Advertisement

31ರಿಂದ ಸಿ40 ಸಿಟೀಸ್‌ ಜಾಗತಿಕ ಸಮ್ಮೇಳನ

11:43 AM Jul 28, 2018 | |

ಬೆಂಗಳೂರು: ವಾಯು ಮಾಲಿನ್ಯ ನಿಯಂತ್ರಣ ಕ್ರಮಗಳ ವಿನಿಮಯಕ್ಕಾಗಿ ಬೆಂಗಳೂರು ಹಾಗೂ ಲಂಡನ್‌ ಮಹಾನಗರಗಳು ಜಂಟಿಯಾಗಿ ಆಯೋಜಿಸಿರುವ “ಸಿ40 ಸಿಟೀಸ್‌ ಜಾಗತಿಕ ಸಮ್ಮೇಳನ’ ಜು.31ರಿಂದ ಆ.2ರವರೆಗೆ ನಗರದ ಹೋಟೆಲೊಂದರಲ್ಲಿ ನಡೆಯಲಿದೆ.

Advertisement

ನಗರೀಕರಣದಿಂದಾಗಿ ಜಗತ್ತಿನಾದ್ಯಂತ ಹೆಚ್ಚುತ್ತಿರುವ ವಾಯು ಮಾಲಿನ್ಯ ಪ್ರಮಾಣ ನಿಯಂತ್ರಿಸುವ ಉದ್ದೇಶದಿಂದ “ಸಿ40 ಸಿಟೀಸ್‌ ಲೀಡರ್‌ಶಿಪ್‌ ಗ್ರೂಪ್‌’ ರಚಿಸಲಾಗಿದ್ದು, ಗ್ರೂಪ್‌ನ ಮುಂದಾಳತ್ವವನ್ನು ಬಿಬಿಎಂಪಿ ಹಾಗೂ ಲಂಡನ್‌ ವಹಿಸಿಕೊಂಡಿವೆ. ಅದರಂತೆ ಬೆಂಗಳೂರಿನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಗ್ರೂಪ್‌ನ ಸದಸ್ಯ ನಗರಗಳು ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡಿರುವ ಪರಿಹಾರ ಕ್ರಮಗಳ ವಿನಿಮಯವಾಗಲಿದೆ.

ಮಾಲಿನ್ಯ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ವಿಶ್ವದ 96 ನಗರಗಳ ಸಿ40 ಸಿಟೀಸ್‌ ಸದ್ಯರಾಗಿದ್ದು, ಮೂರು ದಿನಗಳ ಜಾಗತಿಕ ಸಮ್ಮೇಳನದಲ್ಲಿ ವಿಶ್ವದ ಪ್ರಮುಖ 10 ನಗರಗಳ ಮೇಯರ್‌, ಉಪಮೇಯರ್‌ ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಈ ಕುರಿತು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಮೇಯರ್‌ ಆರ್‌.ಸಂಪತ್‌ರಾಜ್‌ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ನೇತೃತ್ವದಲ್ಲಿ ಸಮ್ಮೇಳನ ನಡೆಯುತ್ತಿದ್ದು, ಲಂಡನ್‌, ಜೊಹಾನ್ಸ್‌ಬರ್ಗ್‌, ಬರ್ಲಿನ್‌ ಸೇರಿ 10 ನಗರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಳಿದ ಎರಡು ದಿನಗಳು ತಜ್ಞರು ತಮ್ಮ ವಿಷಯಗಳನ್ನು ಮಂಡಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಆಡಳಿತ ಪಕ್ಷ ನಾಯಕ ಎಂ.ಶಿವರಾಜು, ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ, ಸಿ40 ಸಿಟೀಸ್‌ ಪ್ರತಿನಿಧಿ ಸಂಜಯ್‌ ಶ್ರೀಧರ್‌ ಉಪಸ್ಥಿತರಿದ್ದರು.

Advertisement

ಸಮ್ಮೇಳನದಲ್ಲಿ ಭಾಗವಹಿಸುವ ನಗರಗಳು: ಲಂಡನ್‌, ಬರ್ಲಿನ್‌, ಜೊಹಾನ್ಸ್‌ಬರ್ಗ್‌, ಸಾಲ್‌ವೆಡರ್‌, ಪೋರ್ಟ್‌ಲ್ಯಾಂಡ್‌, ಕ್ಯೂಟೋ, ಲಾಸ್‌ ಎಂಜಲೀಸ್‌, ವಾರ್ವಾ, ಕ್ಯೂಸಾನ್‌ಸಿಟಿ, ಜರಸುಲೇಂ. 

ಸಮ್ಮೇಳನದ ನಂತರ ಮುಂದೇನು?: ಸಿ40 ಸಿಟೀಸ್‌ ಜಾಗತಿಕ ಸಮ್ಮೇಳನದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕೇಳಿಬರುವ ಸಲಹೆಗಳನ್ನು ಬೆಂಗಳೂರು ಹಾಗೂ ಲಂಡನ್‌ ಮಹಾನಗರ ಪಾಲಿಕೆಗಳು ಪಟ್ಟಿ ಮಾಡಿಕೊಳ್ಳಲಿವೆ. ನಂತರದಲ್ಲಿ ಬೆಂಗಳೂರಿನಲ್ಲಿ ಹೆಚ್ಚು ಮಾಲಿನ್ಯವಿರುವ 1 ಸಾವಿರ ಪ್ರದೇಶಗಳನ್ನು ಗುರುತಿಸಿ ಆ ಭಾಗಗಳಲ್ಲಿ ಮಾಲಿನ್ಯ ಮಾಪಕಗಳನ್ನು ಅಳವಡಿಸಲಾಗುತ್ತದೆ.

ಮಾಪಕಗಳು, ಯಂತ್ರಗಳು, ತಂತ್ರಜ್ಞಾನ ಸೇರಿದಂತೆ ವಿವಿಧ ಉಪಕರಣಗಳ ಖರೀದಿಗೆ ಸಿ40 ಸಿಟೀಸ್‌ ಲೀಡರ್‌ಶಿಪ್‌ ಗ್ರೂಪ್‌ನಿಂದ ಪಾಲಿಕೆಗೆ ಅಗತ್ಯ ಹಣಕಾಸು ನೆರವು ದೊರೆಯಲಿದ್ದು, ಮಾಲಿನ್ಯ ನಿಯಂತ್ರಣಕ್ಕೆ ತಜ್ಞರು ಹಲವು ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಅವು ಇಲ್ಲಿ ಯಶಸ್ವಿಯಾದರೆ “ಸಿ40 ಸಿಟೀಸ್‌ ಲೀಡರ್‌ಶಿಪ್‌ ಗ್ರೂಪ್‌’ನ ಉಳಿದ ನಗರಗಳಲ್ಲೂ ಅದೇ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತದೆ.

ನೆಟ್‌ವರ್ಕ್‌ನಲ್ಲಿರುವ ದೇಶದ ಇತರ ನಗರಗಳು: ಬೆಂಗಳೂರು ಮಾತ್ರವಲ್ಲದೆ ಚೆನ್ನೈ, ದೆಹಲಿ, ಜೈಪುರ, ಕೊಲ್ಕತ್ತಾ ಹಾಗೂ ಮುಂಬೈ ನಗರಗಳು ಸಿ40 ಏರ್‌ ಕ್ವಾಲಿಟಿ ನೆಟ್‌ವರ್ಕ್‌ನಲ್ಲಿ ಸ್ಥಾನ ಪಡೆದಿವೆಯಾದರೂ, ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಸಮಾವೇಶನದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿಲ್ಲ.

ನೆಟ್‌ವರ್ಕ್‌ ಉದ್ದೇಶವೇನು?: ಜಾಗತಿಕ ಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ನೆಟ್‌ವರ್ಕ್‌ನ ಪ್ರಮುಖ ಉದ್ದೇಶವಾಗಿದೆ. ಸಿ40 ಸದಸ್ಯ ನಗರಗಲ್ಲಿನ ಮಾಲಿನ್ಯ ಸಮಸ್ಯೆಗಳ ಮೇಲೆ ಗಮನಹರಿಸುವುದು,

ಮಾಲಿನ್ಯ ಪ್ರಮಾಣ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳನ್ನು ಸೂಚಿಸುವುದು, ಸದಸ್ಯ ನಗರಗಳು ಪಾಲಿಸುತ್ತಿರುವ ಉತ್ತಮ ಮಾಲಿನ್ಯ ನಿಯಂತ್ರಣ ಮಾದರಿಗಳನ್ನು ಇತರೆ ನಗರಗಳು ಅನುಸರಿಸಲು ಪ್ರೋತ್ಸಾಹಿಸುವ ಮೂಲಕ ಮಾಲಿನ್ಯ ಪ್ರಮಾಣ ಕಡಿಮೆಗೊಳಿಸುವತ್ತ ನೆಟ್‌ವರ್ಕ್‌ ಕಾರ್ಯಕ್ರಮ ರೂಪಿಸಲಿದೆ.

ಪ್ರಸ್ತುತ ನಗರದಲ್ಲಿ ಮಾಲಿನ್ಯ ಪ್ರಮಾಣ ನಿಯಂತ್ರಣದಲ್ಲಿದೆ. ನಮ್ಮ ಮೆಟ್ರೋ ಸಂಚರಿಸುವ ಮಾರ್ಗದಲ್ಲಿ ಶೇ.13ರಷ್ಟು ಮಾಲಿನ್ಯ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಮಾಲಿನ್ಯ ಹೆಚ್ಚುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ಅಗತ್ಯ.
-ಲಕ್ಷ್ಮಣ್‌, ಅಧ್ಯಕ್ಷರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 

ಸಂಚಾರ ಪೊಲೀಸರ ಅನುಕೂಲಕ್ಕಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ 200 ಕಡೆ ಹವಾನಿಯಂತ್ರಿತ ಚೌಕಿ ನಿರ್ಮಿಸಲು ಟೆಂಡರ್‌ ಆಹ್ವಾನಿಸಲಾಗಿದೆ. ಸಂಚಾರ ಪೊಲೀಸರಿಗೆ ಅತ್ಯಾಧುನಿಕ ಮಾಸ್ಕ್ ನೀಡುವ ಉದ್ದೇಶವಿದೆ.
-ಆರ್‌.ಸಂಪತ್‌ರಾಜ್‌, ಮೇಯರ್‌ 

ನಗರದ 198 ವಾರ್ಡ್‌ಗಳಲ್ಲಿ ಮಾಲಿನ್ಯ ಅಳತೆ ಘಟಕ ಹಾಗೂ ಡಿಜಿಟಲ್‌ ಫ‌ಲಕ ಅಳವಡಿಸಲು ಬಜೆಟ್‌ನಲ್ಲಿ 20 ಕೋಟಿ ರೂ. ಮೀಸಲಿಡಲಾಗಿದ್ದು, ಶೀಘ್ರ ಯೋಜನೆ ಜಾರಿಗೆ ಕ್ರಮಕೈಗೊಳ್ಳಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಪಾಲಿಕೆ ಆಯುಕ್ತ

ವಾಯುಮಾಲಿನ್ಯ; ಯಾರ ಪಾಲು ಎಷ್ಟು? 
-ವಾಹನಗಳು    ಶೇ.42
-ರಸ್ತೆ ಧೂಳು    ಶೇ.20
-ಕಟ್ಟಡ ನಿರ್ಮಾಣ-ಕೆಡವುದರಿಂದ    ಶೇ.16
-ಡಿ.ಜಿ.ಸೆಟ್‌ಗಳಿಂದ    ಶೇ.7
-ಕೈಗಾರಿಕೆಗಳಿಂದ    ಶೇ.14

Advertisement

Udayavani is now on Telegram. Click here to join our channel and stay updated with the latest news.

Next