ಬೆಂಗಳೂರು: ಶೀಘ್ರದಲ್ಲೇ ಬೆಂಗಳೂರಿಗೆ ಭೇಟಿ ನೀಡಿ, ಕರ್ನಾಟಕದಲ್ಲಿ ಹೂಡಿಕೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾ ಗುವುದು ಎಂದು ಜಾಗತಿಕ ಭದ್ರತೆ ಮತ್ತು ಬಾಹ್ಯಾಕಾಶ ಸಂಸ್ಥೆಯಾದ ಲಾಕ್ಹೀಡ್ ಮಾರ್ಟಿನ್ ಕಂಪನಿಯ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ರಿಚರ್ಡ್ ಆ್ಯಂಬ್ರೋಸ್ ಹೇಳುವ ಮೂಲಕ ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ತೋರಿದ್ದಾರೆ.
ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆಯ ಭಾಗವಾಗಿ ಕರ್ನಾಟಕದಲ್ಲಿ ಬಾಹ್ಯಾಕಾಶ ಹಾಗೂ ಭದ್ರತಾ ವ್ಯವಸ್ಥೆಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಿಚರ್ಡ್ ಆ್ಯಂಬ್ರೋಸ್ ಅವರಿಗೆ ಮಾಹಿತಿ ನೀಡಿದರು. ಮುಖ್ಯವಾಗಿ ಮುಂಚೂಣಿ 500 ಪ್ರತಿಷ್ಠಿತ ಕಂಪನಿಗಳ ಪೈಕಿ 400 ಕಂಪನಿಗಳು ಕರ್ನಾಟಕದಲ್ಲಿ ಅಸ್ತಿತ್ವ ಹೊಂದಿವೆ. ಹಾಗಾಗಿ, ಲಾಕ್ಹೀಡ್ ಮಾರ್ಟಿನ್ ಕಂಪನಿಯು ಹೂಡಿಕೆ ಮಾಡಲು ಪೂರಕ ವಾತಾವರಣ ರಾಜ್ಯದಲ್ಲಿದೆ ಎಂದು ಮಾಹಿತಿ ನೀಡಿದರು.
ಇದಕ್ಕೆ ದನಿಗೂಡಿಸಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಬಾಹ್ಯಾಕಾಶ ಸಂಬಂಧಿತ ಕೈಗಾರಿಕೆಗಳು ಹಾಗೂ ಮಲ್ಟಿಕೋರ್ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಉತ್ತಮ ವಾತಾವರಣವನ್ನು ಕರ್ನಾಟಕ ಹೊಂದಿದೆ. ಲಾಕ್ಹೀಡ್ ಮಾರ್ಟಿನ್ ಕಂಪನಿಯು ರಾಜ್ಯದಲ್ಲಿ ಹೂಡಿಕೆ ಮಾಡುವ ಮೂಲಕ ರಾಜ್ಯದಲ್ಲಿನ ಕೈಗಾರಿಕಾ ಸಾಮರ್ಥಯ ವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಜಾಗತಿಕ ಆಟೋಮೇಟಿವ್ ಭಾಗಗಳ ತಯಾರಿಕಾ ಕಂಪನಿ ಡೆನ್ಸೊ ಸಂಸ್ಥೆಯ ಉಪಾಧ್ಯಕ್ಷ ಹಿರೋಯುಕಿ ವಕ ಬಸಿ ಅವರು ಕರ್ನಾಟಕದ ನಿಯೋಗದೊಂದಿಗೆ ಚರ್ಚಿಸಿ ದರು. ದೆಹಲಿಯಲ್ಲಿ ತಮ್ಮ ಕಂಪನಿಯು ಶ್ರೇಷ್ಠತಾ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಿದೆ. ಶೀಘ್ರವೇ ಬೆಂಗಳೂರಿಗೆ ಭೇಟಿ ನೀಡಿ, ದಕ್ಷಿಣ ಭಾರತಕ್ಕೆ ತಮ್ಮ ಸಂಸ್ಥೆಯನ್ನು ವಿಸ್ತರಿಸುವ ಬಗ್ಗೆ ಪರಿಶೀಲಿಸುವುದಾಗಿ ಹೇಳಿರುವುದು ಆಶಾದಾಯಕ ವಾಗಿದೆ. ಸದ್ಯ ಡೆನ್ಸೊ ಸಂಸ್ಥೆ ಕಿರ್ಲೋಸ್ಕರ್ ಕಂಪನಿಯ ಸಹಯೋಗದಲ್ಲಿ ನೆಲಮಂಗಲದಲ್ಲಿ 429 ನೌಕರರಿರುವ ಘಟಕ ಹೊಂದಿದೆ.
ಮಧುಮೇಹಿಗಳಿಗೆ ಕಡಿಮೆ ದರದಲ್ಲಿ ಔಷಧಿ – ಚರ್ಚೆ: ಮಧುಮೇಹದಿಂದ ಬಳಲುತ್ತಿರುವವರಿಗೆ ಆರೋಗ್ಯ ಇಲಾಖೆ ಮುಖಾಂತರವೇ ಸುಲಭ ದರದಲ್ಲಿ ಔಷಧಿ ಪೂರೈಕೆ ಮಾಡಲು ಡ್ಯಾನಿಷ್‌ನ ಪ್ರತಿಷ್ಠಿತ ಔಷಧ ತಯಾರಿಕಾ ಕಂಪನಿ ನೋವೋ ನಾರ್ಡಿಸ್ಕ್ ಆಸಕ್ತಿ ತೋರಿದೆ. ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸುವ ಆಸಕ್ತಿ ವ್ಯಕ್ತಪಡಿಸಿದ ನೋವೋ ನಾರ್ಡಿಸ್ಕ್ ಅಧ್ಯಕ್ಷರಾದ ಸಿಇಒ ಫ್ರುಯರ್ ಗಾರ್ಡ್ ಜಾರ್ಜೆನ್ಸನ್, ನಾನಾ ಹಂತದ ಮಧುಮೇಹ ಸಮಸ್ಯೆಯಿರುವ ರೋಗಿಗಳಿಗೆ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಸುಲಭ ದರದಲ್ಲಿ ಔಷಧ ಪೂರೈಕೆ ಮಾಡುವುದಲ್ಲದೆ, ಸಮಸ್ಯೆಯನ್ನು ನಿಯಂತ್ರಿಸಲು ಹಾಗೂ ತಡೆಗಟ್ಟುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಯಡಿಯೂರಪ್ಪ, ಮಧುಮೇಹ ಸಮಸ್ಯೆಯನ್ನು ನಿಯಂತ್ರಿಸುವ ಕಾರ್ಯದಲ್ಲಿ ಕಂಪನಿಯ ಸಹಕಾರ ಪಡೆಯಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಮಾತನಾಡಿ, ಔಷಧ ಖರೀದಿಸಲು ಅಶಕ್ತರಾದ ಬಡ ಮಧುಮೇಹಿ ರೋಗಿಗಳಿಗೆ ನೆರವಾಗುವ ಸಂಬಂಧ ಸಂಸ್ಥೆಯ ತಜ್ಞರೊಂದಿಗೆ ಸಮಾಲೋ ಚನೆ ನಡೆಸಲಾಗುವುದು ಎಂದು ಹೇಳಿದರು.