Advertisement

ಸರಹದ್ದು ದಾಟುತ್ತಿರುವ ಗೋವಾ, ಕೇರಳ ಮೀನುಗಾರರು

12:06 PM Apr 19, 2020 | Sriram |

ಕುಂದಾಪುರ: ಲಾಕ್‌ಡೌನ್‌ ಸಂದರ್ಭ ಕರ್ನಾಟಕದಲ್ಲಿ ಆಳಸಮುದ್ರ ಮೀನುಗಾರಿಕೆಗೆ ನಿರ್ಬಂಧವಿದೆ. ಆದರೂ ರಾಜ್ಯ ಕರಾವಳಿಯ ಉತ್ತರ ಸರಹದ್ದಿನಲ್ಲಿ ಗೋವಾದ ಆಳಸಮುದ್ರ ಮೀನುಗಾರರು ಲೈಟ್‌ ಫಿಶಿಂಗ್‌ ನಡೆಸುತ್ತಿರುವುದು ಮತ್ತು ದಕ್ಷಿಣದಲ್ಲಿ ಕೇರಳದವರು ಗಡಿ ಉಲ್ಲಂಘಿಸಿ ಮೀನುಗಾರಿಕೆಯಲ್ಲಿ ನಿರತರಾಗಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

Advertisement

ಹೊರರಾಜ್ಯದ ಮೀನುಗಾರರು ಗಡಿ ದಾಟುತ್ತಿರುವುದು, ಬೆಳಕು ಮೀನುಗಾರಿಕೆ ನಡೆಸುವುದು ಕಾನೂನು ಉಲ್ಲಂಘನೆ ಯಲ್ಲವೇ ಎನ್ನುವ ಪ್ರಶ್ನೆ ರಾಜ್ಯದ ಮೀನುಗಾರರದು.

ನಿರ್ಬಂಧದ ಲಾಭ
ರಾಜ್ಯದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಮಾತ್ರ ಅವಕಾಶ ಇದೆ. ನಮ್ಮ ಮೀನುಗಾರರು ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಆದರೆ ಗೋವಾದ ಮೀನುಗಾರರು ನಾಲ್ಕೈದು ದಿನಗಳಿಂದ ರಾತ್ರಿ ಗಂಗೊಳ್ಳಿಯಿಂದಲೂ ಮುಂದಕ್ಕೆ ಲೈಟ್‌ ಫಿಶಿಂಗ್‌ ಮಾಡುತ್ತಿದ್ದಾರೆ. ಕೇರಳದ ಮೀನು ಗಾರರು ಕೂಡ ಗಡಿ ದಾಟುತ್ತಿದ್ದಾರೆ ಎಂದು ತಿಳಿದು ಬಂದಿದೆ.

ನಿಗಾ ವಹಿಸಬೇಕಿದೆ
ಜಿಲ್ಲಾ, ಅಂತಾರಾಜ್ಯ ಗಡಿಗಳಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗಿದ್ದು, ಅನಿವಾರ್ಯವಾಗಿದ್ದರೆ ಮಾತ್ರ ಒಳಕ್ಕೆ ಬಿಡಲಾಗುತ್ತಿದೆ. ಆದರೆ ಸಮುದ್ರ
ದಲ್ಲಿ ಗಡಿ ಉಲ್ಲಂಘನೆ ರಾಜ್ಯದೊಳಗೆ ನುಸುಳಲು ಕೂಡ ದಾರಿಯಾಗ ಬಹುದು. ಈ ಬಗ್ಗೆ ಕರಾವಳಿ ಕಾವಲು ಪಡೆ ನಿಗಾ ವಹಿಸಬೇಕಿದೆ.

ಗಡಿ ಬಂದ್‌ ಏನು ಪ್ರಯೋಜನ?
ಗೋವಾದಲ್ಲಿ ಆಳಸಮುದ್ರ ಮೀನುಗಾರಿಕೆಗೆ ಅನುಮತಿ ಇದೆ. ನಾಲ್ಕೈದು ದಿನಗಳಿಂದ ಗಡಿಯಿಂದೀಚೆ ಲೈಟ್‌ ಫಿಶಿಂಗ್‌ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಕಾರವಾರದ ಪಸೀìನ್‌ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್‌ ಕಾರವಾರ ಹೇಳಿದ್ದಾರೆ.

Advertisement

ಗಮನಕ್ಕೆ ಬಂದಿದೆ
ಗೋವಾ, ಕೇರಳದ ಮೀನುಗಾರರು ಗಡಿ ದಾಟಿ ಮೀನುಗಾರಿಕೆ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಮಗಿರುವ ನಿರ್ಬಂಧ ಅವರಿಗಿಲ್ಲವೇ ಎಂದು ಗಂಗೊಳ್ಳಿಯ ಪರ್ಸಿನ್‌ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ರಮೇಶ್‌ ಕುಂದರ್‌ ಪ್ರಶ್ನಿಸುತ್ತಾರೆ.

ಗೋವಾದವರು, ಕೇರಳದವರು ಗಡಿ ದಾಟಿ ಬಂದು ಮೀನುಗಾರಿಕೆ, ಲೈಟ್‌ ಫಿಶಿಂಗ್‌ ನಡೆಸುತ್ತಿರುವ ಬಗ್ಗೆ ಮಾಹಿತಿಯಿಲ್ಲ. ನಮ್ಮ ಮೀನುಗಾರರು ಅಥವಾ ಬೇರೆ ಯಾರಾದರೂ ಇಂತಹ ಮಾಹಿತಿ ಇದ್ದರೆ ನಮಗೆ ನೀಡಬಹುದು. ನಾವು ಪರಿಶೀಲಿಸುತ್ತೇವೆ. ಉಡುಪಿ, ದ.ಕ. ಹಾಗೂ ಉ. ಕನ್ನಡ ಜಿಲ್ಲೆಗಳಲ್ಲಿ ಮಂಗಳೂರು, ಹೆಜಮಾಡಿ, ಮಲ್ಪೆ, ಗಂಗೊಳ್ಳಿ, ಭಟ್ಕಳ, ಹೊನ್ನಾವರ, ಕುಮಟಾ, ಬೇಲೆಕೇರಿ, ಕಾರವಾರ ಸೇರಿ ಒಟ್ಟು 9 ಕರಾವಳಿ ಕಾವಲು ಪಡೆಯ ಠಾಣೆಗಳಿವೆ. ಎಲ್ಲ ಕಡೆಗಳಲ್ಲಿ ನಿತ್ಯ ಪೆಟ್ರೋಲಿಂಗ್‌ ನಡೆಸಲಾಗುತ್ತಿದೆ.
– ಆರ್‌. ಚೇತನ್‌, ಪೊಲೀಸ್‌ ಅಧೀಕ್ಷಕರು, ಉಡುಪಿ ಜಿಲ್ಲಾ ಕರಾವಳಿ ಕಾವಲು ಪೊಲೀಸ್‌ ಪಡೆ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next