ಉಡುಪಿ: ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯವು ದೇಶದ ಶ್ರೇಷ್ಠ ಖಾಸಗಿ ವಿ.ವಿ.ಯಾಗಿ ಹೊರಹೊಮ್ಮಿದೆ. ಕ್ವಾಕರಲಿ ಸೈಮಂಡ್ಸ್ (ಕ್ಯೂಎಸ್) ವರ್ಲ್ಡ್ ಯುನಿವರ್ಸಿಟಿ ರ್‍ಯಾಂಕಿಂಗ್ 2020ಯಲ್ಲಿ ಮಾಹೆಯು 701-750 ಶ್ರೇಣಿಯ ಸ್ತರಕ್ಕೇರಿದೆ. ಕಳೆದ ವರ್ಷ ಅದು 750-800ರ ಸ್ತರದಲ್ಲಿತ್ತು. 82 ದೇಶಗಳ 1,620 ವಿವಿಗಳಲ್ಲಿ 1,000 ವಿ.ವಿ.ಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಮಾಹೆಯ ಸಾಧನೆಗಳು ಶ್ರೇಷ್ಠ ಶೇ.66 ಅಂಕದ ರ್‍ಯಾಂಕಿಂಗ್ ಪಡೆದಿವೆ.
1,000 ವಿವಿಗಳನ್ನು ಮೌಲ್ಯಮಾಪನ ಮಾಡುವ ಮುನ್ನ ಕ್ಯೂಎಸ್ ಸಂಸ್ಥೆಯು 9.3 ಕೋಟಿ ಫಲಕಗಳು, 1.3 ಕೋಟಿ ಪ್ರಬಂಧಗಳು, ಮುಖ್ಯಸ್ಥರ 45,000 ಸಮೀಕ್ಷಾ ಪ್ರತಿಕ್ರಿಯೆಗಳು, 94,000 ಶೈಕ್ಷಣಿಕ ಪ್ರತಿಕ್ರಿಯೆಗಳನ್ನು ಪಡೆದಿತ್ತು.
ವಿವಿಗಳನ್ನು 6 ಮಾನದಂಡದಲ್ಲಿ ಮೌಲ್ಯಮಾಪನ ಗೊಳಿಸಲಾಗಿತ್ತು. ಮೊದಲ ನಾಲ್ಕು ಮಾನದಂಡಗಳು ಅಂಕಿ-ಅಂಶಗಳ ಆಧಾರದಲ್ಲಿ, ಉಳಿದೆರಡು ಜಾಗತಿಕ ಸಮೀಕ್ಷೆ ಆಧಾರದಲ್ಲಿ ಮೌಲ್ಯ ಮಾಪನಕ್ಕೆ ಒಳಪಟ್ಟಿವೆ.
ವಿಷಯವಾರು ಕ್ಯೂಎಸ್ ರ್‍ಯಾಂಕಿಂಗ್ ಅನ್ನು ವರ್ಷದ ಆರಂಭದಲ್ಲಿ ಘೋಷಿಸ ಲಾಗಿತ್ತು. ಇದರ ಪ್ರಕಾರ ಮಣಿಪಾಲ ಫಾರ್ಮಸ್ಯೂಟಿಕಲ್ ಸೈನ್ಸಸ್ ಕಾಲೇಜು ಫಾರ್ಮಸಿ ಮತ್ತು ಫಾರ್ಮಕೋಲಜಿ ವಿಭಾಗದಲ್ಲಿ 201-250 ಶ್ರೇಣಿಯ ರ್‍ಯಾಂಕ್ ಪಡೆದುಕೊಂಡಿತ್ತು. ಮಣಿಪಾಲ ಕೆಎಂಸಿ ಮೆಡಿಸಿನ್ ವಿಭಾಗದಲ್ಲಿ 351-400 ಶ್ರೇಣಿಯ ರ್‍ಯಾಂಕ್ ಪಡೆದುಕೊಂಡಿತ್ತು. ಹಿಂದಿನ ವರ್ಷಕ್ಕಿಂತ 50 ರ್‍ಯಾಂಕ್ ಸ್ಥಾನ ಸುಧಾರಣೆಯಾಗಿದೆ.
ನಾವು ಎಲ್ಲ ಮಾನದಂಡಗಳಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ ಮತ್ತು ಇದರ ಪರಿಣಾಮ ಕಾಣಿಸುತ್ತಿದೆ. ಮುಂದಿನ ವರ್ಷಗಳಲ್ಲಿ ಜಾಗತಿಕ ರ್‍ಯಾಂಕಿಂಗ್‌ನಲ್ಲಿ ಮತ್ತಷ್ಟು ದಾಪುಗಾಲು ಇರಿಸುತ್ತೇವೆ. ಭಾರತದ ಸಮೀಕ್ಷೆಯಲ್ಲಿಯೂ ಉತ್ತಮ ಸಾಧನೆ ಮಾಡುತ್ತೇವೆ ಎಂದು ಮಾಹೆ ಕುಲಪತಿ ಡಾ| ಎಚ್. ವಿನೋದ ಭಟ್ ಪ್ರತಿಕ್ರಿಯೆ ನೀಡಿದ್ದಾರೆ.
ಎನ್‌ಐಆರ್‌ಎಫ್ ರಾಷ್ಟ್ರೀಯ ರ್‍ಯಾಂಕಿಂಗ್‌ನಲ್ಲಿ ಮಾಹೆ 9ನೇ ಸ್ಥಾನದಲ್ಲಿದೆ ಮತ್ತು ದೇಶದ ಶ್ರೇಷ್ಠ 10 ವಿವಿಗಳಲ್ಲಿ ಒಂದಾಗಿ ಮೂಡಿಬಂದಿದೆ. ಹಲವು ರ್‍ಯಾಂಕಿಂಗ್ ಏಜೆನ್ಸಿಗಳ 2019ರ ಸಮೀಕ್ಷೆಯ ಪ್ರಕಾರ ಮಾಹೆ ದೇಶದ ಶ್ರೇಷ್ಠ ಖಾಸಗಿ ವಿ.ವಿ.ಯಾಗಿದೆ.
“ದಿ ವೀಕ್’ ಸಮೀಕ್ಷೆಯಲ್ಲಿ ಅದು ಸತತ ಐದನೆಯ ವರ್ಷ ಮತ್ತು ಎಜುಕೇಶನ್ ವರ್ಲ್ಡ್ ಪ್ರಕಾರ ಸತತ ನಾಲ್ಕನೆಯ ವರ್ಷ ದೇಶದ ಶ್ರೇಷ್ಠ ವಿ.ವಿ. ಸ್ಥಾನ ಪಡೆದಿದೆ.