ಲಂಡನ್: ನವೆಂಬರ್ 2ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಅಂತಾರಾಷ್ಟ್ರೀಯ ರೋಡ್ ಶೋ ಭಾಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ್ ಆರ್. ನಿರಾಣಿ ನೇತೃತ್ವದ ನಿಯೋಗ ಗುರುವಾರದಿಂದ ಯೂರೋಪ್ ಪ್ರವಾಸ ಕೈಗೊಂಡಿದೆ.
“ಅತ್ಯುತ್ತಮ ಕೈಗಾರಿಕಾ ಪರಿಸರ ವ್ಯವಸ್ಥೆ ಹೊಂದಿರುವ ಕರ್ನಾಟಕ, ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣ. ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳು ಹಾಗೂ ನಮ್ಮ ಕೈಗಾರಿಕಾ ನೀತಿ ಕುರಿತು ಯೂರೋಪ್ ಕಂಪನಿಗಳ ಮುಖ್ಯಸ್ಥರಿಗೆ ಮಾಹಿತಿ ನೀಡಲಾಗುವುದು. ಜತೆಗೆ, ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಂಭಾವ್ಯ ಹೂಡಿಕೆದಾರರನ್ನು ಆಹ್ವಾನಿಸಲಾಗುತ್ತದೆ” ಎಂದು ಸಚಿವ ನಿರಾಣಿ ಹೇಳಿದ್ದಾರೆ.
“7 ದಿನಗಳ ಯೂರೋಪ್ ಪ್ರವಾಸದ ವೇಳೆ ಪ್ಯಾರಿಸ್, ಡಸೆಲ್ಡಾರ್ಫ್ ಮತ್ತು ಫ್ರಾಂಕ್‌ಫರ್ಟ್, ಜರ್ಮನಿಯ ಪ್ರಮುಖ ಕಂಪನಿಗಳ ಮುಖ್ಯಸ್ಥರನ್ನು ನಿಯೋಗ ಭೇಟಿಯಾಗಲಿದೆ” ಎಂದರು
“ಯುರೋಪ್ ರೋಡ್‌ಶೋ ವೇಳೆ ನಿಯೋಗವು ಯುಕೆಐಬಿಸಿಯ ಪ್ರತಿನಿಧಿಗಳನ್ನು ಭೇಟಿ ಮಾಡಲಿದೆ. ಜತೆಗೆ, ರೋಲ್ಸ್ ರಾಯ್ಸ್, ಆಂಕೋರಾ, ಈಟನ್, ಹಿಂದೂಜಾ, ಷ್ನೇಡರ್ ಎಲೆಕ್ಟ್ರಿಕ್, ಡಸಾಲ್ಟ್ ಸಿಸ್ಟಮ್ಸ್, ಸೇಂಟ್ ಗೋಬೈನ್, ಇನ್ಫ್ರಾ ವೀಕ್ ಇಂಡಿಯಾ, ಥೇಲ್ಸ್, ಥೈಸೆನ್‌ಕ್ರುಪ್, ಹೆಂಕೆಲ್, ಬೇಯರ್ ಮತ್ತು ಮಿಟಲ್‌ಸ್ಟ್ಯಾಂಡ್ ಮುಂತಾದ ಕಂಪನಿಗಳ ಮುಖಸ್ಥರನ್ನು ಭೇಟಿ ಮಾಡಿ, ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಹಾಗೂ ವಿಸ್ತರಣೆಗೆ ಇರುವ ಅವಕಾಶಗಳನ್ನು ವಿವರಿಸಲಾಗುವುದು”ಎಂದು ತಿಳಿಸಿದರು.
ಸಚಿವ ನಿರಾಣಿ ನೇತೃತ್ವದ ನಿಯೋಗವು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಡಾ. ಇ.ವಿ ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ ಅವರನ್ನೊಳಗೊಂಡಿದೆ.