ಡೊಂಬಿವಲಿ, ನ. 10: ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿಯ ವತಿಯಿಂದ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ರಸಪ್ರಶ್ನೆ ಕಾರ್ಯಕ್ರಮ ನ. 3ರಂದು ಡೊಂಬಿವಲಿ ಪೂರ್ವದ ಗಣೇಶ ಮಂದಿರದ ವಕ್ರತುಂಡ ಸಭಾಗೃಹದಲ್ಲಿ ಜರಗಿತು.
ಸಂಸ್ಥೆಯ ಅಧ್ಯಕ್ಷರಾದ ಇಂ. ಸತೀಶ್ ಆಲಗೂರ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳಲ್ಲಿ ಸಾಮಾನ್ಯ ಜ್ಞಾನ ವೃದ್ಧಿಯಾಗಲು ಇಂತಹ ಕಾರ್ಯಕ್ರಮಗಳ ಆವಶ್ಯಕತೆ ಇದೆ ಎಂದು ಹೇಳಿದ ಇಂ. ಸತೀಶ್ ಆಲಗೂರ ಅವರು, ಮಹಾನಗರ ಕನ್ನಡ ಸಂಸ್ಥೆ ಮುಂಬರುವ ದಿನಗಳಲ್ಲಿ ಇನ್ನಷ್ಟು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ನುಡಿದು, ಸರ್ವರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದರು.
ರಸಪ್ರಶ್ನೆ ಸ್ಪರ್ಧೆಯು ಆರು ವಿಭಾಗಗಳಲ್ಲಿ ನಡೆಯಿತು. ಹರ್ಷವರ್ಧನ ತಂಡ ಪ್ರಥಮ ಬಹುಮಾನ ಪಡೆದರೆ, ಕಿತ್ತೂರು ಚೆನ್ನಮ್ಮ ತಂಡ ದ್ವಿತೀಯ ಹಾಗೂ ಛತ್ರಪತಿ ಶಿವಾಜಿ ತಂಡ ತೃತೀಯ ಬಹುಮಾನ ಪಡೆಯಿತು. ವಿಜೇತ ಸ್ಪರ್ಧಿಗಳಿಗೆ ಸಂಸ್ಥೆಯ ವತಿಯಿಂದ ನ. 17ರಂದು ನಡೆಯಲಿವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿ ಎಸ್. ಎನ್. ಸೋಮಾ ಅವರು ತಿಳಿಸಿದರು.
ವೇದಿಕೆಯಲ್ಲಿ ಗಣ್ಯರಾದ ಇಂ. ಸತೀಶ್ ಆಲಗೂರ, ಎಸ್. ಎನ್. ಸೋಮಾ, ಮಾ| ಅಮೋಘ… ಹೊಸನಗರ, ದತ್ತಾತ್ರೇಯ ದೇಶಪಾಂಡೆ, ಎನ್. ವಿ. ಕುಲಕರ್ಣಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವಿದ್ಯಾವತಿ ಆಲಗೂರ ಪ್ರಾರ್ಥನೆಗೈದರು. ಎಸ್. ಎನ್. ಸೋಮಾ ಸ್ವಾಗತಿಸಿದರು. ಎಸ್. ವಿ. ಕುಲಕರ್ಣಿ ಮತ್ತು ದತ್ತಾತ್ರೇಯ ದೇಶಪಾಂಡೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸೋಮಶೇಖರ ಮಸಳಿ, ಪಿ. ಎಂ. ಜೋಶಿ, ಮಾಧುರಿಕಾ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ-ವರದಿ: ಗುರುರಾಜ ಪೋತನೀಸ್