ಮಣಿಪಾಲ: ರೀಗಾ ಇದು ಲಾಟ್ಟಿಯಾ ಎಂಬ ಯುರೋಪಿನ ಪುಟ್ಟ ದೇಶದ ರಾಜಧಾನಿ. ಅಲ್ಲಿನ ಆಡಳಿತ ಭಾಷೆ ಲಾಟ್ವಿಯನ್ ಇದು ಸಂಸ್ಕೃತ ಭಾಷೆಗೆ ಅತೀ ಸಮೀಪವಾದ ಭಾಷೆಗಳಲ್ಲಿ ಒಂದಾಗಿದೆ. ಈ ದೇಶ ಕಳೆದೆರಡು ದಶಕಗಳ ಹಿಂದೆ ರಷ್ಯಾದಿಂದ ಬೇರ್ಪಟ್ಟು ತನ್ನ ಸ್ವಂತಿಕೆಯನ್ನು ಗುರುತಿಸಿಕೊಂಡು ಯುರೋಪಿಯನ್ ಒಕ್ಕೂಟವನ್ನು ಸೇರಿಕೊಂಡಿದೆ. ನಾನು ಈ ದೇಶಕ್ಕೆ ಮಣಿಪಾಲ್ ವಿಶ್ವವಿದ್ಯಾನಿಲಯದಿಂದ ಎಕ್ಸ್ಚೇಂಜ್ ಸ್ಟೂಡೆಂಟ್ ಆಗಿ ಹೋಗಿದ್ದೆ. ಆ ದೇಶದಲ್ಲಿ ಪ್ರವಾಸ ಕೈಗೊಂಡಾಗ ನನಗೆ ದೊರೆತ ಅನುಭವ ಅನೇಕ. ನಮ್ಮ ಉಡುಪಿ ಜಿಲ್ಲೆಗಿಂತಲೂ ಚಿಕ್ಕದಾದ ಆ ದೇಶದ ಜನಸಂಖ್ಯೆ ಅಂದಾಜು 18 ಲಕ್ಷ. ಅಲ್ಲಿಯ ಜನರಿಗೆ ಅವರ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಅಪಾರ ಪ್ರೀತಿ.
ಮೊದಲನೇ ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಅಪಾರ ಸಂಕಷ್ಟಕ್ಕೆ ಸಿಲುಕಿ ಜರ್ಮನಿಯಿಂದ, ರಷ್ಯಾದಿಂದ ಹಲವಾರು ಆಕ್ರಮಣಗಳಿಗೆ ತುತ್ತಾದರೂ ಇಲ್ಲಿಯ ಜನ ತಮ್ಮ ಸಂಸ್ಕೃತಿಯನ್ನು, ಭಾಷೆಯ ಮೇಲಿನ ಅಭಿಮಾನವನ್ನು ಮರೆಯಲಿಲ್ಲ. ರೀಗಾ “ಡೌಗಾವ” ಎಂಬ ನದಿಯ ತಟದಲ್ಲಿರುವ ಒಂದು ಸುಂದರ ನಗರಿ. ಇದು ಬಾಲ್ಟಿಕ್ ರಾಷ್ಟ್ರಗಳಲ್ಲಿಯೇ ಅತಿ ದೊಡ್ಡ ನಗರ. ರೀಗಾದ ಆರ್ಟ್ ನೊವೇಯೋ ಸೆಂಟರ್ ಯುನೆಸ್ಕೋದ ಹೆರಿಟೇಜ್ ಸೈಟ್ ಆಗಿದೆ.
ರೀಗಾ ಓಲ್ಡ್ ಸಿಟಿಯನ್ನು ಜರ್ಮನ್ ಬಿಷಪ್ ಒಬ್ಬರು ನಿರ್ಮಿಸಿದರು. ರೀಗಾವನ್ನು ಕಾಲ್ನಡಿಗೆಯಲ್ಲಿ ಒಂದೇ ದಿನದಲ್ಲಿ ನೋಡಬಹುದು. ರೀಗಾ ತನ್ನ ಸುಂದರವಾದ ಮರದ ಕಟ್ಟಡಗಳಿಗೆ, ಶಿಲ್ಪಕಲೆಗೆ ಮತ್ತು ಮಧ್ಯಕಾಲೀನ ನಗರಿ ಎಂದು ಹೆಸರುವಾಸಿಯಾಗಿದೆ. ಚಿಕ್ಕದಾದರೂ ಚೊಕ್ಕದಾದ ದೇಶ, ಇರುವ ಪುಟ್ಟ ಪುಟ್ಟ ಪ್ರವಾಸಿತಾಣಗಳನ್ನು ಮನಮೋಹನಗೊಳಿಸುವಂತೆ ಮಾಡಿದ್ದಾರೆ. “ಸಿಗುಲ್ಡ ” ಎಂಬ ಜಾಗದಲ್ಲಿ ರೋಪ್ ಕಾರ್ ಮೂಲಕ ಪ್ರಯಾಣ ಮತ್ತು ಬಂಜೀ ಜಂಪಿಂಗ್ ಮಾಡುವುದು ಒಂದು ರೋಚಕ ಅನುಭವ.
ಅಲ್ಲಿಯ ಜನ ಹೆಚ್ಚು ಮಾತನಾಡುವುದಿಲ್ಲ! ಕಾಡಿನಲ್ಲಿ ಸಿಗುವ ಅಣಬೆಗಳನ್ನು ಆರಿಸಿ ಖಾದ್ಯ ತಯಾರಿಸುವುದು ಅವರ ಸಂಸ್ಕೃತಿಯ ಒಂದು ಭಾಗವಾಗಿದೆ. ಹೌಸ್ ಆಫ್ ಬ್ಲಾಕ್ ಹೆಡ್ಸ್, ಫ್ರೀಡಂ ಮೋನೊಮೆಂಟ್, ಸೇಂಟ್ ಪೀಟರ್ಸ್ ಚರ್ಚ್ ಮುಂತಾದವು ಅಲ್ಲಿಯ ಪ್ರವಾಸಿ ತಾಣಗಳಾಗಿವೆ.
ಅಲ್ಲಿಗೆ ಶೈ೦ಗೇನ್ ವೀಸಾ ಪಡೆದು ಪ್ರಯಾಣಿಸಬಹುದು. ಚಳಿಗಾಲದಲ್ಲಿ ಅಂದಾಜು -20 °C ಉಷ್ಣಾಂಶವಿದ್ದು ಹಿಮದಿಂದ ಇಡೀ ದೇಶವೇ ಆವರಿಸಿರುತ್ತದೆ, ಬೇಸಿಗೆಯಲ್ಲಿ ಅಂದಾಜು 22 °C ಉಷ್ಣಾಂಶ ಇರುತ್ತದೆ. ದೇಶದಲ್ಲೆಡೆ ಪ್ರಯಾಣಿಸಲು ಬಸ್, ಟ್ರೈನ್ ಮತ್ತು ಟ್ರ್ಯಾಮ್ ಗಳ ವ್ಯವಸ್ಥೆ ಇದೆ, ಸೈಕಲ್ ಏರಿ ಕೂಡ ಪ್ರಯಾಣಿಸಬಹುದು.
-ಅಭೀಪ್ ವಿ ಸುಧಾಕರ್
ತೀರ್ಥಹಳ್ಳಿ