ಪಣಜಿ: ಗೋವಾದ ಸಾಲ್ವದೋರ್ ನಲ್ಲಿ ಅಕ್ರಮವಾಗಿ ಜಮೀನು ಕಬಳಿಸಿದ ಆ ಸಚಿವರ ಹೆಸರನ್ನು ಬಹಿರಂಗ ಪಡಿಸಿ ಸಚಿವ ಸಂಪುಟದಿಂದ ಅವರನ್ನು ವಜಾಗೊಳಿಸಬೇಕು ಎಂದು ಗೋವಾ ಕಾಂಗ್ರೇಸ್ ಮಾಜಿ ಪ್ರದೇಶಾಧ್ಯಕ್ಷ ಗಿರೀಶ್ ಚೋಡಂಕರ್ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರನ್ನು ಅಗ್ರಹಿಸಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ಅಕ್ರಮದಲ್ಲಿ ತೊಡಗಿರುವ ಈ ಸಚಿವರ ವಿರುದ್ಧ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿ, ಇಲ್ಲವೇ ಸಂಪುಟದಲ್ಲಿ ಯಾರೂ ಭೂಮಿ ಕಬಳಿಕೆ ಮಾಡಿಲ್ಲ ಎಂದು ಘೋಷಣೆ ಮಾಡಲಿ ಎಂದು ಚೋಡಂಕರ್ ಸವಾಲು ಹಾಕಿದರು.
2022ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಮಿಲಿಂದ್ ನಾಯ್ಕ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಿರೀಶ್ ಚೋಡಂಕರ್ ಅವರು ಹಂತ ಹಂತವಾಗಿ ಪ್ರಕರಣದ ಮಾಹಿತಿಯನ್ನು ಬಹಿರಂಗಪಡಿಸಿದ್ದರು. ಕೊನೆಗೆ ನಾಯ್ಕ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ ಮಾಡಿರುವ ಪ್ರಕರಣಗಳ ತನಿಖೆ ಎಸ್‍ಐಟಿ ಮೂಲಕ ನಡೆಯುತ್ತಿದೆ. ಪ್ರಕರಣವನ್ನು ಈಗಾಗಲೇ ವಿಜಿಲೆನ್ಸ್ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಅವರು ಅದನ್ನು ಎಸ್‍ಐಟಿಗೆ ಹಸ್ತಾಂತರಿಸಬೇಕು. ಆದ್ದರಿಂದ ಇತರೆ ಪ್ರಕರಣಗಳಿಗಿಂತ ಈ ಪ್ರಕರಣವನ್ನು ಆದ್ಯತೆಯಾಗಿ ಪರಿಗಣಿಸಿ ಈ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾಕೆಂದರೆ ಈ ಸಚಿವರೇ ಇಂತಹ ಹಲವು ಪ್ರಕರಣಗಳ ಮಾಸ್ಟರ್ ಮೈಂಡ್ ಎಂದು ಗಿರೀಶ್ ಚೋಡಣಕರ್ ಆರೋಪಿಸಿದರು.
ಈ ಬಗ್ಗೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂಬೈನ ಉದ್ಯಮಿಗಳು ಗೋಮಾಂತಕೀಯರ ಭೂಮಿಯನ್ನು ಕಬಳಿಸಿ ಈ ಜಾಗದಲ್ಲಿ ಕಟ್ಟಡ ನಿರ್ಮಾಣ ಆರಂಭಿಸಿದ್ದಾರೆ ಎಂದು ಚೋಡಂಕರ್ ಆರೋಪಿಸಿದರು. ಈ ಪ್ರಕರಣದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಎಸ್‍ಐಟಿಗೆ ಹೊಸದಾಗಿ ದೂರು ದಾಖಲಿಸಿ ಶೀಘ್ರವೇ ಮತ್ತೊಂದು ಪ್ರಕರಣವನ್ನು ಬಹಿರಂಗಪಡಿಸುತ್ತೇವೆ ಎಂದು ಚೋಡಂಕರ್ ಹೇಳಿದರು.