Advertisement
ತೊಂಬತ್ತರ ದಶಕದಲ್ಲಿ ಸೋವಿಯತ್ ರಶ್ಯಾದ ವಿಘಟನೆಯೊಂದಿಗೆ ಅಮೆರಿಕ ಮತ್ತು ಸೋವಿಯೆತ್ ರಶ್ಯಾ ನಡುವಣ ಶೀತಲ ಯುದ್ಧ ಸಮಾಪ್ತಗೊಂಡಾಗ ಬಹುಧ್ರುವೀಯ ವಿಶ್ವ ವ್ಯವ ಸ್ಥೆಯ ಹೊಸ ಆಶಾಕಿರಣ ಮೂಡಿತ್ತು. ಜಾಗತಿಕ ವ್ಯವಹಾರಗಳಲ್ಲಿ ವಿಶ್ವ ಸಂಸ್ಥೆ ಮತ್ತಷ್ಟು ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸ ಬಹುದೆಂದು ಆಶಿಸಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಮೆರಿಕ, ರಶ್ಯಾ, ಚೀನಾ ಮೊದಲಾದ ಶಕ್ತ ರಾಷ್ಟ್ರಗಳ ನಡುವೆ ಒಂದಲ್ಲಾ ಒಂದು ಕಾರಣದಿಂದ ಹೆಚ್ಚುತ್ತಿರುವ ಹಿತಾಸಕ್ತಿ ಸಂಘರ್ಷ ಜಗತ್ತಿನಾದ್ಯಂತ ಅಶಾಂತತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅಫಘಾನಿ ಸ್ಥಾನ, ಇರಾಕ್, ಸಿರಿಯಾ ಮತ್ತು ಇರಾನ್ ಮೊದಲಾದ ದೇಶಗಳ ಆಂತರಿಕ ಸಮಸ್ಯೆಗಳ ಕುರಿತಂತೆ ವಿಶ್ವದ ಬಲಾಡ್ಯ ದೇಶಗಳ ನಡುವಿನ ಭಿನ್ನಾಭಿಪ್ರಾಯ ಭಾರತದಂತಹ ಅಭಿವೃದ್ಧಿಶೀಲ ದೇಶಗಳನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ. ವಿಶ್ವದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸ ಬೇಕಾದ ವಿಶ್ವಸಂಸ್ಥೆ ಅಸಹಾಯಕವಾಗಿ ಕೈಚೆಲ್ಲಿ ಕುಳಿತಿರುವಂತೆ ಕಾಣುತ್ತಿದೆ. ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ… ಟ್ರಂಪ್ ಅವರ ಇರಾನ್ ಮತ್ತು ರಶ್ಯಾದ ಮೇಲೆ ವಿಧಿಸಿದ ಏಕಪಕ್ಷೀಯ ಆರ್ಥಿಕ ಪ್ರತಿಬಂಧಗಳು, ಚೀನಾದೊಂದಿಗಿನ ವ್ಯಾಪಾರ ಸಮರ ಮೊದಲಾದ ವಿಶ್ವ ವಿದ್ಯಮಾನಗಳು ವಿಶ್ವಸಂಸ್ಥೆಯನ್ನು ಪ್ರಭಾವಹೀನ ಸಂಸ್ಥೆಯಾಗಿಸಿದೆ.
Related Articles
ಇನ್ನೊಂದೆಡೆ ತನ್ನ ದೇಶದ ಆಂತರಿಕ ವ್ಯವಹಾರಗಳಲ್ಲಿ ರಶ್ಯಾ ಮತ್ತು ಚೀನಾ ಮೂಗು ತೂರಿಸುತ್ತಿದೆ ಎನ್ನುವುದು ಅಮೆರಿಕದ ಆರೋಪ. ಆ ಕಾರಣದಿಂದಲೇ ಅದು ರಶ್ಯಾದ ಮಿಲಿಟರಿ ಉತ್ಪನ್ನಗಳನ್ನು ಖರೀದಿಸುವ ಭಾರತ ಮತ್ತು ಅನ್ಯ ದೇಶಗಳ ಮೇಲೆ ಪ್ರತಿಬಂಧ ವಿಧಿಸುವ ಎಚ್ಚರಿಕೆ ನೀಡಿದೆ. ಸೋವಿಯೆತ್ ಕಾಲದಿಂದಲೂ ನೆಚ್ಚಿನ ಸಾಮರಿಕ ಮಿತ್ರನಾಗಿರುವ ರಶ್ಯಾ ಭಾರತಕ್ಕೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಲೇ ಬಂದಿದೆ. ದೇಶದ ರಕ್ಷಣೆಯ ಹಿತದೃಷ್ಟಿಯಿಂದ ಅಭೇಧ್ಯ ಎನಿಸಿರುವ ರಶ್ಯಾದ ಖ-400 ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ಭಾರತ ಮುಂದಾಗಿದೆ. ಚೀನಾ ಮತ್ತು ಪಾಕಿಸ್ಥಾನದ ಕಡೆಯಿಂದ ನಿರಂತರ ಯುದ್ಧ ಭೀತಿ ಎದುರಿಸುತ್ತಿರುವ ಭಾರತ ತನ್ನ ರಕ್ಷಣಾ ಸಿದ್ಧತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವಂತಿಲ್ಲ. ರಶ್ಯಾದಿಂದ ಯುದ್ಧ ಸಾಮಾಗ್ರಿ ಖರೀದಿಸದಂತೆ ಹೆಚ್ಚುತ್ತಿರುವ ಅಮೆರಿಕದ ಒತ್ತಡದಿಂದ ಭಾರತ ಇಕ್ಕಟ್ಟಿಗೆ ಸಿಲುಕಿದೆ. ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಾಬಲ್ಯವನ್ನು ಮುರಿಯಲು ಭಾರತದ ಅಗತ್ಯ ಮನಗಂಡ ಅಮೆರಿಕದ ಪೂರ್ವ ಅಧ್ಯಕ್ಷರುಗಳು ಭಾರತದ ಜತೆ ವಿಶೇಷ ಸಂಬಂಧ ಸ್ಥಾಪಿಸಲು ಶ್ರಮವಹಿಸಿದ್ದರಾದರೂ ಪ್ರಸ್ತುತ ಅಧ್ಯಕ್ಷ ಡೊನಾಲ್ಡ… ಟ್ರಂಪ್ ತನ್ನ ಹಠಮಾರಿ ಧೋರಣೆಯಿಂದ ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ರಶ್ಯಾ ಮತ್ತು ಅಮೆರಿಕ ಎರಡನ್ನೂ ನಿಭಾಯಿಸುವ ಸಂಕಷ್ಟ ಭಾರತಕ್ಕೆ ಎದುರಾಗಿದೆ.
Advertisement
ಇವೆಲ್ಲವುದರ ನಡುವೆ ತಂತ್ರಜ್ಞಾನದಲ್ಲಿ ಮುಂದುವರೆದಿರುವ ಏಷ್ಯಾದ ಶಕ್ತಿಶಾಲಿ ರಾಷ್ಟ್ರ ಜಪಾನ್ ಭಾರತಕ್ಕೆ ನಿಕಟವಾಗುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಅಮೆರಿಕದ ರಕ್ಷಣಾ ಸುರಕ್ಷತೆಯ ಖಾತರಿಯನ್ನು ಪಡೆದಿರುವ ಜಪಾನ್ ಡೋನಾಲ್ಡ… ಟ್ರಂಪ್ ಅವರ ಅಧ್ಯಕ್ಷತೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಅಸುರಕ್ಷತಾ ಭಾವವನ್ನು ಹೊಂದಿದೆ ಎಂದರೆ ತಪ್ಪಾಗದು. ಚೀನಾದ ಆಕ್ರಮಣಕಾರಿ ಮನೋಭಾವ ಮತ್ತು ಪರಮ ಮಿತ್ರ ಅಮೆರಿಕದ ಅನೇಕ ನಕಾರಾತ್ಮಕ ನಿರ್ಣಯಗಳು ಜಪಾನನ್ನು ನಿರಾಸೆಗೊಳಿಸಿದೆ. ಇತ್ತೀಚೆಗೆ ಜಪಾನ್ ಮತ್ತು ಭಾರತ 75 ಬಿಲಿಯನ್ ಡಾಲರ್ ಕರೆನ್ಸಿ ಸ್ವಾಪ್ ಒಪ್ಪಂದ ಮಾಡಿಕೊಂಡಿದೆ. ಇದು ಡಾಲರ್ ರಹಿತ ದ್ವಿಪಕ್ಷೀಯ ವ್ಯಾಪಾರಕ್ಕೆ ನೆರವಾಗುವುದು. ಅದೇ ರೀತಿಯಲ್ಲಿ ರಶ್ಯಾದಿಂದ ಖರೀದಿಸಲಾಗುತ್ತಿರುವ ಖ-400 ಕ್ಷಿಪಣಿಗಳಿಗೂ ಕೂಡಾ ರಶ್ಯಾದ ಕರೆನ್ಸಿಯಾದ ರೂಬಲ್‌ನಲ್ಲಿ ಹಣ ಪಾವತಿಸುವ ವ್ಯವಸ್ಥೆ, ಇರಾನ್‌ನ ತೈಲೋತ್ಪನ್ನಗಳಿಗೆ ರೂಪಾಯಿ ಪಾವತಿಯಿಂದ ಡಾಲರ್ ಎದುರು ಬಲಹೀನವಾಗುತ್ತಿರುವ ರೂಪಾಯಿ ಸ್ಥಿತಿ ಕೊಂಚ ಸುಧಾರಿಸಬಹುದೆಂದು ಆಶಿಸಬಹುದು. ತನ್ನ ದೇಶದ ಹಿತ ಕಾಪಾಡಲು ಹೊಸ ಹೊಸ ನಿಯಮ ಜಾರಿಗೆ ತರುವ ಘೋಷಣೆ ಮಾಡುತ್ತಿರುವ ಟ್ರಂಪ್ ನೀತಿಯಿಂದಾಗಿ ಭಾರತ-ಅಮೆರಿಕ ಬಾಂಧವ್ಯ ಹದಗೆಡುತ್ತಿದೆ. ಭಾರತವನ್ನು ಸುಂಕದ ರಾಜ ಎಂದು ಜರೆದಿರುವ ಟ್ರಂಪ್ ಹಲವು ಭಾರತೀಯ ಉತ್ಪನ್ನಗಳಿಗೆ ನೀಡಿರುವ ಸುಂಕ ರಿಯಾಯತಿಯನ್ನು ಹಿಂತೆಗೆದುಕೊಂಡಿದ್ದಾರೆ. ರಶ್ಯಾದ ಮಿಲಿಟರಿ ಆಮದನ್ನು ಕಡಿಮೆ ಮಾಡುವಂತೆ ಭಾರತದ ಮೇಲೆ ಅದು ನಿರಂತರ ಒತ್ತಡ ಹೇರುತ್ತಿದೆ. ಶೀತ ಯುದ್ಧ ಕಾಲದಿಂದಲೂ ಮಿಲಿಟರಿ ಉಪಕರಣಗಳ ತಂತ್ರಜ್ಞಾನ ವರ್ಗಾವಣೆಯಂತಹ ವಿಷಯಗಳಲ್ಲಿ ಭಾರತದೊಂದಿಗೆ ಉದಾರತೆ ಮೆರೆಯುತ್ತಾ ಬಂದಿರುವ ವಿಶ್ವಸನೀಯ ಮಿತ್ರ ರಶ್ಯಾವನ್ನು ಕಡೆಗಣಿಸದೆ ಅಮೆರಿಕದೊಂದಿಗಿನ ಮಿತ್ರತ್ವವನ್ನು ಮುಂದುವರೆಸಿಕೊಂಡು ಹೋಗಬೇಕಾದ ಚತುರ ಮತ್ತು ದೃಢ ನಾಯಕತ್ವ ಭಾರತ ತೋರಬೇಕಾಗಿದೆ. ಈ ದಿಸೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ದೇಶದ ಭವಿಷ್ಯದ ದೃಷ್ಟಿಯಿಂದ ಮಹತ್ವಪೂರ್ಣ ಎಂದರೆ ತಪ್ಪಾಗಲಾಗದು. ತನ್ನ ಗದ್ದುಗೆ ಉಳಿಸಿಕೊಳ್ಳಲು ಹರಸಾಹಸ ಪಡುವ ಸಮ್ಮಿಶ್ರ ಸರ್ಕಾರದ ಮುಖ್ಯಸ್ಥ ಇಂತಹ ಜವಾಬ್ದಾರಿಯನ್ನು ನಿರ್ವಹಿಸಬಲ್ಲನೇ ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕಾಗಿದೆ. ಬೈಂದೂರು ಚಂದ್ರಶೇಖರ ನಾವಡ