ದಾವಣಗೆರೆ: ಮಾಜಿ ಸಿಎಂ ಯಡಿಯೂರಪ್ಪ ಅವರು 40 ವರ್ಷಕ್ಕೂ ಹೆಚ್ಚು ಕಾಲ ರಾಜ್ಯದಲ್ಲಿ ಸುತ್ತಾಡಿ ಬಿಜೆಪಿಯನ್ನು ಕಟ್ಟಿ ಬೆಳೆಸಿದಂತೆಯೇ ನಾನೂ ಸಹ ರಾಜ್ಯದಲ್ಲಿ ಓಡಾಡಿ ಪಕ್ಷವನ್ನು ಕಟ್ಟುತ್ತೇನೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ನಗರದಲ್ಲಿ ಶನಿವಾರ ನಡೆದ ಬಿಜೆಪಿ ಯುವ ಸಮಾವೇಶದಲ್ಲಿ ಮಾತನಾಡಿ, ಯಾವುದೇ ಕ್ಷೇತ್ರದಲ್ಲೂ ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಯಾವುದೇ ಪಕ್ಷ ನಮಗೆ ಮಿತ್ರರಲ್ಲ. ಸರ್ಕಾರದ ಸಾಧನೆ ತಿಳಿಸಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಮೂಲಕ ಸುವರ್ಣ ಕ್ಷಣಕ್ಕೆ ಮುಂದಾಗಬೇಕು ಎಂದರು.
ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ವಿದಾಯ ಭಾಷಣದ ಸಂದರ್ಭ ವಿಪಕ್ಷಗಳಿಗೆ ಹಾಕಿರುವ ಸವಾಲಿನ ಪರಿಣಾಮ ಏನಾಗಲಿದೆ ಎಂದು ಸ್ವತಃ ಅವರಿಗೂ ಗೊತ್ತು. ಯಡಿಯೂರಪ್ಪ ಅವರು ಸವಾಲು ಹಾಕಿದಂತೆ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್‌ನವರು ಈಗ ನಾವೂ ಕೂಡಾ ಹಿಂದೂಗಳು ಎಂದು ಹೇಳುತ್ತಾರೆ. ಮತ್ತೆ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಆಗಬೇಕು ಎಂಬ ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರವಧಿಯಲ್ಲಿ ಹಿಂದೂಗಳ ಹತ್ಯೆಗಳು ನಡೆದವು. ಲಿಂಗಾಯತ ಧರ್ಮಒಡೆಯುವ ಕೆಲಸ ಮಾಡಿದ ಕಾಂಗ್ರೆಸ್‌ನವರು ಈಗ ಲಿಂಗಾಯತ ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ದಲಿತ ಸಮುದಾಯದ ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಿದಾಗ ಅಲ್ಪಸಂಖ್ಯಾತ ಮತ ತಪ್ಪುವ ಭಯದಿಂದ ಖಂಡಿಸುವ ಕೆಲಸ ಮಾಡಲಿಲ್ಲ. ಡಾ| ಜಿ. ಪರಮೇಶ್ವರ ಮುಖ್ಯಮಂತ್ರಿ ಆಗುತ್ತಾರೆ ಎಂದು ಅವರನ್ನು ಸೋಲಿಸಿದರು ಎಂದು ಟೀಕಿಸಿದರು.
ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಅಲ್ಲ. ಆದರೆ ಯಾರು ಇಲ್ಲಿಯೇ ಹುಟ್ಟಿ, ಇಲ್ಲಿನ ಗಾಳಿ, ನೀರು, ಅನ್ನ ತಿಂದು ಪಾಕಿಸ್ತಾನ ಜಿಂದಾಬಾದ್ ಎನ್ನುವ ಯಾವುದೇ ಕೋಮಿನವರೇ ಆಗಿರಲಿ ಅಂತಹವರನ್ನು ಕ್ಷಮಿಸುವ ಮಾತೇ ಇಲ್ಲ ಎಂದು ವಿಜಯೇಂದ್ರ ಹೇಳಿದರು.