ಪಣಜಿ: ಸದ್ಯ ಗೋವಾ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನದ ಸಂದಿಗ್ದತೆ ಇನ್ನೂ ಬಗೆಹರಿದಿಲ್ಲ. ಸದ್ಯ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಂಗಾಮಿ ಮುಖ್ಯಮಂತ್ರಿಯಾಗಿದ್ದರೂ ಅವರ ಸ್ಥಾನದ ಮೇಲೆ ಹಲವರ ಕಣ್ಣಿದೆ.
ಸಚಿವ ವಿಶ್ವಜಿತ್ ರಾಣೆ ಮುಖ್ಯಮಂತ್ರಿ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಜಯಗಳಿಸಿರುವ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರಿಗೆ ವಿಶ್ವಜಿತ್ ರಾಣೆಯಿಂದ ಕಠಿಣ ಸವಾಲು ಎದುರಾಗಿದೆ.
ಇದನ್ನೂ ಓದಿ:ಗೋವಾ: ಪ್ರಮಾಣವಚನ ಸ್ವೀಕರಿಸಿದ ನೂತನ 39 ಶಾಸಕರು
ಗೋವಾ ವಿಧಾನಸಭಾ ಚುನಾವಣೆಯ ನಂತರ ಸಚಿವ ವಿಶ್ವಜಿತ್ ರಾಣೆ ಬಿಜೆಪಿ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ನಾಲ್ಕು ದಿನಗಳ ಹಿಂದೆ ವಿಶ್ವಜಿತ್ ರಾಣೆ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿರುವುದು ಚರ್ಚೆಗೆ ಕಾರಣವಾಗಿದೆ.
ಇದೀಗ ಮೊದಲ ಬಾರಿಗೆ ಸಚಿವ ವಿಶ್ವಜಿತ್ ರಾಣೆ ಮುಖ್ಯಮಂತ್ರಿ ಸ್ಥಾನದ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯ ಎಲ್ಲ ಶಾಸಕರು ಒಮ್ಮತದಿಂದ ಇದ್ದಾರೆ. ಆದರೆ ಗೋವಾದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಪಕ್ಷದ ನಾಯಕರು ನಿರ್ಧರಿಸಲಿದ್ದಾರೆ ಎಂದು ವಿಶ್ವಜಿತ್ ರಾಣೆ ಹೇಳಿದ್ದಾರೆ.