Advertisement

ಉನ್ನತ ಸ್ಥಾನಮಾನಕ್ಕೇರಿ-ಸಮಾಜ, ದೇಶದ ಗೌರವ ಹೆಚ್ಚಿಸಿ

03:49 PM Aug 28, 2017 | Team Udayavani |

ದಾವಣಗೆರೆ: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರುವ ಮೂಲಕ ಕುಟುಂಬ, ಸಮಾಜದ ಗೌರವ ಹೆಚ್ಚಿಸಬೇಕು ಎಂದು ಹರ ಸೇವಾ ಸಂಸ್ಥೆ ಮತ್ತು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ. ಉಮಾಪತಿ ತಿಳಿಸಿದರು. ಭಾನುವಾರ ರೇಣುಕಾ ಮಂದಿರದಲ್ಲಿ ಹರ ಸೇವಾ ಸಂಸ್ಥೆ ಮತ್ತು ವೀರಶೈವ
ಲಿಂಗಾಯತ ಪಂಚಮಸಾಲಿ ಸಮಾಜ ಜಿಲ್ಲಾ ಘಟಕ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪಂಚಮಸಾಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹರ ಸೇವಾ ಸಂಸ್ಥೆ ಮತ್ತು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಜಿಲ್ಲಾ ಘಟಕದಲ್ಲಿ ಸಹಯೋಗದಲ್ಲಿ ಈ ರೀತಿಯ ಪ್ರತಿಭಾ ಪುರಸ್ಕಾರ ನಡೆಸುವ ಮೂಲಕ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು. ಯಾವುದೇ ಸಮಾಜ ಎಲ್ಲ ಕ್ಷೇತ್ರದಲ್ಲಿ ಮುಂದೆ ಬರಬೇಕಾದದೆ ಶಿಕ್ಷಣ ಅತೀ ಮುಖ್ಯ. ಉತ್ತಮ ವಿದ್ಯಾವಂತರಾಗುವ ಮೂಲಕ ಕುಟುಂಬ, ಸಮಾಜ ಹಾಗೂ ದೇಶಕ್ಕೆ ಹೆಸರು ತರುವಂತಾಗಬೇಕು ಎಂಬ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಸಮಾಜದ ಒಟ್ಟಾರೆ ಆಶಯದಂತೆ ಪ್ರತಿಭಾವಂತರ ಜೊತೆಗೆ ಸಮಾಜದ ಇತರೆ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಯೊಂದಿಗೆ ಒಳ್ಳೆಯ ಕೆಲಸ ಪಡೆದು, ಸಮಾಜದ ಸೇವೆ ಮಾಡುವಂತಾಗಬೇಕು ಎಂದು ಆಶಿಸಿದರು. ಹಿಂದೆಲ್ಲಾ ರೈತರ ಮಕ್ಕಳು ರೈತರು, ವರ್ತಕರ ಮಕ್ಕಳು ವರ್ತಕರು, ಅಧಿಕಾರಿಗಳ ಮಕ್ಕಳು ಅಧಿಕಾರಿಗಳು ಆಗಬೇಕು ಎನ್ನಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಎಷ್ಟೇ ಬಡವರೇ ಇರಲಿ ತಮ್ಮ ಮಕ್ಕಳು ಚೆನ್ನಾಗಿ ಓದಿ, ಒಳ್ಳೆಯ ಕೆಲಸಕ್ಕೆ ಸೇರಬೇಕು ಎಂದು ಪ್ರತಿಯೊಬ್ಬ ತಂದೆ-ತಾಯಿ ಬಯಸುತ್ತಾರೆ. ತಂದೆ-ತಾಯಿಗಳ ಬಯಕೆಯಂತೆ ಈಗ ಸಾಕಷ್ಟು ಅವಕಾಶವೂ ಇವೆ. ಇಂಜಿನಿಯರ್‌, ಡಾಕ್ಟರ್‌, ಐಎಎಸ್‌, ಐಪಿಎಸ್‌, ಕೆಎಎಸ್‌ ಅಧಿಕಾರಿಗಳಾಗಬಹುದು. ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕ ಪಡೆದವರು ಮಾತ್ರವೇ ಬುದ್ಧಿವಂತರಲ್ಲ. ಪ್ರತಿಯೊಬ್ಬರು ಬುದ್ಧಿವಂತರು. ಆ ಬುದ್ಧಿವಂತಿಕೆಯನ್ನೇ ಉಪಯೋಗಿಸಿಕೊಂಡು ಕನಿಷ್ಟ ಪಕ್ಷ ಪದವಿಯನ್ನಾದರೂ ಪಡೆಯಬೇಕು. ವಿದ್ಯಾರ್ಜನೆಯ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ಪೋಷಕರು ಮಕ್ಕಳ ಮೇಲೆ ಇಷ್ಟೇ ಅಂಕ ಪಡೆಯಬೇಕು, ಇದನ್ನೇ ಓದಬೇಕು ಎಂಬ ಒತ್ತಡ ಹಾಕದೆ ಮಕ್ಕಳು ಬಯಸುವಂತಹ ಶಿಕ್ಷಣ ಕೊಡಿಸಬೇಕು. ಶಿಕ್ಷಣದ ಜೊತೆಗೆ ಗುರು-ಹಿರಿಯರು, ಒಳ್ಳೆಯದು, ಕೆಟ್ಟದು, ಮಾನವೀಯ ಗುಣ ರೂಪಿಸಬೇಕು ಎಂದು ತಿಳಿಸಿದರು.
ಪಂಚಮಸಾಲಿ ಸಮಾಜವನ್ನು ಯಾವ ಸಮಾಜದ ವಿರುದ್ಧವಾಗಿ ಕಟ್ಟುತ್ತಿಲ್ಲ. ನಮ್ಮ ಸಂಪ್ರದಾಯ, ಆಚಾರ, ವಿಚಾರ ಬೆಳೆಸಿಕೊಂಡು ಹೋಗುವ ಜೊತೆಗೆ ಸಮಾಜದ ಸಂಘಟನೆಗೆ ಹೆಚ್ಚು ಗಮನ ನೀಡಲಾಗುತ್ತಿದೆ. ಸಮಾಜಕ್ಕೆ ಹಣ ಕೊಡದೇ ಇದ್ದರೂ ಚಿಂತೆ ಇಲ್ಲ. ಇದು ನಮ್ಮ ಸಮಾಜ, ನಮ್ಮ ಸಮಾಜ ಒಗ್ಗಟ್ಟಾಗಬೇಕು. ನಾವೆಲ್ಲರೂ ಸಂಘಟಿತರಾಗಬೇಕು. ವ್ಯಕ್ತಿಗಿಂತಲೂ ಸಮಾಜ ದೊಡ್ಡದು ಎಂದು ಸಮಾಜದ ಕೆಲಸ ಮಾಡುವರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಮಾರಂಭ ಉದ್ಘಾಟಿಸಿದ ಕೈಗಾರಿಕೋದ್ಯಮಿ ಮಾತನಾಡಿ, ಮಹಿಳೆಯರಿಗೆ ಶಿಕ್ಷಣ ನೀಡಿದರೆ ಕುಟುಂಬ, ಸಮಾಜದ ಅಭಿವೃದ್ಧಿ ಆಗುತ್ತದೆ. ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವುದನ್ನು ನಿಲ್ಲಿಸಬಾರದು ಎಂದು ಮನವಿ ಮಾಡಿದರು. ಸಮಾಜದ ಮುಖಂಡರಾದ ಬಾದಾಮಿ
ಕರಿಬಸಪ್ಪ, ಎಂ. ದೊಡ್ಡಪ್ಪ, ಶ್ರೀಧರ್‌, ಜಿ. ಷಣ್ಮುಖಪ್ಪ, ರಶ್ಮಿ ನಾಗರಾಜ್‌ ಕುಂಕೋದ್‌, ಪಾರ್ವತಿ ಕೊಟ್ರಗೌಡ, ಉದ್ಯಮಿಗಳಾದ ಎಸ್‌.ವಿ. ಚಂದ್ರಶೇಖರಪ್ಪ, ಎಸ್‌.ಕೆ. ಶ್ರೀಧರ್‌ ಇತರರು ಇದ್ದರು. ಹರಪನಹಳ್ಳಿಯ ಎಸ್‌.ಜೆ.ಯು.ಎಂ. ಕಾಲೇಜು ಕನ್ನಡ ಉಪನ್ಯಾಸಕ ಎಚ್‌. ಮಲ್ಲಿಕಾರ್ಜುನ್‌, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಎಸ್‌.ಎಚ್‌. ಹೂಗಾರ್‌ ಉಪನ್ಯಾಸ ನೀಡಿದರು.
ಮಂಜುನಾಥ್‌ ಪುರವಂತರ್‌ ಸ್ವಾಗತಿಸಿದರು. ಪ್ರೊ. ಪಾಲಾಕ್ಷ ನಿರೂಪಿಸಿದರು. ದ್ವಿತೀಯ ಪಿಯುಸಿಯಲ್ಲಿ ಪ್ರಥಮ ರ್‍ಯಾಂಕ್‌ ಪಡೆದ ಕೊಟ್ಟೂರು ಇಂದು ಕಾಲೇಜಿನ ಬಿ. ಚೈತ್ರಗೆ ವಿಶೇಷ ಸನ್ಮಾನ ನೀಡಲಾಯಿತು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ
ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next