Advertisement

ಲಾಂಗ್‌ ಡ್ರೈವ್‌ಗೆ ಹೋಗಿ ಪ್ರಾಣ ಕಳೆದುಕೊಂಡ!

12:01 PM Sep 18, 2017 | Team Udayavani |

ಬೆಂಗಳೂರು: ಕಾರಿನಲ್ಲಿ ಲಾಂಗ್‌ ಡ್ರೈವ್‌ಗೆ ಹೋಗಿದ್ದ ಮೂವರು ವಿದ್ಯಾರ್ಥಿಗಳ ಪೈಕಿ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಸುಕಿನಲ್ಲಿ ಎಲೆಕ್ಟ್ರಾನಿಕ್‌ ಸಿಟಿಯ ಹೊಸೂರು ರಸ್ತೆ ಮೇಲ್ಸೇತುವೆಯಲ್ಲಿ ನಡೆದಿದೆ. ಹರ್ಫನ್‌ (17) ಮೃತ ವಿದ್ಯಾರ್ಥಿ. ಶ್ರೀನಿವಾಸ್‌ ಮತ್ತು ಅನಿರುದ್ಧ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

ಈ ಮೂವರ ವಿರುದ್ಧ ಭಾರತೀಯ ಮೋಟಾರ್‌ ವೆಹಿಕಲ್‌ ಕಾಯ್ದೆ ಮತ್ತು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬದುಕುಳಿದ ಇಬ್ಬರನ್ನು ಬಂಧಿಸಲಾಗಿದೆ. ಹಾಗೆಯೇ ತಮ್ಮ ಅಪ್ರಾಪ್ತ ಮಕ್ಕಳಿಗೆ ಚಾಲನೆಗೆ ಮಾಡಲು ವಾಹನ ಕೊಟ್ಟ ಆರೋಪದ ಅಡಿ ಅನಿರುದ್ಧ ತಂದೆ ಕೃಷ್ಣಮೂರ್ತಿ ಮತ್ತು ಶ್ರೀನಿವಾಸ್‌ ತಂದೆ ಗೋವಿಂದರಾಜು ಅವರನ್ನು ಕೂಡ ಬಂಧಿಸಲಾಗಿದೆ ಎಂದು ಸಂಚಾರ ವಿಭಾಗದ ಡಿಸಿಪಿ ಅಭಿಷೇಕ್‌ ಗೋಯಲ್‌ ತಿಳಿಸಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿ ಉದ್ಯಮಿಯೊಬ್ಬರ ಪುತ್ರ ಹರ್ಷನ್‌ ಮತ್ತು ದೇವರಚಿಕ್ಕನಹಳ್ಳಿ ಬಳಿಯ ವರ್ತುಲ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ ಟೆಕ್ಕಿಗಳ ಪುತ್ರರಾದ ಶ್ರೀನಿವಾಸ್‌ ಮತ್ತು ಅನಿರುದ್ಧ ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಮೂವರು ಆಪ್ತ ಸ್ನೇಹಿತರಾಗಿದ್ದಾರೆ. ಶನಿವಾರ ತಡರಾತ್ರಿ 12.30ರ ಸುಮಾರಿಗೆ ಪೋಷಕರಿಗೆ ತಿಳಿಸದೆಯೇ ಮೂವರು ಪ್ರತ್ಯೇಕ ಸ್ಕೋಡಾ, ಇನ್ನೋವಾ ಹಾಗೂ ಸ್ವಿಫ್ಟ್ ಡಿಸೈರ್‌ ಕಾರುಗಳಲ್ಲಿ ಫಾಸ್ಟ್‌ ಜಾಲಿ ರೈಡ್‌ ಹೊರಟಿದ್ದಾರೆ.

ಭಾನುವಾರ ಮುಂಜಾನೆ 2.45ರ ಸುಮಾರಿಗೆ ಎಲೆಕ್ಟ್ರಾನಿಕ್‌ ಸಿಟಿ ಮಾರ್ಗವಾಗಿ ಹೊಸೂರು ಮುಖ್ಯರಸ್ತೆಯಲ್ಲಿರುವ ಫ್ಲೈಓವರ್‌ ಬಳಿ ಬಂದಿದ್ದಾರೆ. ನಂತರ ಸುಮಾರು 150 ಕಿ.ಮೀಟರ್‌ ವೇಗದಲ್ಲಿ ಮೂವರು ಕಾರು ಚಲಾಯಿಸಿದ್ದು, ಈ ವೇಳೆ ಒಬ್ಬರನ್ನು ಮತ್ತೂಬ್ಬರನ್ನು ಹಿಂದಿಕ್ಕುವ ಭರದಲ್ಲಿ ಕಾರಿನ ವೇಗ ಹೆಚ್ಚಿಸಿದಾಗ ಪರಸ್ಪರ ಡಿಕ್ಕಿಹೊಡೆದುಕೊಂಡಿದ್ದಾರೆ ಎಂದು ಅವರು ವಿವರಿಸಿದರು.

ನಿಯಂತ್ರಣ ತಪ್ಪಿದ ಕಾರುಗಳು: ಫ್ಲೈಓವರ್‌ನ ಆರಂಭದಲ್ಲಿಯೇ ಮೃತ ಹರ್ಫನ್‌ ತನ್ನ ಸ್ಕೋಡಾ ಕಾರಿನ ನಿಯಂತ್ರಣ ಕಳೆದುಕೊಂಡು ತಡೆಗೋಡೆಗೆ ಡಿಕ್ಕಿಹೊಡೆದಿದ್ದಾನೆ. ಬಳಿಕ ರಸ್ತೆ ವಿಭಜಕ ಪಕ್ಕದಲ್ಲಿ ನಿಲ್ಲಿಸಿದ್ದ 10 ಬ್ಯಾರಿಕೇಡ್‌ಗಳನ್ನು ನೆಲಕ್ಕುರುಳಿಸಿದ್ದಾನೆ. ಪರಿಣಾಮ ಕಾರು ನಾಲ್ಕೈದು ಪಲ್ಟಿ ಹೊಡೆದಿದೆ. ಆಗ ಹರ್ಫನ್‌ ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Advertisement

ಇದೇ ವೇಳೆ ಹರ್ಫನ್‌ನನ್ನು ಬೆನ್ನತ್ತಿದ್ದ ಅನಿರುದ್ಧ್ ತನ್ನ ಇನೋವಾ ಕಾರಿನಲ್ಲಿ ಬರುವಾಗ ರಸ್ತೆ ವಿಭಜಕಕ್ಕೆ ಡಿಕ್ಕಿಹೊಡೆದು ಮುಂಭಾಗದಲ್ಲಿ ಬರುತ್ತಿದ್ದ ಹಾಲಿನ ಟ್ಯಾಂಕರ್‌ಗೆ ಗುದ್ದಿದ್ದಾನೆ. ಡಿಕ್ಕಿ ರಭಸಕ್ಕೆ ಹಾಲಿನ ಟ್ಯಾಂಕರ್‌ ನೆಲಕ್ಕೆ ಉರುಳಿ ಬಿದ್ದಿದ್ದು, ಹಿಂಬದಿಯ ಆಕ್ಸೆಲ್‌ ತುಂಡಾಗಿದೆ. ಅದೃಷ್ಟವಶಾತ್‌ ಟ್ಯಾಂಕರ್‌ ಚಾಲಕ ಹಾಗೂ ಮತ್ತೂಬ್ಬ ಸಹಾಯಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನೋವಾ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಅನಿರುದ್‌ªಗೆ ಸಹ ಸಣ್ಣಪುಟ್ಟ ಗಾಯಗಳಾಗಿವೆ. ಹಾಗೆಯೇ ಶ್ರೀನಿವಾಸ್‌ನ ಸ್ವಿಫ್ಟ್ ಡಿಸೈರ್‌ ಕಾರು ಕೂಡ ಪಲ್ಟಿಯಾಗಿದ್ದು, ಈತನಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೋಷಕರಿಗೇ ಗೊತ್ತಿಲ್ಲ: ವೀಕೆಂಡ್‌ನ‌ಲ್ಲಿ ಜಾಲಿ ರೈಡ್‌ ಮಾಡುವ ಉದ್ದೇಶದಿಂದ ಶನಿವಾರ ರಾತ್ರಿಯೇ ಮೊಬೈಲ್‌ ಮೂಲಕ ಮೂವರು ಪರಸ್ಪರ ಸಂದೇಶಗಳನ್ನು ಕಳುಹಿಸಿಕೊಂಡಿದ್ದು, ಸಂಚಾರ ನಿಯಂತ್ರಣ ಅತೀ ವಿರಳವಿರುವ ಹೊಸೂರು ಫ್ಲೈಓವರ್‌ ಬಳಿ ಬರುವಂತೆ ರವಾನಿಸಿಕೊಂಡಿದ್ದಾರೆ. ಅದರಂತೆ ತಡರಾತ್ರಿ 12.30ರ ಸುಮಾರಿಗೆ ಪೋಷಕರಿಗೆ ತಿಳಿಸದೆಯೇ ಕಾರುಗಳನ್ನು ಮನೆಯಿಂದ ಹೊರ ತಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆಯೂ ರೈಡ್‌ ಹೋಗಿದ್ರು: ಈ ಹಿಂದೆಯೂ ಹಲವು ಬಾರಿ ಇದೇ ವಿದ್ಯಾರ್ಥಿಗಳು ಜಾಲಿ ರೈಡ್‌ ಹೋಗಿದ್ದರು. ಇದೇ ರೀತಿಯ ರೀತಿಯ ಹವ್ಯಾಸಕ್ಕೆ ಬಿದ್ದ ಯುವಕರು ವೇಗವಾಗಿ ಕಾರುಗಳನ್ನು ಚಾಲನೆ ಮಾಡುವುದನ್ನು ಕರಗತ ಮಾಡಿಕೊಂಡಿದ್ದರು ಎಂಬುದು ಸಂಚಾರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಅಲ್ಲದೆ ಈ ಕಾಲೇಜಿನಲ್ಲಿ ಇತರೆ ವಿದ್ಯಾರ್ಥಿಗಳೂ ಬೈಕ್‌ ವೀಲ್ಹಿಂಗ್‌ ಮತ್ತು ಜಾಲಿ ರೈಡ್‌ ಹೋಗುವ ಹವ್ಯಾಸ ಇಟ್ಟುಕೊಂಡಿರುವುದಾಗಿ  ತಿಳಿದು ಬಂದಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next