯಪಾಲರು ಗಳು ಕೇಂದ್ರ ಸರಕಾರದ ಆಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರಕಾರವು ರಾಜ್ಯಪಾಲರ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ,’ ಎಂದು ಆರೋಪಿಸಿದೆ. ಜತೆಗೆ, ಬಿಜೆಪಿಯು ಹಣದ ಬಲದಿಂದ ಅಧಿಕಾರ ಹಿಡಿಯುತ್ತಿದೆ ಎಂದು ಕಾಂಗ್ರೆಸ್‌ ನಾಯಕ ಆನಂದ್‌ ಶರ್ಮಾ ಹೇಳಿದ್ದಾರೆ.

ಪ್ರಮಾಣ ಸ್ವೀಕರಿಸಿದ ಮನೋಹರ್‌ ಪಾರೀಕರ್‌ ಹಾಗೂ ತಂಡಕ್ಕೆ ನನ್ನ ಅಭಿನಂದನೆಗಳು. ಗೋವಾವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುವಂತಾಗಲಿ ಎಂದು ಹಾರೈಸುತ್ತೇನೆ.
ನರೇಂದ್ರ ಮೋದಿ, ಪ್ರಧಾನಿ

ಧನ ಬಲ ಪ್ರಯೋಗಿಸಿ, ಪ್ರಜಾಸತ್ತೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಗೋವಾ, ಮಣಿಪುರದ ಜನರ ತೀರ್ಪನ್ನೇ ಬಿಜೆಪಿ ಕದ್ದಿದೆ. ಗೋವಾ ರಾಜ್ಯಪಾಲರು ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ.
ರಾಹುಲ್‌ ಗಾಂಧಿ, ಕಾಂಗ್ರೆಸ್‌ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next