ವಾಷಿಂಗ್ಟನ್: ಜಗತ್ತಿನೆಲ್ಲೆಡೆ ಆತಂಕ ಸೃಷ್ಟಿಸಿರುವ ಮತ್ತು ಮಾರಣಹೋಮಕ್ಕೆ ಕಾರಣವಾಗಿರುವ ಕೋವಿಡ್ 19 ವೈರಸ್ ಗೆ ಬುಧವಾರದ ವೇಳೆಗೆ 5 ಮಿಲಿಯನ್ ಜನರು ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿ ತಿಳಿಸಿದೆ.
ಈ ಸಾಂಕ್ರಮಿಕ ರೋಗ ವಿಶ್ವದೆಲ್ಲೆಡೆ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು, ಸುಮಾರು 3,25,000 ಜನರು ಮೃತಪಟ್ಟಿದ್ದು, ಮಿಲಿಯನ್ ಗಟ್ಟಲೇ ಜನರು ನಿರುದ್ಯೋಗಿಗಳಾಗಲು ಕಾರಣವಾಗಿದೆ. ದುರಂತವೆಂದರೇ ಕಳೆದ 24 ಗಂಟೆಗಳ ಅವಧಿಯಲ್ಲಿ ಜಗತ್ತಿನಲ್ಲಿ 1,06,000 ಲಕ್ಷ ಜನರು ವೈರಾಣು ಪೀಡಿತರಾಗಿದ್ದಾರೆ.
ಈ ಸೋಂಕು 1 ಮಿಲಿಯನ್ ಜನರಿಗೆ ಕೇವಲ 11 ದಿನದಲ್ಲಿ ಹರಡಿದ್ದು, ವೈರಸ್ ಅಟ್ಟಹಾಸಕ್ಕೆ ಅಕ್ಷರಶಃ ನಲುಗಿ ಹೋಗಿದ್ದ ಇಟಲಿ, ಸ್ಪೇನ್ ಮುಂತಾದ ಕಡೆ ನಿಧಾನವಾಗಿ ಲಾಕ್ ಡೌನ್ ಸಡಿಲಿಸಲಾಗಿದೆ. ಆದರೂ ಏರಡನೇ ಹಂತದ ಸೋಂಕು ಹರಡುವ ಸಾಧ್ಯತೆ ಕಂಡುಬರುತ್ತಿದೆ. ಜಗತ್ತಿನೆಲ್ಲೆಡೆ 50 ಲಕ್ಷ ಜನರು ಸೋಂಕಿನಿಂದ ಬಳಲುತ್ತಿದ್ದು, ಇದು ನ್ಯೂಜಿಲ್ಯಾಂಡ್ ನ ಜನಸಂಖ್ಯೆಗೆ ಸಮಾನವಾಗಿದೆ ಎಂದು ತಿಳಿದುಬಂದಿದೆ.
ಇದೀಗ ಈ ವೈರಸ್ ಸಣ್ಣಪುಟ್ಟ ರಾಷ್ಟ್ರಗಳಲ್ಲೂ ಹರಡುತ್ತಿದ್ದು ಈ ಕುರಿತು ವಿಶ‍್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಅಮೆರಿಕಾದಲ್ಲಿ 15 ಲಕ್ಷಕ್ಕಿಂತಲೂ ಹೆಚ್ಚು ಸೊಂಕು ಪೀಡಿತರಿದ್ದು, 94 ಸಾವಿರ ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ರಷ್ಯಾದಲ್ಲೂ 3 ಲಕ್ಷ ಮಂದಿ ವೈರಾಣುವಿಗೆ ತುತ್ತಾಗಿದ್ದು ಇಲ್ಲಿ ಮರಣ ಪ್ರಮಾಣ ಕಡಿಮೆಯಿದೆ. ಬ್ರೆಜಿಲ್,ಸ್ಪೇನ್, ಯುಕೆ, ಇಟಲಿಯಲ್ಲೂ ಕೂಡ ಕೋವಿಡ್ 19 ಕುರಿತ ಆತಂಕ ದಿನೇ ದಿನೇ ಹೆಚ್ಚಾಗುತ್ತಿದೆ.