ಮಡಿಕೇರಿ: ಮಡಿಕೇರಿ ತಾಲೂಕು ಕಕ್ಕಬ್ಬೆ ಗ್ರಾ.ಪಂ ವ್ಯಾಪ್ತಿಯ ಮರಂದೋಡು ಗ್ರಾಮದ ಕೆರೆತಟ್ಟು ಕಾಲೋನಿಯ ನಿವಾಸಿಗಳ ಮೂಲಭೂತ ಸಮಸ್ಯೆಗಳ ಬಗ್ಗೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನ ಸೆಳೆದ ಪರಿಣಾಮ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಬೇಕೆಂದು ಕೊಡಗು ಪ್ರಜಾ ಪರಿವರ್ತನಾ ವೇದಿಕೆ ಒತ್ತಾಯಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಎಸ್.ಮುತ್ತಪ್ಪ ಅವರು ಬಡ ವರ್ಗದ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿ ಅಗತ್ಯ ಕ್ರಮಕ್ಕೆ ಆದೇಶ ಮಾಡಿರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕ್ರಮ ಸ್ವಾಗತಾರ್ಹವೆಂದು ತಿಳಿಸಿದ್ದಾರೆ.
ಕುಡಿಯುವ ನೀರಿನ ವ್ಯವಸ್ಥೆ, ಅಂಗನವಾಡಿ ಕೇಂದ್ರ, ವಿದ್ಯುತ್ ಸಂಪರ್ಕ, ಕಾಡಾನೆ ಹಾವಳಿ ತಡೆ, ಕಾಲೋನಿಗೆ ಹೋಗುವ ರಸ್ತೆ ಅಭಿವೃದ್ಧಿ, ಅಂಬೇಡ್ಕರ್ ಭವನ ನಿರ್ಮಾಣ, ಸಂಚಾರಿ ನ್ಯಾಯಬೆಲೆ ಅಂಗಡಿ ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿ.ಪಂ ಗೆ ಸಲ್ಲಿಸಲಾಗಿತ್ತು.
ಇದಕ್ಕೆ ಸಕಾಲದಲ್ಲಿ ಸ್ಪಂದಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷಿ¾àಪ್ರಿಯ ಅವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳೊಂದಿಗೆ ಮುಕ್ತವಾಗಿ ಚರ್ಚಿಸಿದ್ದಾರೆ. ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಯರನ್ನು ನೇಮಕ ಮಾಡುವುದರೊಂದಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿರುವ ಹೆಚ್.ಎಸ್.ಮುತ್ತಪ್ಪ, ಹಿರಿಯ ಅಧಿಕಾರಿಗಳು ನೀಡಿರುವ ಆದೇಶವನ್ನು ಇತರ ಅಧಿಕಾರಿಗಳು ಶೀಘ್ರ ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿದ್ದಾರೆ.
ಕಕ್ಕಬ್ಬೆ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಪ್ರಜಾ ಪರಿವರ್ತನ ವೇದಿಕೆಯ ಮಡಿಕೇರಿ ತಾಲೂಕು ಅಧ್ಯಕ್ಷರಾದ ಸಿ.ಕೆ. ರಮೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೊನ್ನಪ್ಪ, ಎ.ಎ.ಬಾಲಕೃಷ್ಣ, ವಿರಾಜಪೇಟೆ ತಾಲೂಕು ಅಧ್ಯಕ್ಷ ಎ.ಎ.ಪವನ್ ಉಪಸ್ಥಿತರಿದ್ದರು.