Advertisement

ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಹೊಣೆಯರಿತ ಕಾರ್ಪೊರೇಟ್‌ ನಾಗರಿಕರ ಅಗತ್ಯ: ಡಾ| ನರೇಂದ್ರ

12:32 AM Jan 20, 2024 | Team Udayavani |

ಮಣಿಪಾಲ: ಜಾಗತಿಕ ತಾಪಮಾನದಿಂದಾಗಿ ಮುಂದಿನ ಪೀಳಿಗೆ ಎದುರಿಸುವ ಅಪಾಯವನ್ನು ತಪ್ಪಿಸಲು ನಾವು ಜವಾಬ್ದಾರಿಯುತ ಕಾರ್ಪೊರೆಟ್‌ ನಾಗರಿಕರಾಗ ಬೇಕಿದೆ ಎಂದು ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನ ನಿವೃತ್ತ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಡಾ| ಎಂ. ನರೇಂದ್ರ ಹೇಳಿದ್ದಾರೆ.

Advertisement

ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಶುಕ್ರವಾರ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ (ಎಜಿಇ ), ಮಾಹೆ ವಿ.ವಿ., ಮಣಿಪಾಲ್‌ ಎಜುಕೇಶನ್‌ ಆ್ಯಂಡ್‌ ಮೆಡಿಕಲ್‌ ಗ್ರೂಪ್‌ ಇಂಡಿಯ ಪ್ರೈ.ಲಿ. (ಎಂಇಎಂಜಿ), ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. (ಎಂಎಂಎನ್‌ಎಲ್‌), ಡಾ| ಟಿಎಂಎ ಪೈ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಹೊಸ ವರ್ಷದ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

ಕೋವಿಡ್‌ 19 ಅನಂತರ ಆರಂಭಿಸಿದ ಎಂ ಕ್ಯೂಬ್‌ ಕೊಲಾಬರೇಶನ್‌ ಸಂಸ್ಥೆಯ ಮೂಲಕ ವೆಬಿನಾರ್‌, ಕಾರ್ಯಾಗಾರ, ಸಮಾವೇಶಗಳನ್ನು ನಡೆಸುತ್ತಿದ್ದೇನೆ. ಇದರಿಂದ ಪರಿಸರ, ಸಾಮಾಜಿಕ, ಆಡಳಿತ (ಇಎಸ್‌ಜಿ), ಹವಾಮಾನ ಬದಲಾವಣೆ, ಸುಸ್ಥಿರತೆ, ಸಮಾನತೆ ಮೊದಲಾದ ಹೊಸ ವಿಷಯಗಳತ್ತ ಗಮನಹರಿಸಿದೆ ಎಂದರು.
ಡಾ| ನರೇಂದ್ರ ಸಹಿತ ಚಲನಚಿತ್ರ ಕಲಾವಿದೆ ಡಾ| ಜಯಮಾಲಾ ರಾಮಚಂದ್ರ, ಮಣಿಪಾಲ ಕೆಎಂಸಿ ಮೆಡಿಸಿನ್‌ ವಿಭಾಗದ ಪ್ರಾಧ್ಯಾಪಕ ಡಾ| ಎಚ್‌. ಮಂಜುನಾಥ ಹಂದೆ, ಹಿರಿಯ ಕೃಷಿಕ ಬಿ.ಕೆ. ದೇವರಾವ್‌, ಮಂಗಳೂರು ಕೆಎಂಸಿ ನಿವೃತ್ತ ಡೀನ್‌ ಡಾ| ಎಡ್ಕತೋಡಿ ಸಂಜೀವ ರೈ ಅವರಿಗೆ ಹೊಸ ವರ್ಷದ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಭಾಷೆ, ಗಡಿ ಮೀರಿದ ಮಾನವ ಸೇವೆ
ಮಣಿಪಾಲ ಸಂಸ್ಥೆಗಳು ಭಾಷೆ, ನಾಡು, ಗಡಿಗಳನ್ನು ಮೀರಿ ಮಾನವ ಸೇವೆ ಮಾಡುತ್ತ ವಿಶ್ವ ಮಾನವತೆಯನ್ನು ಜಗತ್ತಿಗೆ ಸಾರುತ್ತಿವೆ ಎಂದು ಡಾ| ಜಯಮಾಲಾ ಮೆಚ್ಚುಗೆ ಸೂಚಿಸಿದರು. ಮಣಿಪಾಲದ ಈ ಪ್ರಶಸ್ತಿ ಅತ್ಯಂತ ಎತ್ತರದ ಪ್ರಶಸ್ತಿ. ಇದು ಹೃದಯಕ್ಕೆ ಹತ್ತಿರದ ಪ್ರಶಸ್ತಿ. ನನ್ನನ್ನು ಸಾಧಕಿ ಎಂದು ಗೌರವಿಸಿದ್ದೀರಿ. ಇದನ್ನು ಮನೆಯ ಮಗ ಳಂತೆ ಪ್ರೀತಿಯಿಂದ ಸ್ವೀಕರಿಸುತ್ತೇನೆ ಎಂದರು.

ತರಬೇತಿ ಪಡೆಯುವವರೇ ಆಗಿರಲಿ, ಪ್ರಾಕ್ಟಿಶ ನರ್‌ ಆಗಿರಲಿ ಎಲ್ಲ ವೈದ್ಯರು ವೃತ್ತಿಪರರು. ರೋಗಿ ಗಳ ಆರೈಕೆಯಲ್ಲಿ ವೈದ್ಯರಾದವರಿಗೆ ಸಂತೃಪ್ತಿ ಇರಬಾರದು. ನಮ್ಮ ಮೇಲೆ ವಿಶ್ವಾಸವಿರಿಸುವ ರೋಗಿಗಳನ್ನು ಗುಣಪಡಿಸುವಲ್ಲಿ ಗರಿಷ್ಠ ಹೊಣೆಗಾರಿಕೆ ಇರಬೇಕು. ರೋಗಿಗಳಲ್ಲಿ ಶಕ್ತಿ ತುಂಬುವುದನ್ನು ನಾವು ಪ್ರತಿ ನಿತ್ಯ ನೋಡುತ್ತೇವೆ. ಇದುವೇ ನಮ್ಮ ಸೇವೆಯನ್ನು ಉತ್ಕೃಷ್ಟಗೊಳಿಸಲು ಇರುವ ಕಲಿಕೆ ಮತ್ತು ಸ್ಫೂರ್ತಿ ಎಂದು ಡಾ| ಮಂಜುನಾಥ ಹಂದೆ ಹೇಳಿದರು.

Advertisement

ನೀರು ಮಾಡುವ ಬೆಳೆ ಭತ್ತ
ನೀರನ್ನು ಸಂರಕ್ಷಿಸುವ ಕ್ಷೇತ್ರ ಭತ್ತದ ಗದ್ದೆ. ಭತ್ತವು ನೀರನ್ನು ಮಾಡುವ ಬೆಳೆ. ಮೇಲಿಂದ ಬೀಳುವ ಮತ್ತು ನೀಡುವ ನೀರನ್ನು ಸಮರ್ಪಕವಾಗಿ ಹೀರಿ ಕೊಂಡು ಪ್ರಕೃತಿಗೆ ಒದಗಿಸುವ ಶ್ರೇಷ್ಠ ಕೆಲಸವನ್ನು ಭತ್ತದ ಕೃಷಿಯಲ್ಲಿ ಕಾಣಬಹುದು. ವಾಣಿಜ್ಯ ಬೆಳೆ ಹಣ ಒದಗಿಸಬಹುದು. ಆದರೆ ಆರೋಗ್ಯಕ್ಕಾಗಿ ಅನ್ನ ಬೇಕೇ ಬೇಕು ಎಂದರಿತು ಒಂದಿಷ್ಟು ಜಾಗವನ್ನು ಭತ್ತಕ್ಕೆ ಮೀಸಲಿಟ್ಟೆ. ಹಲವು ಭತ್ತದ ಅಪರೂಪದ ತಳಿಗಳನ್ನು ಸಂಗ್ರಹಿಸಿದ್ದೇನೆ. ಭತ್ತವನ್ನು ಬೆಳೆಸುವುದೇ ನನಗೆ ಕೊಡುವ ದೊಡ್ಡ ಪ್ರಶಸ್ತಿ ಎಂದು ದೇವರಾವ್‌ ಹೇಳಿದರು.

ಡಾ| ಎಡ್ಕತೋಡಿ ಸಂಜೀವ ರೈಯವರು ಮಾತನಾಡಿ, ಜಾಗತಿಕ ಆರೋಗ್ಯ ರಕ್ಷಣೆಯ ಭೂದೃಶ್ಯದಲ್ಲಿ ಸಹಯೋಗದ ಮಹತ್ವವನ್ನು ಎತ್ತಿ ತೋರಿಸುತ್ತದೆ. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಸುಧಾರಣೆಗಾಗಿ ಗಡಿ ಮೀರಿದ ಪಾಲುದಾರಿಕೆ ಬೆಳೆಸುವುದನ್ನು ಮುಂದುವರಿಸಲು ನಾನು ಸ್ಫೂರ್ತಿ ಪಡೆದಿದ್ದೇನೆ ಎಂದರು.

ಎಂಇಎಂಜಿ ಅಧ್ಯಕ್ಷ ಡಾ|ರಂಜನ್‌ ಆರ್‌. ಪೈ, ಎಂಎಂಎನ್‌ಎಲ್‌ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್‌ ಯು. ಪೈ, ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್‌. ಪೈ, ಡಾ|ಟಿಎಂಎ ಪೈ ಪ್ರತಿಷ್ಠಾನದ ಅಧ್ಯಕ್ಷ ಟಿ.ಅಶೋಕ್‌ ಪೈ, ಎಜಿಇ ಅಧ್ಯಕ್ಷ, ಮಾಹೆ ಸಹಕುಲಾಧಿಪತಿ ಡಾ|ಎಚ್‌.ಎಸ್‌.ಬಲ್ಲಾಳ್‌, ಕುಲಪತಿ ಲೆ|ಜ|ಡಾ|ಎಂ.ಡಿ.ವೆಂಕಟೇಶ್‌ ಪ್ರಶಸ್ತಿ ಪ್ರದಾನ ಮಾಡಿದರು. ಡಾ|ಎಚ್‌.ಎಸ್‌.ಬಲ್ಲಾಳ್‌ ಸ್ವಾಗತಿಸಿದರು. ಶ್ರುತಿ ಶೆಟ್ಟಿ ನಿರ್ವಹಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next