Advertisement

BJP ಕಚೇರಿಯಲ್ಲೇ ಗೋ ಬ್ಯಾಕ್‌ ಶೋಭಾ ಅಭಿಯಾನ

11:42 PM Mar 10, 2024 | Team Udayavani |

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಇದುವರೆಗೆ ತೆರೆಮರೆಯಲ್ಲಿ ನಡೆಯುತ್ತಿದ್ದ “ಗೋ ಬ್ಯಾಕ್‌’ ಅಭಿಯಾನ ರವಿವಾರ ಪಕ್ಷದ ಕಚೇರಿಯಲ್ಲಿ ವರಿಷ್ಠರ ಸಮ್ಮುಖದಲ್ಲೇ ಸ್ಫೋಟಗೊಂಡಿದೆ.

Advertisement

ಶೋಭಾಗೆ ಟಿಕೆಟ್‌ ನೀಡಬಾರದು ಎಂದು ಆಗ್ರಹಿಸಿ ದಿಢೀರ್‌ ಧರಣಿ ನಡೆಸಿ ಸಭೆಯಲ್ಲಿದ್ದ ಪಕ್ಷದ ಹಲವು ಮುಖಂಡರನ್ನು ಮುಜುಗರಕ್ಕೀಡು ಮಾಡಿದ ಘಟನೆ ನಡೆಯಿತು.

ಬಿಜೆಪಿ ಕಚೇರಿಯಲ್ಲಿ ರವಿವಾರ ಪರಿಶಿಷ್ಟ ಪಂಗಡ ಗಳ ಮುನ್ನಡೆ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಮಾಜಿ ಸಚಿವ ಆರಗ ಜ್ಞಾನೇಂದ್ರ, ಚುನಾವಣ ಉಸ್ತುವಾರಿ ಭಾನುಪ್ರಕಾಶ್‌, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್‌. ದೇವರಾಜ್‌ ಶೆಟ್ಟಿ, ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್‌ ಮತ್ತಿತರ ನಾಯಕರು ಭಾಗವಹಿಸಿದ್ದರು.

ಸಭೆಯ ಮೊದಲು ಸಿ.ಟಿ.ರವಿ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿದ್ದ ಕೆಲವರು, ವರಿಷ್ಠರು ಮಾತು ಆರಂಭಿಸುತ್ತಿದ್ದಂತೆ ದಿಢೀರ್‌ ಆಗಿ “ಗೋ ಬ್ಯಾಕ್‌ ಶೋಭಾ’ ಘೋಷಣೆ ಕೂಗಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ನೀಡಬಾರದು. ಮಾಜಿ ಶಾಸಕ ಸಿ.ಟಿ.ರವಿ ಅವರಿಗೆ ಈ ಬಾರಿಯ ಲೋಕಸಭೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ, ಸಿ.ಟಿ. ರವಿ ಸಹಿತ ಹಲವು ಮುಖಂಡರು, ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಈ ವೇಳೆ ಸಭೆಯಲ್ಲಿ ಗೊಂದಲ ಏರ್ಪಟ್ಟಿದ್ದಲ್ಲದೆ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.

Advertisement

ಬಿಎಸ್‌ವೈ ವಿರುದ್ಧವೂ ಆಕ್ರೋಶ
ಯಡಿಯೂರಪ್ಪ ಅವರು ಹಾದಿ-ಬೀದಿಯಲ್ಲಿ ಶೋಭಾ ಅವರಿಗೆ ಟಿಕೆಟ್‌ ಎಂದು ಘೋಷಣೆ ಮಾಡಿದ್ದಾರೆ. ವರಿಷ್ಠರು ಅಭ್ಯರ್ಥಿಯನ್ನು ಘೋಷಿಸುವ ಮೊದಲೇ ಬಿಎಸ್‌ವೈ ಈ ರೀತಿ ಹೇಳುವುದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಸುಮಾರು 1 ಗಂಟೆ ನಡೆದ ಹೈಡ್ರಾಮಾದಿಂದಾಗಿ ಪಕ್ಷದ ವರಿಷ್ಠರು ತೀವ್ರ ಮುಜುಗರಕ್ಕೀಡಾದರು.

ರವಿ ಸೂತ್ರಧಾರ: ಶೋಭಾ ಬೆಂಬಲಿಗರ ಆರೋಪ
ಗೋ ಬ್ಯಾಕ್‌ ಅಭಿಯಾನದ ಸೂತ್ರಧಾರ ಸಿ.ಟಿ. ರವಿ ಅವರಾಗಿದ್ದಾರೆ. ಅಭಿಯಾನದ ವಿರುದ್ಧ ಹೇಳಿಕೆ ನೀಡಿದ್ದ ಶೋಭಾ ಕರಂದ್ಲಾಜೆ ಅವರೂ ಸಿ.ಟಿ.ರವಿ ವಿರುದ್ಧವೇ ಪರೋಕ್ಷವಾಗಿ ವಾಗ್ಧಾಳಿ ನಡೆಸಿದ್ದರು. ರವಿವಾರ ಕೆಲವರಪ ಸಿ.ಟಿ.ರವಿಗೇ ಟಿಕೆಟ್‌ ನೀಡಬೇಕೆಂದು ಆಗ್ರಹಿಸಿರುವುದು ಈ ಅಭಿಯಾನದ ಹಿಂದೆ ರವಿ ಇರುವುದಕ್ಕೆ ಸಾಕ್ಷಿ ಎಂದು ಶೋಭಾ ಪರ ಇರುವ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.

ಪಕ್ಷದ ಕಚೇರಿಯಲ್ಲಿ ರವಿವಾರ ನಡೆದ ಧರಣಿಯಿಂದ ಬೇಸರವಾಗಿದೆ. ಕಾರ್ಯಕರ್ತರಿಗೆ ಅನಿಸಿಕೆ ಹೇಳಿ ಕೊಳ್ಳಲು ಮುಕ್ತ ಅವಕಾಶವನ್ನು ಪಕ್ಷ ನೀಡಿದೆ. ಆದರೆ ಅದನ್ನು ಬಹಿರಂಗವಾಗಿ ಧರಣಿ ನಡೆಸಿ ಹೇಳುವುದು ಸರಿಯಲ್ಲ. ಅಭ್ಯರ್ಥಿಗಳ ಆಯ್ಕೆ ವರಿಷ್ಠರಿಗೆ ಬಿಟ್ಟಿದ್ದು.
– ಸಿ.ಟಿ. ರವಿ, ಮಾಜಿ ಶಾಸಕ

ತುಮಕೂರಿನಲ್ಲಿ “ಗೋ ಬ್ಯಾಕ್‌ ಸೋಮಣ್ಣ ‘
ಮಾಧುಸ್ವಾಮಿ ಬೆಂಬಲಿಗನಿಂದ ಪೆಟ್ರೋಲ್‌ ಸುರಿದು ಆತ್ಮಹತ್ಯೆ ಯತ್ನ
ಚಿಕ್ಕನಾಯಕನಹಳ್ಳಿ: ತುಮಕೂರು ಜಿಲ್ಲೆಗೆ ವಿ.ಸೋಮಣ್ಣಅವರ ಕೊಡುಗೆ ಏನೂ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಸೋಮಣ್ಣಗೆ ಟಿಕೆಟ್‌ ನೀಡಿದರೆ ಪಕ್ಷ ಸೋಲುವುದು ಖಚಿತ ಎಂದು ಆರೋಪಿಸಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬೆಂಬಲಿಗರು ದಿಢೀರ್‌ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಜೆ.ಸಿ.ಮಾಧುಸ್ವಾಮಿ ಬೆಂಬಲಿಗನೊಬ್ಬ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು.

ರವಿವಾರ ಚಿಕ್ಕನಾಯಕನಹಳ್ಳಿ ಹಾಗೂ ವಿವಿಧ ತಾಲೂಕುಗಳಿಂದ ಕೆ.ಬಿ.ಕ್ರಾಸ್‌ಗೆ ಆಗಮಿಸಿದ ಮಾಧುಸ್ವಾಮಿ ಬೆಂಬಲಿಗರು, ಜೆ.ಸಿ.ಮಾಧುಸ್ವಾಮಿಗೆ ಲೋಕಸಭೆ ಟಿಕೆಟ್‌ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ವಿ.ಸೋಮಣ್ಣ ತುಮಕೂರು ಸಿದ್ಧಗಂಗೆ ಮಠದ ಭಕ್ತರಾದ ಕೂಡಲೇ ಜಿಲ್ಲೆಗೆ ಅವರ ಕೊಡಗೆ ಏನೇನೂ ಇಲ್ಲ. ಅವರಿಗೆ ಟಿಕೆಟ್‌ ನೀಡಿದರೆ ಬಿಜೆಪಿ ಸೋಲು ಖಚಿತ. ಬೇರೆ ಜಿಲ್ಲೆಯಿಂದ ಬಂದ ಅಭ್ಯರ್ಥಿಗಳು ಗೆದ್ದ ಇತಿಹಾಸವಿಲ್ಲ ಎಂದು ಆರೋಪಿಸಿದರು.

ಪೆಟ್ರೋಲ್‌ ಸುರಿದುಕೊಳ್ಳಲು ಯತ್ನ
ಪ್ರತಿಭಟನೆ ವೇಳೆ ಅಭಿಮಾನಿಯೊಬ್ಬ ಜೆ.ಸಿ. ಮಾಧುಸ್ವಾಮಿಗೇ ಟಿಕೆಟ್‌ ನೀಡಬೇಕೆಂದು ಆಗ್ರಹಿಸಿ, ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದು, ಸ್ಥಳದಲ್ಲಿದ್ದ ಪೊಲೀಸರು ಆತನನ್ನು ತಡೆದರು.

Advertisement

Udayavani is now on Telegram. Click here to join our channel and stay updated with the latest news.

Next