ಪಣಜಿ: ಕರ್ನಾಟಕದ ಗಡಿಭಾಗದ ಗೋವಾ-ಬೆಳಗಾವಿ ನಡುವಿನ ಚೋರ್ಲಘಟ್ಟ ಪ್ರದೇಶದ ಮುಖ್ಯರಸ್ತೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಕ್ಷರಶಃ ಕೊಚ್ಚಿ ಹೋಗಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಹಾಗೂ ವಾಹನ ಚಾಲಕರು ತೀವ್ರ ತೊಂದರೆ ಅನುಭವಿಸಬೇಕಾಗಿದೆ. ಭಾರಿ ಅವಘಡ ಸಂಭವಿಸುವ ಮುನ್ನ ಈ ರಸ್ತೆಯಲ್ಲಿನ ಗುಂಡಿಗಳನ್ನು ಕೂಡಲೇ ತುಂಬಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಅಲ್ಲದೆ ಕೂಡಲೇ ಈ ಹೆದ್ದಾರಿ ದುರಸ್ತಿಗೆ ಮುಂದಾಗದಿದ್ದಲ್ಲಿ ಮುಂಬರುವ ದಿನಗಳಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವ ಆತಂಕವನ್ನು ಪ್ರಯಾಣಿಕರು ವ್ಯಕ್ತಪಡಿಸಿದ್ದಾರೆ.
ಗೋವಾ-ಬೆಳಗಾವಿ ನಡುವಿನ ಚೋರ್ಲಘಟ್ಟ ಪ್ರದೇಶದ ಮೂಲಕ ಹಾದು ಹೋಗುವ ಈ ರಸ್ತೆ ಕಡಿಮೆ ಗೋವಶದಿಂದ ಬೆಳಗಾವಿಗೆ ಅಂತರದಲ್ಲಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳು ಸಂಚರಿಸುತ್ತಿವೆ. ಮಳೆಗಾಲಕ್ಕೂ ಮುನ್ನವೇ ಈ ರಸ್ತೆಯಲ್ಲಿ ಹಲವೆಡೆ ಗುಂಡಿಗಳು ಬಿದ್ದಿದ್ದು, ಕೂಡಲೇ ಅವುಗಳನ್ನು ತುಂಬಿಸಬೇಕಿತ್ತು. ಆದರೆ, ಕರ್ನಾಟಕ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದರಿಂದ ಮಳೆಗಾಲದಲ್ಲಿ ರಸ್ತೆ ಕೆಸರುಮಯವಾಗಿದೆ. ಇನ್ನೊಂದೆಡೆ ಗೋವಾ ಗಡಿಯೊಳಗಿನ ರಸ್ತೆಯೂ ಹಾಳಾಗಿದೆ. ಆದರೆ ವಾಹನ ಚಾಲಕರ ಬೇಡಿಕೆಯನ್ನು ಗಣನೆಗೆ ತೆಗೆದುಕೊಂಡು ಗೋವಾ ಸರ್ಕಾರವು ಮಳೆಗಾಲದ ಮುಂಚೆಯೇ ಡಾಂಬರೀಕರಣಗೊಳಿಸಿದೆ.
ಗೋವಾ ಗಡಿಯಿಂದ ಪಿಲ್ನಾರವಾಡಿವರೆಗಿನ ಹಲವೆಡೆ ರಸ್ತೆಗಳು ಗುಂಡಿ ಬಿದ್ದಿವೆ. ಈ ಗುಂಡಿಗಳು ತುಂಬಾ ದೊಡ್ಡದಾಗಿದ್ದು, ಈ ಮಾರ್ಗವಾಗಿ ಸಂಚರಿಸುವುದು ಸಾಹಸಮಯವೇ ಆಗಿದೆ. ಸದ್ಯ ಮಳೆ ನೀರು ಹಳ್ಳಕೊಳ್ಳಗಳಲ್ಲಿ ತುಂಬಿಕೊಂಡಿದ್ದು ವಾಹನ ಸವಾರರು ಆತಂಕದಲ್ಲಿಯೇ ಸಂಚರಿಸುವಂತಾಗಿದೆ.
ಗೋವಾ ಭಾಗದಲ್ಲಿ ಮಳೆಗಾಲದ ಮೊದಲು ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದರಿಂದ ಈ ರಸ್ತೆ ಸುಸ್ಥಿತಿಯಲ್ಲಿರುತ್ತದೆ ಎಂದು ಪ್ರಯಾಣಿಕರು ನಂಬಿದ್ದರು. ಆದರೆ ರಸ್ತೆಯ ಇಂದಿನ ದಯನೀಯ ಸ್ಥಿತಿ ನೋಡಿದರೆ ರಸ್ತೆ ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ. ಗೋವಾದಿಂದ ಬೆಳಗಾವಿಗೆ ಹೋಗುವ ಚಾಲಕರಿಗೆ ಈ ರಸ್ತೆ ತಲೆನೋವಾಗಿ ಪರಿಣಮಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಹಬ್ಬ ಬರಲಿದೆ. ಗೋವಾದ ಜನರು ಚತುರ್ಥಿ ಶಾಪಿಂಗ್‍ಗಾಗಿ ಬೆಳಗಾವಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಾರೆ. ಕರ್ನಾಟಕ ಸರಕಾರ ಈ ಬಗ್ಗೆ ಗಮನಹರಿಸಿ ಕೂಡಲೇ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಬೇಕು ಎಂದು ಆಗ್ರಹ ವ್ಯಕ್ತವಾಗುತ್ತಿದೆ.
ಕಾಡಿನಲ್ಲಿ ವಾಹನ ಕೆಟ್ಟು ನಿಂತರೆ ನೆಟ್ ವರ್ಕ್ ಇಲ್ಲ..!
ಕರ್ನಾಟಕ ಗಡಿ ಭಾಗದ ಚೋರ್ಲಾದಿಂದ ಜಾಂಬೋಟಿವರೆಗಿನ ರಸ್ತೆಯೂ ಗುಂಡಿ ಮಯವಾಗಿದೆ . ಈ ಮಾರ್ಗವು ಸಂಪೂರ್ಣವಾಗಿ ಕಾಡಿನ ಮೂಲಕ ಇದೆ. ಇದು ವಾಹನಕ್ಕೆ ಅಪಾಯವನ್ನು ಉಂಟುಮಾಡಬಹುದು. ಇದಲ್ಲದೆ, ಈ ಪ್ರದೇಶದಲ್ಲಿ ಯಾವುದೇ ಮೊಬೈಲ್ ನೆಟ್ವರ್ಕ್ ಇಲ್ಲ. ಇದರಿಂದ ವಾಹನವು ಗುಂಡಿಗಳಲ್ಲಿ ಸಿಲುಕಿಕೊಂಡರೆ ಅಥವಾ ಸಿಕ್ಕಿಹಾಕಿಕೊಂಡರೆ ಯಾರನ್ನೂ ಸಂಪರ್ಕಿಸಲು ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಜಾಂಬೋಟಿ ಅಥವಾ ಗೋವಾಕ್ಕೆ ಬೇರೆ ವಾಹನದ ಮೂಲಕ ಬಂದು ಯಾಂತ್ರಿಕ ವ್ಯವಸ್ಥೆ ಮಾಡಬೇಕಾಗಿದೆ ಎಂದು ಹಲವು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.