Advertisement

ಹಂಪೆಯ ಕಂಪು !

02:53 PM Dec 20, 2018 | |

‘ಕಣ್ಣಿದ್ದರೆ ಕನಕಗಿರಿ, ಕಾಲಿದ್ದರೆ ಹಂಪಿ’ ಹೀಗೊಂದು ನಾಣ್ಣುಡಿ ಇದೆಯಂತೆ! ಸ್ಮಾರಕಗಳ ಸಮೂಹವಾದ ಹಂಪೆಯನ್ನು ‘ಹಾಳು ಹಂಪೆ’ಎನ್ನುವ ರೂಢಿಯಿದೆ. ಅಂಥ ಸ್ಥಳಕ್ಕೊಂದು ಪ್ರವಾಸ ಹೋಗುವ ಯೋಜನೆ ರೂಪುಗೊಂಡಾಗ ನಿಜವಾಗಿಯೂ ಹೇಗಿದ್ದೀತು ಹಂಪೆ ಎನ್ನುವ ಆಲೋಚನೆ ಅಲ್ಲಿ ತಲುಪುವವರೆಗೂ ಇತ್ತು. ಆದರೆ ಮುಂಜಾವ ಹೊಸಪೇಟೆ ತಲುಪುವಾಗಲೇ ಹಂಪೆ ಕಣ್ಮನ ಸೆಳೆಯಲು ಆರಂಭಿಸಿತ್ತು!

Advertisement

ಹಿಂದಿನ ರಾತ್ರಿ ಸುಮಾರು 9.30- 10ರ ಸುಮಾರಿಗೆ ಐದು ಜನರ ನಮ್ಮ ತಂಡ ಕಾರಿನಲ್ಲಿ ಚಾರ್ಮಾಡಿ ಘಾಟ್‌ ಮೂಲಕ ಪ್ರಯಾಣ ಆರಂಭಿಸಿತ್ತು. ಅಣ್ಣಪ್ಪ ದೇವರಿಗೊಂದು ನಮಸ್ಕಾರ ಹಾಕಿ ಹೊರಟು, ಮೂಡಿಗೆರೆಯ ಬಳಿ ಕಾರು ನಿಲ್ಲಿಸಿ, ಮನೆಯಲ್ಲಿ ಅಮ್ಮ ಮಾಡಿ ಕೊಟ್ಟಿದ್ದ ಲಘು ಆಹಾರ (ಪುಂಡಿ/ ಕಡುಬು) ಸೇವಿಸಿ ಮತ್ತೆ ಪ್ರಯಾಣ. ಹಂಪೆಯಲ್ಲಿರುವ ನಮ್ಮ ಹಿರಿಯ ಮಿತ್ರರೊಬ್ಬರು ಕಳುಹಿಸಿದ್ದ ರೂಟ್‌ ಮ್ಯಾಪ್‌ ಸಹಾಯದಿಂದ ಚಿಕ್ಕಮಗಳೂರು, ಕಡೂರು, ಕೂಡ್ಲಿಗಿ ಮೂಲಕ ಹೊಸಪೇಟೆ ತಲುಪಿದೆವು. ಮುಂದೆ ನಮ್ಮ ಪ್ರಯಾಣ, ವಸತಿ, ಊಟದ ವ್ಯವಸ್ಥೆ ಅವರ ಜವಾಬ್ದಾರಿ ಆಗಿತ್ತು. 5.30ಕ್ಕೆ ರೂಂ ತಲುಪಿ, ನಿದ್ರೆ ಮಾಡಿದ್ದಾಯಿತು. ಮತ್ತೆ ಎದ್ದು ಉಳಿದಿದ್ದ ಪುಂಡಿಗೆ ಆಲೂಗೆಡ್ಡೆ ಸಾರು ಮಾಡಿ ತಿಂದೆವು. ಜೋಳದ ಖಡಕ್‌ ರೊಟ್ಟಿಯೂ ಇತ್ತು. ಬಳಿಕ ಆತಿಥೇಯರ ಮಿತ್ರರೊಬ್ಬರು ನಮ್ಮ ತಂಡ ಸೇರಿಕೊಂಡರು. 11ರ ಸುಮಾರಿಗೆ ಅಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಆರಂಭವಾಯಿತು.

ಅಂಜನಾದ್ರಿ ಬೆಟ್ಟ
ಕೊಪ್ಪಳ ಜಿಲ್ಲೆಯಲ್ಲಿರುವ ಅಂಜನಾದ್ರಿ ಭೌಗೋಳಿಕವಾಗಿ ಹಂಪೆಗೆ ತಾಗಿಕೊಂಡಿದೆ. ಅಂಜನಾದ್ರಿ ಬೆಟ್ಟದ ಮುಂಭಾಗ ಉಚಿತ ಪಾರ್ಕಿಂಗ್‌ಗೆ ಜಾಗವಿದೆ. ಕೆಳಗೆ ಕಾರಿನಿಂದ ಇಳಿದು ನೋಡಿ ದಾಗ ಈ ಬೆಟ್ಟಕ್ಕೆ ಆಕಾಶವೇ ಛಾವಣಿ ಎಂದೆನಿಸುತ್ತದೆ. ಇದು ಹಂಪಿಯ ಬಹು ಎತ್ತರದ 575 ಮೆಟ್ಟಿಲುಗಳ ಬೆಟ್ಟ. ಹನುಮಂತ ಇಲ್ಲೇ ಜನಿಸಿದ ಎನ್ನುವ ಪ್ರತೀತಿಯೂ ಇದೆ. ಹನುಮನ ಗುಡಿಯ ದಾರಿಯಲ್ಲಿ ಒಂದು ಕಡೆ ದುಡ್ಡು ಕೇಳುವ ಇಬ್ಬರು ತೃತೀಯ ಲಿಂಗಿಗಳು ಇಬ್ಬದಿಯಲ್ಲಿ ನಿಂತಿದ್ದರು. ಜತೆಗೆ ಮಂಗಗಳ ಹಿಂಡು. ಪೊಲೀಸ್‌ ಸಿಬಂದಿ ಓರ್ವರು ಗುಡಿಯ ಬಾಗಿಲಲ್ಲಿ ನಿಂತು ಭಕ್ತರನ್ನು ಒಳಗೆ ಬಿಡುತ್ತಾರೆ. ಗುಡಿಯ ಹಿಂಭಾಗ ಬಂಡೆಗಳ ಸಮೂಹವಿದ್ದು,ಸೂರ್ಯಾಸ್ತ ಸವಿಯಲು ಸೂಕ್ತ ಸ್ಥಳ. ಪ್ರಸಾದ ಭೋಜನದ ವ್ಯವಸ್ಥೆಯೂ ಇತ್ತಾದರೂ ಉದ್ದ ಸಾಲು ನೋಡಿ ಅಲ್ಲಿಂದ ನಿರ್ಗಮಿಸಿದೆವು.

ವಿಜಯ ವಿಟ್ಠಲ ದೇಗುಲ
ಬಳಿಕ ನಮ್ಮ ಪ್ರಯಾಣ ವಿಜಯ ವಿಟ್ಠಲ ದೇಗುಲಕ್ಕೆ. ಇಲ್ಲಿ ಹಲವು ಪುರಾತನ ಸ್ಮಾರಕಗಳನ್ನು ಕಣ್ತುಂಬಿಕೊಳ್ಳಬಹುದು. ವಿದ್ಯುತ್‌ ಬ್ಯಾಟರಿ ಚಾಲಿತ ವಾಹನಗಳು ಪ್ರಯಾಣಿಕರನ್ನು ಅಲ್ಲಿಗೆ ಸಾಗಿಸುತ್ತವೆ. ನಡೆದು ಹೋಗಲೂಬಹುದು. ಈ ವಾಹನಕ್ಕೆ 20 ರೂ. ಟಿಕೆಟ್‌ ಪಡೆ ದರೆ ಅಲ್ಲಿಂದ ವಾಪಸ್‌ ಬಿಡುವ ವ್ಯವಸ್ಥೆಯೂ ಇದೆ. ನಿಧಾನವಾಗಿ ಸಾಗುವ ಈ ವಾಹನದಲ್ಲಿ ಕುಳಿತು ನೇರವಾದ ದಾರಿಯ ಎರಡೂ ಬದಿಯಲ್ಲಿನ ಕಲ್ಲಿನ ಬೆಟ್ಟ, ಮಾನವ ನಿರ್ಮಿತ ಕಲ್ಲಿನ ನಿರ್ಮಿತಿಗಳನ್ನು ವೀಕ್ಷಿಸುತ್ತಾ ಹೋದರೆ ವಿಜಯ ವಿಟ್ಠಲ ದೇಗುಲದ ಮಹಾದ್ವಾರ ಸಿಗುತ್ತದೆ. ಅಲ್ಲೇ ಎದುರಿಗೆ ವಿಜಯವಿಟ್ಠಲನ ದೇಗುಲ. ಅದರ ಎದುರಿಗೆ ಕಲ್ಲಿನ ರಥ. ಕಲ್ಲಿನ ರಥವೆಂಬುದು ರಥದಂತಿದ್ದರೂ ಅದೂ ಒಂದು ದೇಗುಲವೇ ಆಗಿತ್ತು ಎನ್ನುತ್ತಾರೆ. ಇಲ್ಲಿ ಸಂಗೀತ ಮಂಟಪದಲ್ಲಿ ಸಪ್ತಸ್ವರ (ಮ್ಯೂಸಿಕಲ್‌ ಪಿಲ್ಲರ್ಸ್‌) ಗಳನ್ನು ಹೊರ ಹೊಮ್ಮಿಸುವ ಕಂಬಗಳನ್ನು ಕಾಣಬಹುದು. ಇದು ಸದ್ಯ ರಿಪೇರಿಯಲ್ಲಿದೆ. ಗರ್ಭಗುಡಿಗೆ ಸುತ್ತು ಹಾಕಲು ಒಳಾಂಗಣದಲ್ಲಿ ತಗ್ಗಿನಲ್ಲಿ ಮಾರ್ಗವಿದೆ. ಗರ್ಭಗುಡಿಯಿಂದ ಹೊರಬಂದಿರುವ ಅಭಿಷೇಕದ ನೀರು ಬರುವ ನಾಳವು ಸುಸ್ಥಿತಿಯಲ್ಲಿದೆ.

ವಿರೂಪಾಕ್ಷ ದೇವಸ್ಥಾನ
ಬಳಿಕ ನಾವು ಬಂದಿದ್ದು ವಿರೂಪಾಕ್ಷ ದೇಗುಲಕ್ಕೆ. ಇಲ್ಲಿ ಪೂಜೆ, ಪುನಸ್ಕಾರಗಳು ನೆರವೇರುತ್ತವೆ. ತುಂಗಭದ್ರಾ ನದಿಯ ತಟದಲ್ಲಿರುವ ದೇಗುಲದ ಒಂದು ಕಿಂಡಿಯಲ್ಲಿ ಮಹಾದ್ವಾರದ ನೆರಳು ತಲೆಕೆಳಗಾಗಿ ಕಾಣುತ್ತದೆ ಎಂಬ ನಂಬಿಕೆ ಇದ್ದು, ನಾವೂ ಇದನ್ನು ಕುತೂಹಲ, ಪರೀಕ್ಷಕ ದೃಷ್ಟಿಯಿಂದ ಗಮನಿಸಿದೆವು.

Advertisement

ರಾಜಾಂಗಣ
ವಿಜಯನಗರ ರಾಜಧಾನಿಯ ಕೇಂದ್ರ ಭಾಗದ ರಾಜಾಂಗಣ, ರಾಜನ ರಹಸ್ಯ ಸಭಾಗೃಹ, ಪುಷ್ಕರಣಿ, ಅದಕ್ಕೆ ನೀರುಣಿಸಲು ಕಲ್ಲಿನ ಪೈಪ್‌ ಲೈನ್‌, ಪ್ರಸಿದ್ಧವಾದ ಮಹಾ ನವಮಿ ದಿಬ್ಬಗಳು, ಕಡಲೆಕಾಯಿಯಂತೆ ಗೋಚರಿಸುವ 14 ಅಡಿ ಎತ್ತರದ ಕಡಲೆಕಾಳು ಗಣೇಶನ ವಿಗ್ರಹ, 4 ಬೃಹತ್‌ ಕೈಗಳುಳ್ಳ ಸಾಸಿವೆ ಕಾಳು ಆಕಾರವನ್ನು ಹೋಲುವ ಸಾಸಿವೆಕಾಳು ಗಣೇಶ ವಿಗ್ರಹವನ್ನು ನೋಡುವುದೇ ಚಂದ. ಸಂಜೆ ಹೊಟೇಲೊಂದರಲ್ಲಿ ಜೋಳದ ರೊಟ್ಟಿ, ಅನ್ನ ಊಟ ಮಾಡಿ, ಸಂಜೆಗೆ ಹಂಪೆ ಕನ್ನಡ ವಿಶ್ವವಿದ್ಯಾಲಯ ಕ್ಯಾಂಪಸ್‌ ನೋಡಲು ತೆರಳಿದೆವು. ಪ್ರಶಾಂತ ವಾತಾವರಣದ ಕ್ಯಾಂಪಸ್‌ನ ಮರಗಿಡ, ಕುರುಚಲು ಪೊದೆಗಳ ನಡುವೆ ಕಾಡುಗೋಳಿ ಜೋಡಿಗಳೂ ನಮಗೆ ಕಾಣಸಿಕ್ಕಿದ್ದು ಆಶ್ಚರ್ಯ ತಂದಿತು.

ಸುತ್ತಿದಷ್ಟೂ ಮುಗಿಯದ ಹಂಪೆಯಲ್ಲಿ ಇನ್ನಷ್ಟು ಸ್ಥಳಗಳು ನೋಡುವುದು ಬಾಕಿಯಾಯಿತು ಎಂಬ ಬೇಸರದೊಂದಿಗೆ ಹೊಟೇಲ್‌ ಶಾನುಭಾಗ್‌ನಲ್ಲಿ ಊಟ ಮುಗಿಸಿ ಸುಮಾರು 10 ಗಂಟೆಗೆ ಮರಳಿ ಊರಿನ ದಾರಿ ಹಿಡಿದೆವು. ಮರಳುವಾಗ ಶಿವಮೊಗ್ಗ ದಾರಿಯಲ್ಲಿ ಆರಾಮ ಎನಿಸುವ ಪ್ರಯಾಣ. ಹೆಚ್ಚು ಟ್ರಾಫಿಕ್‌ ಇಲ್ಲ ಎನಿಸಿತು. ಚಿಕ್ಕಮಗಳೂರಿನಲ್ಲಿ ಗಾಡಿ ನಿಲ್ಲಿಸಿ, ಸಣ್ಣ ನಿದ್ದೆ ಮಾಡಿ, ಉಜಿರೆ ತಲುಪುವಾಗ ಮುಂಜಾನೆ 7 ಗಂಟೆಯಾಗಿತ್ತು.

ಕಮಲಾಪುರದಲ್ಲಿ ರಾಣೀವಾಸದ ಅಧಿಷ್ಠಾನ ನೋಡಬಹುದು. ರಾಣಿಯ ಅರಮನೆಯ ಅಡಿಭಾಗ ಅಲ್ಲಿದ್ದು, ಮುಂದೆ ಪುಷ್ಕರಣಿಯಿದೆ. ಅಲ್ಲಿಯೇ ಸನಿಹದಲ್ಲಿ ನಮಗೆ ಕರುನಾಡಿನ ತಾಜ್‌ಮಹಲ್‌ ಎಂದೇ ಖ್ಯಾತಿ ಹೊಂದಿರುವ ಕಮಲ ಮಹಲ್‌ ಕಾಣಸಿಕ್ಕಿತು. ಪ್ರಕೃತಿಯ ಬಣ್ಣಕ್ಕೆ ಹೋಲುವ ವಿಶೇಷ ಶಕ್ತಿ ಈ ಮಹಲ್‌ನ ಗೋಡೆಗಳಿಗಿದ್ದು, ರಾಣಿ ವಿಹಾರ, ವಿಶ್ರಾಂತಿಗೆ ಇದನ್ನು ನಿರ್ಮಿಸಲಾಗಿತ್ತು ಎನ್ನಲಾಗುತ್ತದೆ. ಇಂಡೋ-ಇಸ್ಲಾಮಿಕ್‌ ಶೈಲಿಯನ್ನು ಹೋಲುವ ಭವ್ಯವಾದ ರಾಣಿಯ ಸ್ನಾನಗೃಹ, ಸುಮಾರು ಹನ್ನೊಂದು ಆನೆಗಳು ನಿಲ್ಲಬಹುದಾದ ಗಜಶಾಲೆಯನ್ನೂ ದರ್ಶಿಸಿದೆವು. ಅದರ ಸನಿಹದಲ್ಲೇ ಇದ್ದ ಎರಡು ಮ್ಯೂಸಿಯಂಗಳಿಗೆ ಹೋಗಿ ಸಾಕಷ್ಟು ಸ್ಥಳದ ಕುರಿತು ಮಾಹಿತಿ ತಿಳಿದು ಬಂದೆವು. 

ರೂಟ್‌ ಮ್ಯಾಪ್‌
·ಹಂಪಿಗೆ ಮಂಗಳೂರಿನಿಂದ ಇರುವ ದೂರ -404 ಕಿ.ಮೀ. (ಉಡುಪಿ- ಶಿವಮೊಗ್ಗ- ಹೊಸ ಪೇಟೆ, ಉಜಿರೆ- ಚಿಕ್ಕಮಗಳೂರು- ಹೊಸಪೇಟೆ, ಉಜಿರೆ- ದಾವಣಗೆರೆ- ಹೊಸ ಪೇಟೆ- ಹಂಪಿ, ಅಥವಾ ಉಜಿರೆ- ಕಳಸ- ಹೊಸಪೇಟೆ- ಹಂಪಿಗೆ ತೆರಳಬಹುದು) 
· ಮಾರ್ಗದರ್ಶಕರಿದ್ದರೆ ಉತ್ತಮ.
· ಮೊದಲೇ ವ್ಯವಸ್ಥೆ ಮಾಡಿದರೆ ಊಟ, ವಸತಿಗೆ ಸಮಸ್ಯೆಯಿಲ್ಲ.
· ಮೂರು ಸ್ಥಳಗಳಿಗೆ ಭೇಟಿ ನೀಡಲು 40 ರೂ. ಟಿಕೇಟ್‌ ವ್ಯವಸ್ಥೆಯೂ ಇದೆ.
· ಸ್ಥಳದಲ್ಲಿ ಸುತ್ತಾಡಲು ಬಾಡಿಗೆಗೆ ಸೈಕಲ್‌ ಗಳೂ ದೊರೆಯುತ್ತವೆ.

ಪ್ರಶಾಂತ್‌ ಪಾದೆ/ ಸಂದೇಶ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next