Advertisement

ಗೋ ಕಳವು, ಅಕ್ರಮ ಕಸಾಯಿಖಾನೆ ಮಟ್ಟಹಾಕಿ

10:12 AM Jun 30, 2019 | Team Udayavani |

ಮಂಗಳೂರು: ಗೋ ಕಳವು ಹಾಗೂ ಅಕ್ರಮ ಕಸಾಯಿಖಾನೆಗಳನ್ನು ಮಟ್ಟಹಾಕಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಗ್ರ ಕಾರ್ಯಾಚರಣೆ ನಡೆಸಬೇಕು ಎಂದು ಬಿಜೆಪಿ ಸಂಸದರು ಹಾಗೂ ಶಾಸಕರನ್ನು ಒಳಗೊಂಡ ನಿಯೋಗ ದ.ಕ. ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಗೆ ಮನವಿ ಸಲ್ಲಿಸಿ ಆಗ್ರಹಿಸಿದೆ.

Advertisement

ಸಂಸದ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಶಾಸಕರಾದ ಉಮಾನಾಥ ಕೋಟ್ಯಾನ್‌, ವೇದವ್ಯಾಸ ಕಾಮತ್‌, ಹರೀಶ್‌ ಪೂಂಜಾ, ರಾಜೇಶ್‌ ನಾಯಕ್‌, ಡಾ| ವೈ. ಭರತ್‌ ಶೆಟ್ಟಿ, ಮುಖಂಡರಾದ ಕಿಶೋರ್‌ ರೈ, ಉದಯ ಕುಮಾರ್‌ ಶೆಟ್ಟಿ, ವಿನಯ ಎಲ್‌. ಶೆಟ್ಟಿ, ದಿನೇಶ್‌ ಪಾಂಡೇಶ್ವರ, ರಾಜೇಶ್‌ ಶೆಟ್ಟಿ ಮತ್ತು ಪುಷ್ಪರಾಜ್‌ ಆಳ್ವ ಅವರನ್ನು ಒಳಗೊಂಡ ನಿಯೋಗ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌, ಮಂಗಳೂರು ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್‌ ಜತೆ ಮಾತುಕತೆ ನಡೆಸಿತು.

ಗೋವಂಶ ರಕ್ಷಣೆಗೆ ಬದ್ಧ
ಗೋಸಂಬಂಧಿ ಘಟನೆಗಳನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ; ಗೋವಂಶ ರಕ್ಷಣೆಗೆ ಬದ್ಧ ಎಂದು ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ ಎಂದು ನಳಿನ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಆಯಕಟ್ಟಿನ ಜಾಗದಲ್ಲಿ ಸಿಸಿ ಕೆಮರಾ
ಹಾಗೂ ಬ್ಯಾರಿಕೇಡ್‌ಗಳನ್ನು ಹಾಕಿ ದಿನದ 24 ಗಂಟೆಯೂ ಕಟ್ಟುನಿಟ್ಟಾದ ಬಂದೋಬಸ್ತು ವ್ಯವಸ್ಥೆ ಕೈಗೊಳ್ಳುವುದು, ನಾಗರಿಕರನ್ನು ಒಳಗೊಂಡ ಕಣ್ಗಾವಲು ಸಮಿತಿ ರಚಿಸಬೇಕು. ಗೋವಿಗೆ ಸಂಬಂಧಪಟ್ಟ ಎಲ್ಲ ಕಾನೂನುಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಪ್ರಾಣಿ ಕಾರ್ಯ ತಡೆ ಮಂಡಳಿ (ಎಸ್‌ಪಿಸಿಎ)ನ್ನು ಸಕ್ರಿಯಗೊಳಿಸ ಬೇಕೆಂದು ಆಗ್ರಹಿಸಿದರು.

ಕುದ್ರೋಳಿಯ ಕಸಾಯಿಖಾನೆ ಅಕ್ರಮ ಹಾಗೂ ಗೋ ಹಂತಕರಿಗೆ ಅನುಕೂಲಕರ ಸ್ಥಳವಾಗಿದೆ ಎಂದು ಆರೋಪಿಸಿದ ನಳಿನ್‌, ಅದನ್ನು ಬೇರೆಡೆಗೆ ಸ್ಥಳಾಂತರಿಸ ಬೇಕು ಹಾಗೂ ಗೋವು ಕಳ್ಳತನವಾದ ಮನೆಯವರಿಗೆ 50,000 ರೂ.ಗಳಿಂದ 1 ಲಕ್ಷ ರೂ. ವರೆಗೆ ಪರಿಹಾರವನ್ನು ಜಿಲ್ಲಾಡಳಿತ ನೀಡುವ ಮೂಲಕ ಮುಂದೆಯೂ ಗೋವು ಸಾಕುವಂತೆ ಧೈರ್ಯ ಬರಲು ರಕ್ಷಣೆ ಕೊಡುವಂತೆ ಆಗ್ರಹಿಸಲಾಗಿದೆ ಎಂದು ಹೇಳಿದರು.

ಅಂತಾರಾಜ್ಯ ದನ ಸಾಗಾಟ ನಿಯಂತ್ರಿಸಿ
ನೆರೆಯ ಕೇರಳದಲ್ಲಿ ಗೋಹತ್ಯಾ ನಿಷೇಧ ಕಾನೂನು ಹೊರತು ಪಡಿಸಿ ಗೋ ಸಾಗಾಟದ ಎಲ್ಲ ನಿಯಮಗಳು, ಪ್ರಾಣಿ ಕ್ರೌರ್ಯ ತಡೆ ಕಾಯಿದೆ 1960, ಕಸಾಯಿಖಾನೆ ನಿಯಮಾವಳಿಗಳು ಜಾರಿಯಲ್ಲಿವೆ. ಆದ್ದರಿಂದ ಕೇರಳ ಸಂಪರ್ಕಿಸುವ ಎಲ್ಲ ಗಡಿಗಳಲ್ಲಿ ವಿಶೇಷ ಚೆಕ್‌ ಪೋಸ್ಟ್‌ ಸ್ಥಾಪಿಸಿ ಗೋ ಸಾಗಾಟದ ಎಲ್ಲ ಕಾಯ್ದೆ ಮತ್ತು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದರು.
ಮರಳಿ ವಶಪಡಿಸಿ ಜೋಕಟ್ಟೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸುಳ್ಳು ದಾಖಲೆ ನೀಡಿ ಗೋವುಗಳನ್ನು ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಇದ್ದು, ಸುಳ್ಳು ದಾಖಲೆ ಕೊಡಲು ಯಾರ್ಯಾರು ಸಹಕರಿಸಿದ್ದಾರೆ ಎನ್ನುವ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯ ಸಂಗತಿಯನ್ನು ನ್ಯಾಯಾಲಯಕ್ಕೆ ತಿಳಿಸಿ ಬಿಡುಗಡೆ ಗೊಳಿಸಿದ ಗೋವುಗಳನ್ನು ಮತ್ತೆ ವಶ ಪಡೆದು ರಕ್ಷಿಸಬೇಕು ಎಂದರು.

Advertisement

ಪ್ರಾಣಿ ಸಾಗಾಟಕ್ಕೆ ವಿಶೇಷ ಪರವಾನಿಗೆ
ದೇಶಾದ್ಯಂತ ಎಲ್ಲ ಪ್ರಾಣಿಗಳ ಹಿಂಸಾತ್ಮಕ ಸಾಗಾಟ ತಡೆಗಟ್ಟಲು ಪ್ರಧಾನಿ ಮೋದಿ ಅವರು ಮೋಟಾರು ವಾಹನ ಕಾಯ್ದೆ ನಿಯಮಾವಳಿ 2015 (11ನೇ ತಿದ್ದುಪಡಿ)ನ್ನು ತಂದಿದ್ದಾರೆ. ಅದರ ಪ್ರಕಾರ ಪ್ರತಿ ಪ್ರಾಣಿಯ ಸಾಗಾಟಕ್ಕೆ ಸೂಕ್ತ ಸ್ಥಳ ವಿನ್ಯಾಸ ಮಾಡಿದ ವಾಹನ ಹಾಗೂ ಅದಕ್ಕೆ ಆರ್‌ಟಿಒ ಪರವಾನಿಗೆ ಅಗತ್ಯ. ಆದರೆ ಇಂತಹ ವಾಹನ ರಾಜ್ಯದಲ್ಲಿ ಎಲ್ಲಿಯೂ ಇಲ್ಲ. ಕೇಂದ್ರದ ಹೊಸ ನಿಯಮಾವಳಿ ಅನುಷ್ಠಾನಿಸ ಬೇಕೆಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next