ಹೈದರಾಬಾದ್ : ನ.28ರಿಂದ 30ರ ತನಕ ಮೂರು ದಿನಗಳ ಕಾಲ ಇಲ್ಲಿನ ಎಚ್‌ಐಸಿಸಿ ಮತ್ತು ಹೈಟೆಕ್ಸ್‌ನಲ್ಲಿ ನಡೆಯಲಿರುವ ಜಾಗತಿಕ ಉದ್ಯಮಶೀಲತಾ ಶೃಂಗದಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಹಾಗೂ ಸಲಹೆಗಾರ್ತಿಯಾಗಿರುವ ಇವಾಂಕಾ ಟ್ರಂಪ್ ಇಲ್ಲಿನ ರಾಜೀವ್ ಗಾಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ನಸುಕಿನ ವೇಳೆ ಬಂದಿಳಿದರು.
ಶೃಂಗದ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಇದೀಗ ಹೈದರಾಬಾದ್‌ಗೆ ಬಂದಿದ್ದಾರೆ. ಇವಾಂಕಾ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಕೂಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಉದ್ಯೋಗದಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವ ಕುರಿತ ನಡೆಯಲಿರುವ ಚರ್ಚೆಯಲ್ಲಿ ಇವಾಂಕಾ ಪಾಲ್ಗೊಳುತ್ತಾರೆ.
ಎರಡನೇ ದಿನದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಕೌಶಲ ತರಬೇತಿ, ಶಿಕ್ಷಣ ಮತ್ತು ಮೆಂಟರ್‌ಶಿಪ್ ತರಬೇತಿಯನ್ನು ನೀಡಲಾಗುವುದು.
ಇವಾಂಕಾ ಅವರು ಶ್ವೇತ ಭವನದ ಹಿರಿಯ ಅಧಿಕಾರಿಗಳ ನಿಯೋಗವೊಂದನ್ನು ಈ ಶೃಂಗಕ್ಕೆ ತರುತ್ತಿರುವುದು ಗಮನಾರ್ಹವಾಗಿದೆ. ಶ್ವೇತ ಭವನ ಸಲಹೆಗಾರ್ತಿಯಾಗಿ ಇದು ಇವಾಂಕಾ ಅವರ ಮೊದಲ ಭಾರತ ಭೇಟಿಯಾಗಿದೆ.
ಉದ್ಘಾಟನಾ ಸಮಾರಂಭದ ಬಳಿಕ ಇವಾಂಕಾ ಮತ್ತು ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚರ್ಚಾ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.