ಪಣಜಿ:ಗೋವಾದ ಬಿಜೆಪಿ ಶಾಸಕರೊಬ್ಬರ ಇಡೀ ಕುಟುಂಬಕ್ಕೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಎರಡು ದಿನಗಳ ಹಿಂದಷ್ಟೆ ಕುಂಕಳ್ಳಿ ಕ್ಷೇತ್ರದ ಬಿಜೆಪಿ ಶಾಸಕರಿಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು.
ಶಾಸಕರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ಇದೀಗ ಅವರ ವರದಿಯೂ ಪಾಸಿಟಿವ್ ಬಂದಿದೆ.
ಇನ್ನೊಂದು ಆತಂಕಕಾರಿ ಸಂಗತಿಯೆಂದರೆ ಕಳೆದ 8 ದಿನಗಳ ಹಿಂದೆ ಕುಂಕಳ್ಳಿ ಕ್ಷೇತ್ರದ ಶಾಸಕರನ್ನೊಳಗೊಂಡು ಹತ್ತು ಶಾಸಕರು ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರನ್ನು ಭೇಟಿಯಾಗಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪ್ರಮೋದ ಸಾವಂತ್, ನಾವೆಲ್ಲ ಒಂದೆಡೆ ಸೇರಿದ್ದು ನಿಜ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಂಡಿದ್ದೆವು ಎಂದರು.
ರಾಜ್ಯದಲ್ಲಿ ಶಾಸಕರೊಬ್ಬರ ಕುಟುಂಬಕ್ಕೆ ಕೋವಿಡ್-19 ಸೋಂಕು ದೃಢಪಟ್ಟಿರುವುದು ಇದೇ ಮೊದಲ ಪ್ರಕರಣವಾಗಿದೆ.