Advertisement

ಏಪ್ರಿಲ್‌ ಕೊನೆಯವಾರದವರೆಗೆ ನೀರು ಕೊಡಿ: ಅರವಿಂದ ಕುಲಕರ್ಣಿ

03:22 PM Mar 11, 2022 | Shwetha M |

ಆಲಮಟ್ಟಿ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಮಳೆಯು ಸಕಾಲಕ್ಕೆ ಸಮರ್ಪಕವಾಗಿ ಮಳೆಯಾಗದಿರುದರಿಂದ ಕಾಲುವೆ ನೀರನ್ನು ನಂಬಿ ಬಿತ್ತನೆ ಮಾಡಿದ ರೈತರ ಬೆಳೆಗಳಿಗೆ ಏಪ್ರಿಲ್ ಕೊನೆಯ ವಾರದವರೆಗೆ  ನೀರು ಕೊಡದಿದ್ದರೆ ಬೆಳೆಹಾನಿಯಾಗಲಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.

Advertisement

ಶುಕ್ರವಾರ ಇಲ್ಲಿನ ಕೆಬಿಜೆನ್ನೆಲ್ ಮುಖ್ಯ ಅಭಿಯಂತರರಿಗೆ ಮನವಿ ಅರ್ಪಿಸಿ ಮಾತನಾಡಿದರು.

ಆಲಮಟ್ಟಿ ಲಾಲಬಹದ್ದೂರಶಾಸ್ತ್ರಿ ಜಲಾಶಯ ವ್ಯಾಪ್ತಿಯ ಜಿಲ್ಲೆಗಳಲ್ಲಿ ಹಿಂಗಾರು ಮಳೆಗಳು ಸಕಾಲಕ್ಕೆ ಸಮರ್ಪಕವಾಗಿ ಆಗದಿರುವದರಿಂದ  ರೈತರು ಶಾಸ್ತ್ರಿ ಜಲಾಶಯದ ನೀರನ್ನು ನಂಬಿ ಬಿತ್ತನೆ ಮಾಡಿದ್ದಾರೆ. ಕಾಲುವೆ ನೀರನ್ನು ನಂಬಿ ಬಿತ್ತನೆ ಮಾಡಿದ ಬೆಳೆಗಳು ರೈತರ ಕೈಗೆ ಬರಬೇಕಾದರೆ ಎಪ್ರಿಲ್ ಕೊನೆಯವರೆಗೆ ಕಾಲುವೆಗಳ ಮುಖಾಂತರ ರೈತರ ಜಮೀನಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಸಂಘದವತಿಯಿಂದ ಆಮರಣ ಉಪವಾಸ ಸತ್ಯಾಗ್ರಹವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬೆಂಗಳೂರಿನಲ್ಲಿ ಜಲಸಂಪನ್ಮೂಲ ಇಲಾಖೆಯ ಆಪರ ಕಾರ್ಯದರ್ಶಿ ರಾಕೇಶಸಿಂಗ್ ನೇತೃತ್ವದಲ್ಲಿ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯ ವೇಳೆ ಜಲಾಶಯಗಳಲ್ಲಿರುವ ನೀರಿನ ಲಭ್ಯತೆಯ ಆಧಾರದಲ್ಲಿ 2022 ಮಾರ್ಚ್ 17ವರೆಗೆ ಕಾಲುವೆಗಳ ಮೂಲಕ ರೈತರ ಜಮೀನಿಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು  ಸಭೆಯ ನಂತರದ ದಿನಗಳಲ್ಲಿ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದು ಕಳೆದ ವರ್ಷಕ್ಕಿಂತಲೂ ಈ ವರ್ಷ 19ಟಿಎಮ್ ಸಿ ನೀರು ಸಂಗ್ರಹವಿದೆ ಎಂದರು.

ಸಂಗ್ರಹವಿರುವ ನೀರಿನಲ್ಲಿ ಕಾಲುವೆಗಳ ಮೂಲಕ ರೈತರ ಜಮೀನಿಗೆ ನೀರು ಹರಿಸಬೇಕು ಬೇಸಿಗೆಯಲ್ಲಿ ಜನ-ಜಾನುವಾರು ಹಾಗೂ ವನ್ಯಜೀವಿಗಳ ರಕ್ಷಣೆಗೆ ಕಾಲುವೆಗಳ ಮೂಲಕ ಎಲ್ಲ ಕೆರೆಗಳನ್ನು ತುಂಬಿಸಬೇಕು  ಮಾರ್ಚ್ 17ರ ನಂತರ ನೀರು ಬಂದ್ ಮಾಡಬಾರದು ಎಂದು ಹೇಳಿದರು.

Advertisement

ಐಸಿಸಿ ಸಭೆಯಲ್ಲಿ ತೀರ್ಮಾನಿಸಿದಂತೆ ಮಾ. 17ಕ್ಕೆ ನೀರು ಹರಿಸುವದನ್ನು ಬಂದ್ ಮಾಡುವದನ್ನು ಕೈಬಿಟ್ಟು ನೀರು ಹರಿಸುವ ತೀರ್ಮಾನವನ್ನು 3 ದಿನಗಳ ಒಳಗಾಗಿ ತಿಳಿಸದೇ ಇದ್ದರೆ ಸಂಘದವತಿಯಿಂದ ಆಮರಣ ಉಪವಾಸ ಮಾಡಲಾಗುವದು ಎಂದು ಜಿಲ್ಲಾ ಪ್ರಧಾನಕಾರ್ಯದರ್ಶಿ ಅರವಿಂದ ಕುಲಕರ್ಣಿ ಎಚ್ಚರಿಸಿದರು.

ಇದನ್ನೂ ಓದಿ:ರೈತ ಸಮಾವೇಶದಲ್ಲಿ ಚುನಾವಣೆ ರಾಜಕೀಯ ನಿರ್ಧಾರ

ಮುಖ್ಯ ಅಭಿಯಂತರ ಪರವಾಗಿ ಮನವಿ ಸ್ವೀಕರಿಸಿದ ಅಣೆಕಟ್ಟು ವೃತ್ತ ಅಧೀಕ್ಷಕ ಅಭಿಯಂತರ ಡಿಬಸವರಾಜ ಅವರು ತಮ್ಮ ಮನವಿಯನ್ನು ಮುಖ್ಯ ಅಭಿಯಂತರರಿಗೆ ತಲುಪಿಸಲಾಗುವುದು. ರೈತರ ಬೇಡಿಕೆ ಹಾಗೂ ನೀರಿನ ಲಭ್ಯತೆಯ ಬಗ್ಗೆ ಮಾ10ರಂದು ವಿಡಿಯೋ ಕಾನ್ಫರೆನ್ಸ್ ಮ‌ೂಲಕ ನಾಲ್ಕು ವಲಯಗಳ ಮುಖ್ಯ ಅಭಿಯಂತರರ  ಸಭೆಯನ್ನು ಐಸಿಸಿ ಸಮಿತಿಯ ಕಾರ್ಯದರ್ಶಿಗಳು ನಡೆಸಿದ್ದಾರೆ. ಸರ್ಕಾರದ ಆದೇಶದಂತೆ ಮುಂದಿನ ಕ್ರಮಕೈಗೊಳ್ಳಲಾಗುವದು ಎಂದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ಈರಣ್ಣ ದೇವರಗುಡಿ, ರಾಜೇಸಾ ವಾಲಿಕಾರ, ರೇವಪ್ಪ ಪೋಲೇಶಿ, ಬಸಪ್ಪ ಉಪ್ಪಾರ, ಶ್ರೀಶೈಲ ಸಾಸನೂರ, ಗುರಲಿಂಗಪ್ಪ ಪಡಸಲಗಿ, ಶೇಖಪ್ಪ ಸಜ್ಜನ, ಮಲ್ಲಪ್ಪ ಪಡಸಲಗಿ, ಸಿಕಿಂದ್ರಪ್ಪ ಕೊಠಾರ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next