ಪಣಜಿ: ಗೋವಾ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಪಣಜಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಮುನ್ನ ಗೋವಾ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಪ್ರತಿಪಕ್ಷಗಳನ್ನು ಕಠುವಾಗಿ ಟೀಕಿಸಿದರು. . ಫಡ್ನವೀಸ್ ನೇರವಾಗಿ ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿದ ಯೋಜನೆಗಳಿಂದ ದೆಹಲಿಯಲ್ಲಿ ಪ್ರತಿ ಮನೆಗೂ ನೀರು ಪೂರೈಕೆಯಾಗುವಂತಾಗಿದೆ. ಇದರಿಲ್ಲಿ ಆಮ್ ಆದ್ಮಿ ಪಕ್ಷದ ಯಾವುದೇ ಪಾತ್ರವಿಲ್ಲ. ಇದರಿಂದಾಗಿ ಆಮ್ ಆದ್ಮಿ ಪಕ್ಷ ಗೋವಾಕ್ಕೆ ಬಂದು ಯಾವುದೇ ಭರವಸೆ ನೀಡಿದರೂ ಕೂಡ ಸತ್ಯ ಏನು ಎಂಬುದು ರಾಜ್ಯದ ಜನತೆಗೆ ತಿಳಿದಿದೆ. ಗೋವಾದಲ್ಲಿ ಬಿಜೆಪಿಯು ಉತ್ತಮ ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ದಿ. ಮನೋಹರ್ ಪರ್ರಿಕರ್ ರವರು ಕೂಡ ಗೋವಾದಲ್ಲಿ ಬಿಜೆಪಿ ಮಾಧ್ಯಮದ ಮೂಲಕ ಉತ್ತಮ ಅಭಿವೃದ್ಧಿ ಕೈಗೊಂಡಿದ್ದಾರೆ ಎಂದರು.
ಬಿಜೆಪಿಯು ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಪ್ರಮುಖವಾಗಿ ಸಾಖಳಿ ಕ್ಷೇತ್ರದಲ್ಲಿ ಹಾಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸ್ಫರ್ಧಿಸಲಿದ್ದಾರೆ. ಪಣಜಿ ಕ್ಷೇತ್ರದಲ್ಲಿ ದಿ.ಮನೋಹರ್ ಪರೀಕರ್ ಪುತ್ರ ಉತ್ಪಲ್ ರವರನ್ನು ಕೈಬಿಡಲಾಗಿದ್ದು ಹಾಲಿ ಶಾಸಕ ಬಾಬೂಶ್ ಮೊನ್ಸೆರಾತ್ ರವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಉತ್ಪಲ್ ಅವರನ್ನು ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿದ್ದಾರೆ. ಉತ್ಪಲ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಕಾದು ನೋಡಬೇಕು.
ಬಿಜೆಪಿ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಕೆಲ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ ಮಾತ್ರವಲ್ಲದೆ ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ಸೇರಿದ್ದ ಇಬ್ಬರು ಪಕ್ಷೇತರ ಶಾಸಕರಿಗೆ ಟಿಕೆಟ್ ನೀಡಲಾಗಿದೆ.
ಪರ್ವರಿ ಕ್ಷೇತ್ರದ ಪಕ್ಷೇತರ ಶಾಸಕ ರೋಹನ್ ಖಂವಟೆ ರವರು ಡಿಸೆಂಬರ್ 15 ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಇನ್ನೊರ್ವ ಪಕ್ಷೇತರ ಶಾಸಕ ಗೋವಿಂದ್ ಗಾವಡೆ ಜನವರಿ 11 ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದರು.ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಕೆಲ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿರುವುದು ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.