ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣದ ಪ್ರಸ್ತುತ ಪ್ರಗತಿ ಹಾಗೂ ಅಭಿಯಾನದಲ್ಲಿ ಬಾಕಿ ಉಳಿದಿರುವ ಒಂದನೇ ಮತ್ತು ಎರಡನೇ ಡೋಸ್ ಕೊವಿಡ್ ಲಸಿಕೆ ಪಡೆಯಬೇಕಾಗಿರುವ ಫಲಾನುಭವಿಗಳನ್ನು ಗುರುತಿಸಬೇಕು. ಅಲ್ಲದೇ ಇಂಥವರ ಪ್ರತಿ ಮನೆಗೆ ಭೇಟಿ ನೀಡಿ ಸ್ಥಳದಲ್ಲೇ ಲಸಿಕೆ ನೀಡಬೇಕು. ಲಸಿಕೆ ನೀಡಿದ ಬಗ್ಗೆ ಸ್ಥಳದಲ್ಲೇ ಕೊವಿಡ್ ಪೋರ್ಟಲ್‌ನಲ್ಲಿ ದಾಖಲಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಎಲ್ಲ ತಾಲೂಕಿನಲ್ಲಿರುವ ಕೆಸ್ವಾನ್ ಕೇಂದ್ರಗಳಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾ ಧಿಕಾರಿಗಳು ಹಾಜರಿದ್ದು ತಮ್ಮ ತಾಲೂಕಿಗೆ ಸಂಬಂಧಿ ಸಿದ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಬೇಕು ಎಂದು ಸೂಚಿಸಿದರು.
ಕೋವಿಡ್ ಲಸಿಕಾಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಹರ ಘರ ದಸ್ತಕ್ -ಪ್ರತಿ ಮನೆ ಮನೆಗೆ ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲ ಅಧಿಕಾರಿಗಳು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು.
ರಾಷ್ಟ್ರೀಯ ಪಲ್ಸ್ ಪೋಲಿಯೋ ಮಾದರಿಯಲ್ಲಿ ನ. 11ರಿಂದ 30ರವರೆಗೆ ಪ್ರತಿ ಮನೆಗೆ ಭೇಟಿ ನೀಡಿ ಕೊವಿಡ್ ಲಸಿಕೆಯನ್ನು ನೀಡಬೇಕು. ನಿಗದಿತ ನಮೂನೆಯಲ್ಲಿ ಪ್ರತಿ ದಿನದ ಕೋವಿಡ್ ಲಸಿಕಾಕರಣದ ಪ್ರಗತಿ ವರದಿಯನ್ನು ಪ್ರತಿ ತಂಡಗಳಿಂದ ಕ್ರೋಢೀಕರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವರದಿ ಸಿದ್ಧಪಡಿಸಿ, ತಾಲೂಕಿಗೆ ಕಳುಹಿಸಿ ಕೊಡಬೇಕು. ಮೂರು ದಿನದ ನಂತರ ಸಭೆ ಸೇರಿ ಪ್ರಗತಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ನ. 30 ನಿಗದಿತ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಲಸಿಕಾಕರಣ ಮಾಡಿ, 1 ಹಾಗೂ 2ನೇ ಡೋಸ್ ವಿಷಯದಲ್ಲಿ ಶೇ. 100 ಸಾಧನೆ ಮಾಡಬೇಕು. ಇದರ ಹೊರತಾಗಿಯೂ ಎರಡನೇ ಡೋಸ್ ಲಸಿಕೆ ಪಡೆಯುವ ಪ್ರಕರಣದಲ್ಲಿ ಡಿಸೆಂಬರ 1ರಿಂದ ಕೇವಲ 2ನೇ ಡೋಸ್ ಲಸಿಕಾಕರಣಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡಿ, ಗುರಿ ಸಾಧನೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಗೋವಿಂದ ರೆಡ್ಡಿ ಸೇರಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳು, ಡಬ್ಲೂಎಚ್‌ಒ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅನುಷ್ಠಾನ ಅಧಿಕಾರಿಗಳು ಇದ್ದರು.