Advertisement

ಮಣ್ಣಿನ ಬಣ್ಣಕ್ಕೆ ತಿರುಗಿದ ಹೊಳೆ ನೀರು: ಆತಂಕ

10:42 PM May 14, 2019 | Team Udayavani |

ಅರಂತೋಡು: ಜೀವ ನದಿ ಎಂದೇ ಕರೆಸಿಕೊಳ್ಳುವ ಪಯಸ್ವಿನಿ ನದಿಯ ನೀರು ಮಣ್ಣಿನ ಬಣ್ಣಕ್ಕೆ ತಿರುಗಿದ್ದು ಇದು ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ಆಗಸ್ಟ್‌ ತಿಂಗಳಲ್ಲಿ ಕೊಡಗಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಿಂದ ಈ ತನಕ ಪಯಸ್ವಿನಿ ಹೊಳೆಯಲ್ಲಿ ನೀರಿನ ನಿಜ ಬಣ್ಣ ಕಾಣಲು ಸಾಧ್ಯವಾಗಿಲ್ಲ. ಹೊಳೆ ಬದಿಯಲ್ಲಿ ಕೆಲವು ಜನರು ಇದೇ ಹೊಳೆಯ ನೀರನ್ನು ಉಪಯೋಗಿಸುತ್ತಿದ್ದಾರೆ.

Advertisement

ಕೆಲವು ದಿನಗಳ ಹಿಂದೆ ಕೊಡಗು ಹಾಗೂ ದ.ಕ. ಜಿಲ್ಲೆಯ ಗಡಿ ಭಾಗದಲ್ಲಿ ಕೆಲವೆಡೆ ಒಂದು ದಿನ ಧಾರಾಕಾರ ಮಳೆ ಸುರಿದಿದೆ. ಈ ಮಳೆಯ ಅನಂತರ ಪಯಸ್ವಿನಿ ಹೊಳೆಯ ನೀರು ಇನ್ನೂ ಮಂದವಾಗಿ ಮಣ್ಣಿನ ಬಣ್ಣಕ್ಕೆ ತಿರುಗಿದೆ. ಕೊಡಗಿನಲ್ಲಿ ಸಂಭವಿಸಿದ ಜಳಪ್ರಳಯದ ಪರಿಣಾಮವೇ ಈ ಬಣ್ಣ ತಿರುಗುವಿಕೆಗೆ ಕಾರಣವಾಗಿದೆ. ಹೊಳೆಯ ಗುಂಡಿಗಳಲ್ಲಿ ಕೆಸರು ಮಣ್ಣು ತುಂಬಿಕೊಂಡಿವೆ ಎಂದು ಹೊಳೆಯ ಬದಿಯ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೊಳೆಯ ಗುಂಡಿಯಲ್ಲಿ ನೀರು ಶೇಖರಣೆಗೊಂಡ ಪರಿಣಾಮ ಈ ವರ್ಷವು ಹೊಳೆಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ಇದರಿಂದ ಈ ವರ್ಷ ಕೃಷಿ ಬೆಳೆಗಳಿಗೆ ಸಾಕಷ್ಟು ನೀರಿಲ್ಲದೆ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು ಕೃಷಿ ಸೊರಗಿದೆ. ಅಡಿಕೆ ಮರದ ಸೋಗೆಗಳು ಬಾಡಿ ಹೋಗಿವೆ. ತೆಂಗಿನ ಮರದ ಮಡಲು ಒಣಗಿ ನಿಂತಿವೆ. ಒಟ್ಟಾರೆಯಾಗಿ ನೀರಿಗೆ ಬರ ಎದುರಾಗಿದೆ. ಇದೀಗ ಅಲ್ಪ ಸ್ವಲ್ಪ ಮಳೆ ಬಂದ ಪರಿಣಾಮದಿಂದ ರೈತರು ಒಂದಷ್ಟು ನಿಟ್ಟುಸಿರು ಬಿಡುವಂತಾಗಿದೆ.

ಭವಿಷ್ಯದ ಚಿಂತೆ
ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಜಲ ಸ್ಫೋಟದ ಪರಿಣಾಮವನ್ನು ಗಡಿಭಾಗದ ಜನರು ಅನು ಭವಿಸುಂತಾಗಿದೆ. ಕೊಡಗಿನಲ್ಲಿ ಈ ವರ್ಷ ಮಳೆಗಾಲದಲ್ಲಿ ಭೂಕುಸಿತ ಸಂಭವಿಸುವ ಮುನ್ಸೂಚನೆಯನ್ನು ವಿಜ್ಞಾನಿಗಳು ನೀಡಿದ್ದಾರೆ.

ಚಿಂತೆ ಕಾಡುತ್ತಿದೆ
ಹೊಳೆ ನೀರು ಮಣ್ಣಿನ ಬಣ್ಣಕ್ಕೆ ತಿರುಗಿದೆ. ಈ ವರ್ಷ ಪಯಸ್ವಿನಿ ಹೊಳೆಯ ನೀರು ಮಣ್ಣಿನ ಬಣ್ಣಕ್ಕೆ ಬದಲಾವಣೆಯಾಗಿರುವುದು ಅಪರೂಪವಾಗಿದೆ. ಹೊಳೆಯಲ್ಲಿ ನೀರಿನ ಪ್ರಮಾಣ ತುಂಬಾ ಕುಸಿದಿದೆ. ಕೃಷಿಗೂ ಸಾಕಷ್ಟು ದೊರೆಯದೆ ಸಮಸ್ಯೆಯಾಗಿದೆ. ಭವಿಷ್ಯದಲ್ಲಿ ರೈತರ ಜೀವನ ಯಾವ ಹಂತಕ್ಕೆ ಹೋಗಬಹುದೆಂಬ ಚಿಂತೆ ಕಾಡುತ್ತಿದೆ.
-ಪುರುಷೋತ್ತಮ, ಸ್ಥಳೀಯ ರೈತರು

Advertisement

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next