ಕನ್ನಡದಲ್ಲಿ ಈಗಾಗಲೇ ಬುದ್ಧಿಮಾಂದ್ಯ ಮಕ್ಕಳ ಕುರಿತು ಸಿನಿಮಾಗಳು ಬಂದಿವೆ. ಆ ಸಾಲಿಗೆ ಸೇರಿರುವ ಇಲ್ಲೊಂದು ಚಿತ್ರ ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ಹನ್ನೊಂದು ಫಿಲ್ಮ್ಫೆಸ್ಟಿವಲ್‌ನಲ್ಲಿ ಭಾಗವಹಿಸಿ, ಆ ಪೈಕಿ ಐದು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದರೆ, ಆರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಆಯ್ಕೆಯಾಗಿ, ಮೆಚ್ಚುಗೆಗೆ ಪಾತ್ರವಾಗಿದೆ. ಅಂದಹಾಗೆ, ಆ ಚಿತ್ರದ ಹೆಸರು “ಜ್ಞಾನಂ’. ವರದರಾಜ್ ವೆಂಕಟಸ್ವಾಮಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರ ಮುಗಿದಿದ್ದು, ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ.
ಇಂಡಿ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬೆಸ್ಟ್ ಫ್ಯೂಚರ್ ಫಿಲ್ಮ್ ಅವಾರ್ಡ್ ಸಿಕ್ಕಿದೆ. ಕೆನೆಡಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬೆಸ್ಟ್ ಫಿಲ್ಮ್ ಅವಾರ್ಡ್, ಕೊಲ್ಕತ್ತಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲೂ ಬೆಸ್ಟ್ ಪ್ಯೂಚರ್ ಫಿಲ್ಮ್ ಕೆಟಗರಿಯಲ್ಲಿ ಬೆಸ್ಟ್ ಅಚೀವ್‌ಮೆಂಟ್ ಅವಾರ್ಡ್ ಪಡೆದಿದೆ. ಉಳಿದಂತೆ ನೊಯಿಡಾ, ದಾದಾ ಸಾಹೇಬ್ ಫಾಲ್ಕೆ ಫೌಂಡೇಷನ್ ಫಿಲ್ಮ್ ಫೆಸ್ಟಿವಲ್ ಸೇರಿದಂತೆ ಐದು ಫಿಲ್ಮ್ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ಗಳಿಸಿ, ಆರು ಫಿಲ್ಮ್ಫೆಸ್ಟಿವಲ್‌ನಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಕಥೆ ಬಗ್ಗೆ ಹೇಳುವ ನಿರ್ದೇಶಕ ವರದರಾಜ್ ವೆಂಕಟಸ್ವಾಮಿ, “ಒಂದೇ ದಿನ ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬ ಬುದ್ದಿವಂತ. ಮತ್ತೂಬ್ಬ ಬುದ್ದಿಮಾಂದ್ಯ. ಇಂತಹ ಖಾಯಿಲೆಗೆ ತುತ್ತಾಗಿರುವ ಮಕ್ಕಳ ಯೋಚನೆ, ಆಲೋಚನೆಗಳು, ಅವರ ಪ್ರಪಂಚ, ಶಕ್ತಿ ಹೇಗಿದೆ ಅನ್ನುವುದನ್ನು ತೋರಿಸುವ ಪ್ರಯತ್ನವಿದು. ಇಂತಹ ಗುಣವಿರುವ ಪಾತ್ರದಲ್ಲಿ ಮಾಸ್ಟರ್ ಧ್ಯಾನ್. ಇದೇ ರೀತಿ ಮಕ್ಕಳು ಇರುವ ಸ್ಥಳಕ್ಕೆ ಭೇಟಿ ನೀಡಿ ಅವರ ಚಲನವಲನಗಳನ್ನು ಕಂಡು ನಟಿಸಿದ್ದಾನೆ. ಇನ್ನು, ಬುದ್ಧಿವಂತ ಹುಡುಗನಾಗಿ ಲೋಹಿತ್ ನಟಿಸಿದ್ದಾನೆ. ಇನ್ನು, ಮೂರು ಕಥೆಗಳು ಇಲ್ಲಿ ಸಾಗಲಿದ್ದು, ಇಬ್ಬರು ಹುಡುಗರದು ಒಂದೊಂದು ಟ್ರಾಕ್‌ನ ಕಥೆಯಾದರೆ, ಶೈಲಶ್ರೀ ಹಾಗೂ ಪ್ರಣವ್ ಮೂರ್ತಿ ಅವರ ಜೋಡಿಯ ಕಥೆ ಇನ್ನೊಂದು ಟ್ರಾಕ್‌ನಲ್ಲಿ ಸಾಗುತ್ತದೆ. ಈ ಮೂರು ಕಥೆಯಲ್ಲೂ ಎಮೋಷನ್ಸ್, ಬಾಂಧವ್ಯ ಇತ್ಯಾದಿ ಇದೆ’ ಎಂದು ವಿವರ ಕೊಡುತ್ತಾರೆ.
ಚಿತ್ರದಲ್ಲಿ ಸಿ.ವೇಣು ಭಾರದ್ವಾಜ್, ರಾಧಿಕಾ ಶೆಟ್ಟಿ, ಸಂತೋಷ್, ಜ್ಯೋತಿ ಮುರೂರು, ನವ್ಯಾ, ಕುಶಾಲ್ ನಾರಾಯಣ್ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ರೋಹಿತ್ ಸೋವರ್ ಸಂಗೀತವಿದೆ. ಸಿ.ವೇಣು ಭಾರದ್ವಾಜ್ ಮತ್ತು ಸಿ.ರಾಜ್‌ಭಾರದ್ವಾಜ್ ನಿರ್ಮಾಣ ಮಾಡಿರುವ “ಜ್ಞಾನಂ’ ಚಿತ್ರಕ್ಕೆ ಸಂತೋಷ್ ದಯಾಳನ್ ಛಾಯಾಗ್ರಹಣವಿದೆ.