ಕೇಪ್ ಟೌನ್: ದಕ್ಷಿಣ ಆಫ್ರಿಕದ ಪ್ರಿಟೋರಿಯಾ ನಗರದಲ್ಲಿನ ಭಾರತೀಯ ಮೂಲದ ಇಬ್ಬರು ಯುವ ಸಾಧಕಿಯರಿಗೆ ಜಾಗತಿಕ ಗೌರವ ಲಭಿಸಿದೆ. ಸೌಂದರ್ಯೋತ್ಪನ್ನ ಉದ್ಯಮಿ, 21 ವರ್ಷದ ರಬಿಯಾ ಘೂರ್ ಅವರು ಫೋರ್ಬ್ ನ “ಯುವ ಸಾಧಕಿ ಪ್ರಶಸ್ತಿ-2021′ ಗೌರವಕ್ಕೆ ಪಾತ್ರರಾಗಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಈ ಗೌರವ ನೀಡಲಾಗಿದೆ.
ಇದೇ ವೇಳೆ, 30 ವರ್ಷದ ವಾಸ್ತುಶಿಲ್ಪಿ ಸುಮಯ್ಯ ವ್ಯಾಲಿ ಅವರು “ಟೈಮ್ಸ್’ ಮ್ಯಾಗಜಿನ್ ಪ್ರಕಟಿಸಿರುವ “ಭವಿಷ್ಯ ರೂಪಿಸುತ್ತಿರುವ 100 ನಾಯಕರು’ ಎಂಬ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಲಂಡನ್ನಿನ ಸರ್ಪೆಟೈನ್ ಗ್ಯಾಲರಿಯ ಪೆವಿಲಿಯನ್ ವಿನ್ಯಾಸ ಮಾಡಿದ ಖ್ಯಾತಿ ಸುಮಯ್ಯ ಅವರಿಗಿದೆ. ಶುಕ್ರವಾರ ನಡೆದ ಫೋರ್ಬ್ ನ ವರ್ಚುವಲ್ ಸಭೆಯಲ್ಲಿ, ದಕ್ಷಿಣ ಆಫ್ರಿಕಾ ಖಂಡದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಕಾರಣರಾದ ಯುವ ಉದ್ಯಮಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ತಮಗೆ ಸಂದ ಗೌರವದ ಬಗ್ಗೆ ಮಾತನಾಡಿರುವ ಗೂರ್, “”ಚಿಕ್ಕವಯಸ್ಸಿನಿಂದಲೂ ನಾನೇ ಸ್ವಂತವಾಗಿ ಪ್ರಸಾದನ ಉತ್ಪನ್ನಗಳ ಬಗ್ಗೆ ಸಂಶೋಧನೆ ನಡೆಸಿ, ಹೊಸ ಉತ್ಪನ್ನಗಳ ತಯಾರಿಕೆ, ಅವುಗಳನ್ನು ಮಾರುಕಟ್ಟೆ ಮಾಡುವ ರೀತಿ ಇತ್ಯಾದಿಗಳನ್ನು ಕರಗತ ಮಾಡಿಕೊಂಡಿದ್ದೆ. ನನ್ನ ಶ್ರಮಕ್ಕೆ ಈಗ ಫಲ ಸಿಕ್ಕಿದೆ” ಎಂದು ತಿಳಿಸಿದ್ದಾರೆ.