ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಲಭಿಸಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಯೋಧರ ಮನೆಗಳಿಗೆ ತೆರಳಿ ಅವರನ್ನು ಸನ್ಮಾನಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಅದರ ಪ್ರಧಾನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಬೆಂಗಳೂರಿನಲ್ಲಿರುವ ಇಬ್ಬರು ಸ್ವಾತಂತ್ರ್ಯ ಯೋಧರ ನಿವಾಸಕ್ಕೆ ತೆರಳಿ, ಗೌರವ ಸಲ್ಲಿಸಲಿದ್ದಾರೆ.
ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಸಂಸ್ಮರಣಾ ದಿನವಾದ ಆ. 9ರಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಲ್ಲೇಶ್ವರ ಬಡಾವಣೆಯಲ್ಲಿರುವ ವಿ. ನಾಗಭೂಷಣ ರಾವ್ ಹಾಗೂ ಹಲಸೂರು ಬಡಾವಣೆಯಲ್ಲಿರುವ ಆರ್. ನಾರಾಯಣಪ್ಪ ಅವರ ಮನೆಗೆ ತೆರಳಿ ರಾಜ್ಯಪಾಲರು ಗೌರವ ಸಮರ್ಪಣೆ ಮಾಡಲಿದ್ದಾರೆ.
ಜಿಲ್ಲಾ ಮಟ್ಟದಲ್ಲಿಯೂ ಇದೇ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ರಾಜ್ಯಪಾಲರು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಸೂಚನೆ ನೀಡಿದ್ದಾರೆ.
ಅದರಂತೆ ಜಿಲ್ಲಾ ಮಟ್ಟದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ತೆರಳಿ ಸನ್ಮಾನಿಸಲಾಗುತ್ತದೆ.